ಭಟ್ಕಳ ಜಾಲಿ ಪಟ್ಟಣ ಪಂಚಾಯತ ಕೊನೆಯ ಸಭೆಯಲ್ಲಿ ಮೇಲ್ದರ್ಜೆಗೆರಲು ಸದಸ್ಯರ ಹಂಬಲ; ಮತ್ತೆ ಒಳಚರಂಡಿ ಬಗ್ಗೆ ಅಪಸ್ವರ

Source: S O News service | By I.G. Bhatkali | Published on 23rd September 2021, 7:21 PM | Coastal News |

ಭಟ್ಕಳ: ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿಳಂಬ, ಕೊರೊನಾ ಆತಂಕ, ಒಳಚರಂಡಿ ಗದ್ದಲ ಇತ್ಯಾದಿ ಎಲ್ಲ ಗೊಂದಲವನ್ನು ಕಟ್ಟಿಕೊಂಡೇ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಸದಸ್ಯರು ತಮ್ಮ ಕೊನೆಯ ಸಭೆಯನ್ನು ಬುಧವಾರ ಮುಗಿಸಿದ್ದು, ಮುಂದಿನ ಚುನಾವಣಾ ಸಿದ್ಧತೆಗೆ ಚಾಲನೆ ಸಿಕ್ಕಂತಾಗಿದೆ.

ವಿಶೇಷ ಎಂದರೆ ಈ ಸಭೆಯಲ್ಲಿ ತಂಜೀಮ್ ಬೆಂಬಲಿತ ಹಲವು ಸದಸ್ಯರು ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತ, ಹೆಬಳೆ ಪಂಚಾಯತ ಕೆಲವು ಭಾಗಗಳನ್ನು ಸೇರಿಸಿಕೊಂಡು ನಗರ ಸಭೆ ರಚಿಸುವ ಬಗ್ಗೆ ಒಲವನ್ನು ತೋರ್ಪಡಿಸಿದ್ದಾರೆ.

ಒಂದೂವರೆ ವರ್ಷ ಪಟ್ಟಣ ಪಂಚಾಯತಗೆ ಅಧ್ಯಕ್ಷರೇ ಇರಲಿಲ್ಲ!
      2016ರಲ್ಲಿ ಜಾಲಿ ಗ್ರಾಮ ಪಂಚಾಯತ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ ಆಗಿ ಪರಿವರ್ತನೆಯಾದಾಗ ಚುನಾವಣೆ ಜಾಲಿಯ ಜನರು ಅಭಿವೃದ್ಧಿಯ ಕನಸು ಕಂಡಿದ್ದರು. ಆದರೆ ಸರಕಾರದ ನಿರ್ಲಕ್ಷ್ಯ ಎನ್ನುವುದು ಇಡೀ ಪಟ್ಟಣ ಪಂಚಾಯತ ವ್ಯವಸ್ಥೆಯನ್ನೇ ಹಾಳು ಮಾಡಿ ಬಿಟ್ಟಿತು. 2016ರ ಮೇನಲ್ಲಿ ಚುನಾವಣೆ ನಡೆದರೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ 2016ರ ಸೆಪ್ಟೆಂಬರ್‍ನಲ್ಲಿ ಘೋಷಣೆಯಾಯಿತು. ನಂತರ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಹಾಗೂ ತಂಜೀಮ್ ನಡುವೆ ಗೊಂದಲ ಏರ್ಪಟ್ಟು ಅಬ್ದುರ್ರಹೀಮ್ ಅಧ್ಯಕ್ಷರಾದರು. ಆದರೆ 1 ವರ್ಷ 8 ತಿಂಗಳು ಅಧಿಕಾರ ನಡೆಸಿ ಅವರು ರಾಜಿನಾಮೆ ಕೊಟ್ಟು ಹೊರ ನಡೆದರು. ನಂತರ ಉಳಿದ 7-8 ತಿಂಗಳು ಅವಧಿಗೆ ಆದಮ್ ಪಣಂಬೂರು ಅಧ್ಯಕ್ಷರಾದರು. ನಂತರದ್ದು 2ನೇ ಅವಧಿಯ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ. ದೌರ್ಭಾಗ್ಯ ಎಂದರೆ ಕೊರೊನಾ ಹೆಸರಿನಲ್ಲಿ 1 ವರ್ಷಗಳ ಕಾಲ ಮೀಸಲಾತಿ ಘೋಷಣೆಯಾಗಲೇ ಇಲ್ಲ. ಉಳಿದ 9-10 ತಿಂಗಳು ಶಮೀಮ್ ಬಾನು, ಫರ್ಹಾನಾ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಧಿ ಮುಗಿಸಿದ್ದೇ ಸಾಹಸ ಎನ್ನಬಹುದೇನೋ!

ಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಇಮ್ರಾನ್ ಲಂಕಾ, ಉಪಾಧ್ಯಕ್ಷ ಬಿಲಾಲ್, ಆದಮ್ ಪಣಂಬೂರು ಮತ್ತಿತರರು, ಜಾಲಿ ಪಟ್ಟಣ ಪಂಚಾಯತ ಕಚೇರಿ ನಮ್ಮ ವಾರ್ಡುಗಳಿಂದ ಬಹಳಷ್ಟು ದೂರದಲ್ಲಿದೆ, ನಮ್ಮ ವಾರ್ಡುಗಳಿಗೂ ಜಾಲಿ ಹೆಸರಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ, ನಮಗೆ ಭಟ್ಕಳ ಪುರಸಭೆ ಹತ್ತಿರದಲ್ಲಿದ್ದು, ಹೆಚ್ಚಿನ ಅನುದಾನ, ಅಭಿವೃದ್ಧಿಯ ದೃಷ್ಟಿಯಿಂದ ಜಾಲಿ ಪಟ್ಟಣ ಪಂಚಾಯತನ್ನು ಪುರಸಭೆಯಲ್ಲಿ ವಿಲೀನಗೊಳಿಸಿ ಮೇಲ್ದರ್ಜೆಗೆ ಏರಿಸುವುದು ಉತ್ತಮವಾಗಿದೆ ಎಂದು ವಿವರಿಸಿದರು. ಆದರೆ ಇದಕ್ಕೆ ಕಾಂಗ್ರೆಸ್ ಸದಸ್ಯ ನಾಗರಾಜ ನಾಯ್ಕ, ಬಿಜೆಪಿ ಪರ ನಾಮನಿರ್ದೇಶಿತ ಸದಸ್ಯ ಹರೀಶ ನಾಯ್ಕ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ಇನ್ನೋರ್ವ ಕಾಂಗ್ರೆಸ್ ಸದಸ್ಯ ಮಂಗಳ ಗೊಂಡ ತಮ್ಮ ಅಭಿಪ್ರಾಯವನ್ನು ಮಂಡಿಸಿ, ಜಾಲಿ ಪಟ್ಟಣ ಪಂಚಾಯತನ ಎಲ್ಲ ವಾರ್ಡುಗಳಿಗೂ ಸಮೀಪದಲ್ಲಿ ಪಂಚಾಯತ ಕಚೇರಿ ಇದ್ದರೆ ಒಳಿತಾಗುತ್ತಿತ್ತು. ಅದರಲ್ಲಿಯೂ ಎಲ್ಲರಿಗೂ ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಟ್ಟಣ ಪಂಚಾಯತ ಕಚೇರಿ ನಿರ್ಮಾಣಕ್ಕೆ ಅವಕಾಶ ಇತ್ತು, ಆದರೆ ಇದ್ದಕ್ಕಿದ್ದಂತೆ ಬದಲಾವಣೆ ಮಾಡಲಾಯಿತು. ಈಗ ಅಧಿಕಾರಿಗಳೇ ಜಾಲಿ ಪಟ್ಟಣ ಪಂಚಾಯತ ಕಚೇರಿಯನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಪಂಚಾಯತ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯೊಂದಿಗೆ ವಿಲೀನಗೊಳಿಸಲು ಎಲ್ಲರೂ ಸೇರಿ ಒಮ್ಮತದ ನಿರ್ಣಯ ಅಗೀಕರಿಸಿದರೆ ಅದಕ್ಕೆ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ಜಾಲಿ ಪಟ್ಟಣ ಪಂಚಾಯತ ಒಳಚರಂಡಿ ವಿವಾದ ಕೊನೆಯ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಒಳಚರಂಡಿ ಕಾಮಗಾರಿ ವಿಷಯದಲ್ಲಿ ಪಟ್ಟಣ ಪಂಚಾಯತ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲದಂತೆ ನೋಡಿಕೊಳ್ಳಲಾಯಿತು. ಕಾಮಗಾರಿ ಕಳಪೆಯಾದರೂ ಪಂಚಾಯತ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ. ವೆಟ್‍ವೆಲ್ ನಿರ್ಮಾಣ ವಿಷಯದಲ್ಲಿಯೂ ಸದಸ್ಯರನ್ನು ಕತ್ತಲಲ್ಲಿ ಇಡಲಾಗಿದೆ. ಕಾಮಗಾರಿಯ ಬಗ್ಗೆ ಎಷ್ಟೆಲ್ಲ ಆರೋಪಗಳನ್ನು ಮಾಡಿದರೂ ಒಂದೇ ಒಂದು ದಿನ ಕಾಮಗಾರಿ ನಿಲ್ಲಿಸಲಿಲ್ಲ ಎಂದು ಸದಸ್ಯರು ಆಕ್ರೋಶವನ್ನು ಹೊರ ಹಾಕಿದರು. ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಶಮೀಮ್ ಬಾನು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಫರ್ಹಾನಾ ಇರ್ಷಾದ್ ಇಕ್ಕೇರಿ, ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್ ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...