ಕುವೈಟಿನಲ್ಲಿ ಮೃತಪಟ್ಟ ನಾಲ್ವರ ಮೃತದೇಹ ಇಂಡಿಯನ್ ಸೋಶಿಯಲ್ ಫೋರಮ್ (ISF) ಸಹಕಾರದಿಂದ ಊರಿಗೆ

Source: Indian Social Forum  Kuwait. | By Arshad Koppa | Published on 7th August 2017, 7:40 AM | Gulf News | Special Report |

ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವದಿ ಮುಗಿದ ನಂತರ ಮರಣವೆಂಬ ಸತ್ಯಕ್ಕೆ ತಲೆಬಾಗಲೇಬೇಕು. ಆದರೆ ಆ ಮರಣವೂ ಅಕಾಲವಾಗದಿರಲಿ ಮತ್ತು ತನ್ನ ಹುಟ್ಟೂರಲ್ಲಿ ತನ್ನ ಕುಟುಂಬದವರ ಸಮ್ಮುಖದಲ್ಲಾಗಲಿ ಎಂಬುದು ಎಲ್ಲರ ಬಯಕೆ. ಹೊಟ್ಟೆಪಾಡಿಗಾಗಿ ದೂರದ ಕೊಲ್ಲಿ ರಾಷ್ಟ್ರಗಳಿಗೆ ಬರುವ ಅನಿವಾಸಿ ಭಾರತೀಯರು ದುರದೃಷ್ಟವಶಾತ್ ತಮ್ಮ ಜೀವನದ ಪಯಣವನ್ನು ಅಲ್ಲೇ ಕೊನೆಗೊಳಿಸಬೇಕಾಗಿ ಬರುವುದು ತೀರಾ ವಿಷಾದನೀಯ. ಆದರೆ ಇಂತಹ ದುಃಖದ ಸಂಧರ್ಭದಲ್ಲಿ ಕನಿಷ್ಟಪಕ್ಷ ತಮ್ಮ ಆಪ್ತರ ಅಂತಿಮ ಸಂಸ್ಕಾರವನ್ನಾದರೂ ನಿರ್ವಹಿಸಲು ಅವಕಾಶವಂಚಿತರಾದಾಗ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಈ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್, ಕರ್ನಾಟಕ ಘಟಕವು ಕಳೆದ ನಾಲ್ಕು ವಾರಗಳಲ್ಲಿ ಐದು ಮೃತರ ಕುಟುಂಬಗಳಿಗೆ ಆಸರೆಯಾಗಿ, ನಾಲ್ಕು ಮೃತದೇಹಗಳನ್ನು ಹುಟ್ಟೂರಿಗೆ ತಲುಪಿಸಲು ಹಾಗೂ ಕುಟುಂಬಸ್ಥರ ವಿನಂತಿಯಂತೆ ಒಂದು ಮೃತದೇಹವನ್ನು ಕುವೈಟಿನ ದಫನಭೂಮಿಯಲ್ಲಿ ಅಂತ್ಯಸಂಸ್ಕಾರಗೈಯಲು ನೆರವಾಯಿತು.

ಬೆಂಗಳೂರು ಮೂಲದ ಸೊಸಾಲಿ ಪಾರ್ಥ ಸಾರಥಿ ಶ್ರೀನಿವಾಸ್(65) ಕುವೈಟಿಗೆ ಅನಿವಾಸಿ ಭಾರತೀಯರಾಗಿ ಬಂದು  ನೆಲೆಸಿರುವ ಅತ್ಯಂತ ಮೊದಲಿಗರಲ್ಲಿ ಒಬ್ಬರು. ಅರಬಿ ಎನರ್ಟೆಕ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ಕುವೈಟಿನಲ್ಲಿಯೇ ತನ್ನ ನಿವೃತ್ತ ಜೀವನವನ್ನು ನಡೆಸುತ್ತಿದ್ದರು. ವೃದ್ಧಾಪ್ಯ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಜುಲೈ 2 ರಂದು ಕುವೈಟಿನಲ್ಲಿ ಮರಣ ಹೊಂದಿದರು. ಭಾರತೀಯ ದೂತವಾಸ ಕಛೇರಿಯ ವಿನಂತಿಯ ಮೇರೆಗೆ ಧಾವಿಸಿದ ISF ತಂಡ ನಿರಂತರ ಶ್ರಮವಹಿಸಿ ಜುಲೈ 4ರಂದು ಮೃತದೇಹವನ್ನು ಊರಿಗೆ ಕಳುಸುವಲ್ಲಿ ಸಫಲವಾಯಿತು.

ಮಾರಕ ರೋಗ ಕ್ಯಾನ್ಸರ್'ನಿಂದ ಬಳಲುತ್ತಿದ್ದ ಬೆಂಗಳೂರು ಮೂಲದ ಖಾದರ್ ಶರೀಫ್ ಜೌಹರ್ (64) ಕಳೆದ ಸುಮಾರು 45 ದಿನಗಳಿಂದ ಕುವೈಟ್ ಕ್ಯಾನ್ಸರ್ ನಿಯಂತ್ರಣ ಕೇಂದ್ರದಲ್ಲಿ ಕೀಮಿಯೋತೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಜೌಹರ್ ಕುಟುಂಬಿಕರ ವಿನಂತಿಯ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ISF ತಂಡವು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಹಾಗೂ ಸಂಬಂದ ಪಟ್ಟ ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆಗಾಗಿ ನಿರಂತರ ಪ್ರಯತ್ನಪಟ್ಟಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕಳೆದ ಜುಲೈ 15ರಂದು ಕೊನೆಯುಸಿರೆಳೆದರು. ಕುವೈಟ್'ನಲ್ಲಿ ನೆಲೆಸಿರುವ ಮೃತರ ಕುಟುಂಬಸ್ಥರ ನೆರವಿನೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರು ಕುವೈಟಿನ ಸುಲೈಬಿಕಾಟ್ ದಫನಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

