ಕೇಂದ್ರ ಸಚಿವರ ಪುತ್ರ ಆಶೀಷ್ ಮಿಶ್ರಾ ಬಂಧನ.

Source: VB News | By Laxmi Tanaya | Published on 10th October 2021, 5:12 PM | National News |

ಲಕ್ನೋ : ಲಖಿಂಪುರ ಜಿಲ್ಲೆಯ ತಿಕುನಿಯಾದಲ್ಲಿ ಅ.3ರಂದು ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ವಾಹನವನ್ನು ನುಗ್ಗಿಸಿದ್ದ ಆರೋಪಿ, ಕೇಂದ್ರ ಸಹಾಯಕ ಗೃಹಸಚಿವ ಅಜಯ್‌ಕುಮಾರ್ ಮಿಶ್ರಾರ ಪುತ್ರ ಆಶೀಷ್ ಮಿಶ್ರಾ ಅವರನ್ನು ಶನಿವಾರ 12 ಗಂಟೆಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಕೊನೆಗೂ ರಾತ್ರಿ ಲಖಿಂಪುರ ಖೇರಿ ಪೊಲೀಸರು ಬಂಧಿಸಿದ್ದಾರೆ.

ಅ.3ರಂದು ತಿಕುನಿಯಾದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾನಿರತರ ಮೇಲೆ ವಾಹನಗಳನ್ನು ನುಗ್ಗಿಸಿದ್ದರಿಂದ ನಾಲ್ವರು ರೈತರು ಮೃತಪಟ್ಟಿದ್ದರು. ನಂತರ ನಡೆದಿದ್ದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಕಾರಿನ ಚಾಲಕ ಕೊಲ್ಲಲ್ಪಟ್ಟಿದ್ದರೆ, ಘರ್ಷಣೆಗಳ ನಡುವೆ ಗುಂಡೇಟಿಗೆ ಪತ್ರಕರ್ತನೋರ್ವ ಕೂಡ ಬಲಿಯಾಗಿದ್ದ.

ವಿಚಾರಣೆಯ ಸಂದರ್ಭ ಆಶೀಷ್ ಪೊಲೀಸರೊಂದಿಗೆ ಸಹಕರಿಸಿರಲಿಲ್ಲ ಮತ್ತು ಕೆಲವು ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ, ಹೀಗಾಗಿ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ಸಹಾರನಪುರ ಡಿಐಜಿ ಉಪೇಂದ್ರ ಅಗರವಾಲ್ ತಿಳಿಸಿದರು.

ಆಶೀಷ್ ಬೆಳಗ್ಗೆ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಿದ್ದರು. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತಾದರೂ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗಿತ್ತು.

ರೈತರ ಗುಂಪಿನ ಮೇಲೆ ಚಲಿಸಿದ್ದ ವಾಹನ ತನಗೆ ಸೇರಿದ್ದು ಎಂದು ಆಶೀಷ್ ಒಪ್ಪಿಕೊಂಡಿದ್ದರಾದರೂ, ಆ ಸಂದರ್ಭ ತಾನು ಅದರಲ್ಲಿರಲಿಲ್ಲ ಎಂದೇ ಪ್ರತಿಪಾದಿಸಿದ್ದರು.

ಉ.ಪ್ರ. ಪೊಲೀಸರು ಆಶೀಷ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರಾದರೂ ಅವರನ್ನು ಬಂಧಿಸಿರಲಿಲ್ಲ. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಕೂಡ ಉತ್ತರ ಪ್ರದೇಶ ಸರಕಾರವನ್ನು ತೀವ್ರ ತರಾಟೆ ಗೆ ತೆಗೆದುಕೊಂಡಿತ್ತು.

ಪ್ರಕರಣದ ತನಿಖೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನಾವು ಯಾವ ಸಂದೇಶವನ್ನು ರವಾನಿಸುತ್ತಿದ್ದೇವೆ? ಸಾಮಾನ್ಯ ಸಂದರ್ಭಗಳಲ್ಲಿ ಕೊಲೆ ಪ್ರಕರಣ ದಾಖಲಾದರೆ ಪೊಲೀಸರು ಏನು ಮಾಡುತ್ತಾರೆ? ಹೋಗಿ ಮತ್ತು ಆರೋಪಿಯನ್ನು ಬಂಧಿಸಿ ಎಂದು ಝಾಡಿಸಿತ್ತು.

