ಋಣ ಮುಕ್ತ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲು ಅ 22 ಕೊನೆಯ ದಿನ - ಸೋಮಶೇಖರ್

Source: sonews | By Staff Correspondent | Published on 23rd September 2019, 10:38 PM | State News |

ಕೋಲಾರ : ಋಣ ಮುಕ್ತ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದ್ದು ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಉಪವಿಭಾಗಾಧಿಕಾರಿಯಾದ ಸೋಮಶೇಖರ್ ಅವರು ತಿಳಿಸಿದರು. 

ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಂದಾಯ ಇಲಾಖೆ ಹಾಗೂ ತಾಲ್ಲೂಕು ಕಚೇರಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಋಣ ಮುಕ್ತ ಕಾಯ್ದೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಯ್ದೆಯಡಿ ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪಡೆದು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. 

ಗಡಿಭಾಗದಲ್ಲಿನ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಬಂದು ಅರ್ಜಿಗಳನ್ನು ಸಲ್ಲಿಸಲು ಕಷ್ಟವಾಗುತ್ತದೆ ಎಂಬುದನ್ನು ಮನಗಂಡು ಇದನ್ನು ತಪ್ಪಿಸಲು ಆಯಾ ತಾಲ್ಲೂಕು ಕಚೇರಿಗಳಲ್ಲಿಯೂ ಋಣ ಮುಕ್ತ ಕಾಯ್ದೆಯಡಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2850 ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಿಯಾಗಿವೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು 6 ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿದೆ ಎಂದು ಹೇಳಿದರು. 

ಖಾಸಗಿ ಲೇವಾದೇವಿಗಾರರು ಮತ್ತು ಗಿರವಿದಾರರಿಂದ ಚರಾಸ್ಥಿ ಅಥವಾ ಸ್ಥಿರಾಸ್ಥಿ ಅಥವಾ ಆಭರಣ ಅಡಮಾನ ಮಾಡಿ ಸಾಲ ಪಡೆದಿರುವವರು ಈ ಯೋಜನೆಯಡಿ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು, ದುರ್ಬಲ ವರ್ಗದವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗಾಗಿ ಅರ್ಹರು ಈ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಲು ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. 

ನಿಗಧಿತ ನಮೂನೆಯಲ್ಲಿ-2 ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು ಇದರೊಂದಿಗೆ ಆದಾಯ ಪ್ರಮಾಣ ಪತ್ರ, ಸಣ್ಣ ರೈತ ಎಂದು ತಹಶೀಲ್ದಾರರಿಂದ ದೃಢೀಕರಿಸಿದ ಪ್ರತಿ, ಭೂ ರಹಿತ ಕೃಷಿ ಕಾರ್ಮಿಕರು ಎಂದು ತಹಶೀಲ್ದಾರರಿಂದ ದೃಢೀಕರಿಸಿದ ಪ್ರತಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಅಡಮಾನ ಇಟ್ಟಿರುವುದಕ್ಕೆ ರಶೀದಿಗಳು, ಅರ್ಜಿದಾರರ ಮೊಬೈಲ್ ನಂಬರ್ ನಮೂದಿಸಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯನ್ನು ಬಡವರ ಅನುಕೂಲಕ್ಕಾಗಿ ಮಾಡಲಾಗಿದ್ದು ಇದನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಅರ್ಜಿದಾರರಿಗೆ ಅವಶ್ಯಕವಾದ ಪ್ರಮಾಣ ಪತ್ರಗಳನ್ನು ಶೀಘ್ರವಾಗಿ ಒದಗಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದರು. 

ತಹಶೀಲ್ದಾರ್ ನಾಗವೇಣಿ ಅವರು ಮಾತನಾಡಿ, ಋಣ ಮುಕ್ತ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸುವವರಿಗೆ ಅವಶ್ಯಕವಾದ ದಾಖಲೆಗಳನ್ನು ಶೀಘ್ರವಾಗಿ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ. ಅದರಂತೆ ಎಲ್ಲಾ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಕಾಯ್ದೆಯ ಅನುಕೂಲವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಕೊಂಡಪ್ಪ, ಕಂದಾಯ ನಿರೀಕ್ಷಕರಾದ ವಿಜಯದೇವ್, ಗ್ರಾಮ ಲೆಕ್ಕಿಗರಾದ ಆನಂದ ಕುಮಾರ್, ಶಿವಕುಮಾರ್, ಬೀರಪ್ಪ ಮಿರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...