ಪ್ರತಿಭಾವಂತ ಕಬ್ಬಡ್ಡಿ ಆಟಗಾರ ಮನೋಜ್ ನಾಯ್ಕ ಹೃದಯಾಘಾತದಿಂದ ಸಾವು. ಕ್ರೀಡಾ ಪ್ರೇಮಿಗಳ ಕಂಬನಿ.

Source: S O News | By Laxmi Tanaya | Published on 21st September 2021, 8:00 PM | Coastal News |

ಭಟ್ಕಳ: ಉತ್ತರಕನ್ನಡ ಜಿಲ್ಲೆಯ  ಪ್ರಮುಖ ಕಬಡ್ಡಿ ಆಟಗಾರ, ಅತ್ಯುತ್ತಮ ಆಲ್ ರೌಂಡರ್ ಭಟ್ಕಳದ ಮನೋಜ‌ ನಾಯ್ಕ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 31 ವರ್ಷ ವಯಸ್ಸಾಗಿತ್ತು. ಭಟ್ಕಳದ ಪರಶುರಾಮ ಕಬ್ಬಡ್ಡಿ  ತಂಡದ ಪ್ರಮುಖ ಆಟಗಾರರಾಗಿದ್ದ  ಅವರಿಗೆ  ಹಠಾತ್ ಎದೆನೋವು ಕಾಣಿಸಿಕೊಂಡಿತ್ತು.   ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

 ಅವಿವಾಹಿತ ಮನೋಜ್ ನಾಯ್ಕ್ ಅವರ ಹಠಾತ್ ಸಾವು ಅವರ ತಾಯಿ ಸೇರಿದಂತೆ ಅವರ ಮೂವರು ಸಹೋದರಿಯರು ಮತ್ತು ಸಹೋದರನನ್ನು ಆಘಾತಕ್ಕೊಳಪಡಿಸಿದೆ.

ಮನೋಜ್ ಅವರ ನಿಧನದಿಂದಾಗಿ ಭಟ್ಕಳ ಮತ್ತು ಜಿಲ್ಲೆಯ ಕಬಡ್ಡಿ ವಲಯಗಳಲ್ಲಿ ದುಃಖದ ಅಲೆ ಎದ್ದಿದೆ.  ಕಬಡ್ಡಿ ಪ್ರೇಮಿಗಳು ಮತ್ತು  ಮೂಢಭಟ್ಕಳದ  ಅವರ ಮನೆಗೆ ಧಾವಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪರಶುರಾಮ ತಂಡದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟ ಮನೋಜ್ ನಾಯ್ಕ ಭಟ್ಕಳದಲ್ಲಿ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಹೆಸರುವಾಸಿಯಾಗಿದ್ದರು. ಅನೇಕ ಪಂದ್ಯಾವಳಿಗಳಲ್ಲಿ, ಅವರಿಗೆ ಅತ್ಯುತ್ತಮ ರೈಡರ್ ಸೇರಿದಂತೆ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಭಟ್ಕಳ ಮುಸ್ಲಿಂ ಯುಥ್ ಫೆಡರೇಶನ್ ಅಧಿಕಾರಿಗಳು, ಉತ್ತರಕನ್ನಡ ಜಿಲ್ಲಾ ಕಬಡ್ಡಿ ಒಕ್ಕೂಟದ ಗೌರವ ಪೋಷಕ ಮತ್ತು ಕರ್ನಾಟಕ ಕಬಡ್ಡಿ ತಂಡದ ಮಾಜಿ ಸದಸ್ಯ ಇನಾಯತುಲ್ಲಾ ಶಾಬಾಂದ್ರಿ ಸೇರಿದಂತೆ ವಿವಿಧ ಭಟ್ಕಳ ತಂಡಗಳ ಆಟಗಾರರು, ಲಯನ್ ಸ್ಪೋರ್ಟ್ಸ್,  ರಾಯಲ್ ಸ್ಪೋರ್ಟ್ಸ್,  ಕಾಸ್ಮೊಸ್ ಸ್ಪೋರ್ಟ್ಸ್, ಮೂನ್ ಸ್ಟಾರ್ ಸ್ಪೋರ್ಟ್ಸ್ ಮತ್ತು ಸನ್ ಶೈನ್ ಸ್ಪೋರ್ಟ್ಸ್  ಅವರ  ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
 
ಪರಶುರಾಮ ತಂಡದಲ್ಲಿ ಮನೋಜ್ ನಾಯ್ಕ ಜೊತೆ ಕಬಡ್ಡಿ ಆಡಿದ ಭಟ್ಕಳ ಶಾಸಕ ಸುನಿಲ್ ನಾಯ್ಕ, ಮನೋಜ್  ಹಠಾತ್ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮನೋಜ್ ಒಬ್ಬ ಉತ್ತಮ ರೈಡರ್ ಹಾಗೂ ಒಬ್ಬ ಶ್ರೇಷ್ಠ ಆಲ್ ರೌಂಡರ್ ಆಟಗಾರನಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುನೀಲ್ ನಾಯ್ಕ  ಸಂತಾಪ ಸೂಚಿಸಿದ್ದಾರೆ.

Read These Next