ಶುಕ್ರವಾರ ಆಶೀಷ್ ಆಗಮನಕ್ಕಾಗಿ ಮೂರು ಗಂಟೆಗಳ ಕಾಲ ಕಾದು ಕುಳಿತಿದ್ದ ಡಿಐಜಿ ಉಪೇಂದ್ರ ಅಗರವಾಲ್ ಶನಿವಾರ ಬೆಳಗ್ಗೆ ಮತ್ತೆ ಲಖಿಂಪುರ ಖೇರಿ ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಉ.ಪ್ರ.ಪೊಲೀಸರು ಐಪಿಸಿಯ ಕಲಂ 160ರಡಿ ಆಶೀಷ್‌ಗೆ ನೋಟಿಸನ್ನು ಹೊರಡಿಸಿದ್ದು, ಇದು ಸಾಕ್ಷಿಯ ಹಾಜರಾತಿಗೆ ಸಂಬಂಧಿಸಿದೆ.

ಕೊಲೆ ಪ್ರಕರಣದ ಆರೋಪಿಗೆ ಈ ಕಲಮ್‌ನಡಿ ನೋಟಿಸ್ ಹೊರಡಿಸಿದ್ದನ್ನು ಕಾನೂನು ತಜ್ಞರು ಪ್ರಶ್ನಿಸಿದ್ದರು. ಆದರೆ, ಕಲಂ 160ರಡಿ ಕರೆಸಲಾದ ವ್ಯಕ್ತಿಯನ್ನು ಆತನ ಹೇಳಿಕೆಯ ಆಧಾರದಲ್ಲಿ ಬಂಧಿಸಲು ಅವಕಾಶವಿದೆ ಎಂದು ಪೊಲೀಸ್ ಮೂಲಗಳು ಸಮಜಾಯಿಷಿ ನೀಡಿದ್ದವು.

ಪೊಲೀಸ್ ಠಾಣೆಗೆ ಆಶೀಪ್‌ ಆಗಮನಕ್ಕೆ ಮುನ್ನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತನ್ನು ಹೆಚ್ಚಿಸಲಾಗಿತ್ತು.

ರೈತರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಆಶೀಷ್‌ರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು,ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ಲಖಿಂಪುರ ಖೇರಿ ಘಟನೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿದು ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತನ್ನ ಸರಕಾರವು ಕೇವಲ ಆರೋಪಗಳ ಆಧಾರದಲ್ಲಿ ಯಾರನ್ನೂ ಬಂಧಿಸುವುದಿಲ್ಲ ಎಂದಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಂದೂ ವಿಷಯದಲ್ಲಿ ಟೀಟಿಸುವುದನ್ನು ಬೆಟ್ಟು ಮಾಡಿರುವ ಆಝಾದ್ ಸಮಾಜ ಪಾರ್ಟಿಯ ಮುಖ್ಯಸ್ಥ ಹಾಗೂ ದಲಿತ ನಾಯಕ ಚಂದ್ರಶೇಖರ ಆಝಾದ್, ಲಖಿಂಪುರ ಖೇರಿಗೆ ಭೇಟಿ ನೀಡುವಂತೆ ಅವರನ್ನು ಆಗ್ರಹಿಸಿದ್ದಾರೆ. ಲಖಿಂಪುರ ಖೇರಿ ಘಟನೆಯ ಆರೋಪಿಗಳನ್ನು ಏಳು ದಿನಗಳಲ್ಲಿ ಬಂಧಿಸದಿದ್ದರೆ ಮೋದಿಯವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ರವಿವಾರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ 'ಕಿಸಾನ್ ನ್ಯಾಯ' ರ್ಯಾಲಿಯೊಂದನ್ನು ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...