ಗುಲ್ಬರ್ಗ ಮೂಲದ ಸೈಯದ್ ಅಮ್ಜದ್ ಅಲೀಯವರು ಕಳೆದ 7 ತಿಂಗಳಿನಿಂದ ಕುವೈಟಿನ ಮನೆಯೊಂದರಲ್ಲಿ ಹೌಸ್ ಬಾಯ್ ಆಗಿ ದುಡಿಯುತ್ತಿದ್ದರು. ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ತೆರಳಿ ಬಂದಿದ್ದ ಇವರು ಕಳೆದ ಜುಲೈ 07ರಂದು ಮಧ್ಯಾಹ್ನ ತನ್ನ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣವೇ ಇವರ ಪ್ರಾಯೋಜಕರು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದ ಅಮ್ಜದ್'ರವರು ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಗುಲ್ಬರ್ಗ ಎಸ್.ಡಿ.ಪಿ.ಐ. ನಾಯಕರಿಂದ ವಿಷಯವನ್ನರಿತ ಇಂಡಿಯನ್ ಸೋಶಿಯಲ್ ಫೋರಮ್ ನಾಯಕರು ಸ್ಥಳೀಯ ಪೋಲಿಸ್ ಠಾಣೆಯನ್ನು ಸಂಪರ್ಕಿಸಿ ಎಲ್ಲಾ ಕಾನೂನು-ರಿವಾಜುಗಳನ್ನು ಪೂರ್ತಿಗೊಳಿಸಿ ಜುಲೈ 17ರಂದು ಹೈದರಾಬಾದ್ ಮುಖಾಂತರ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯ ಎಸ್.ಡಿ.ಪಿ.ಐ. ನಾಯಕರ ನೆರವಿನಿಂದ ಮೃತದೇಹವನ್ನು ಗುಲ್ಬರ್ಗಕ್ಕೆ ತಲುಪಿಸಿದರು.

ಮಂಗಳೂರಿನ ಬಜ್ಪೆಯವರಾದ ಅಬ್ದುಲ್ ಹಮೀದ್ ಉಸ್ಮಾನ್'ರವರು ಹೃದಯಾಘಾತದಿಂದ ಕುವೈಟಿನಲ್ಲಿ ದಿನಾಂಕ ಜುಲೈ 22ರಂದು ಮರಣ ಹೊಂದಿದರು. ಅಂದು ವಾರದ ಬಿಡುವಿನ ದಿನವಾಗಿದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಕೆಕೆಎಮ್ಎ ಕರ್ನಾಟಕ ವಿಭಾಗ ನಾಯಕರಾದ ಅಬ್ದುಲ್ ಲತೀಫ್ ಮತ್ತು ಮೃತರ ಇತರ ಗೆಳೆಯರ ಸಹಕಾರದೊಂದಿಗೆ ಅದೇ ದಿನ ಮೃತದೇಹವನ್ನು ಊರಿಗೆ ರವಾನಿಸುವಲ್ಲಿ ಯಶಸ್ವಿಯಾಯಿತು.

ಮುಹಮ್ಮದ್ ಇನ್ತಾಝ್ ಅಲೀ(38)ರವರು ಅಸ್ಸಾಮ್ ಲಂಕಾ ನಗಾವ್ ಮೂಲದವರಾಗಿದ್ದು ಕುವೈಟಿನಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದು ಕಳೆದ ಜುಲೈ 19ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಭಾರತೀಯ ರಾಯಭಾರ ಕಛೇರಿಯ ನೆರವಿನೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಇನ್ತಾಝ್ ಅಲೀರವರ ಮೃತದೇಹವನ್ನು ಹುಟ್ಟೂರು ಅಸ್ಸಾಮಿಗೆ ತಲುಪಿಸುವಲ್ಲಿ ಸಫಲವಾಯಿತು.

ಇಂಡಿಯನ್ ಸೋಶಿಯಲ್ ಫೋರಮ್ (ISF) ಕುವೈಟ್, ಕುವೈಟಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಘಟನೆಯಾಗಿದ್ದು ಧರ್ಮ, ಭಾಷೆ, ಪ್ರಾದೇಶಿಕತೆಯ ಗಡಿಗಳನ್ನು ಮೀರಿ ಕುವೈಟಿನಲ್ಲಿರುವ ಸಮಸ್ತ ಭಾರತೀಯರ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಮೃತದೇಹಗಳನ್ನು ಮೃತರ ಕುಟುಂಬಿಕರಿಗೆ ತಲುಪಿಸಿ ವಿಶಿಷ್ಟ ರೀತಿಯಲ್ಲಿ ಕುಟುಂಬಿಕರಿಗೆ ಸಾಂತ್ವನ ಹೇಳಲು ಸಹಕರಿಸಿದ  ಐ.ಎಸ್.ಎಫ್. ವೆಲ್ಫೇರ್ ಮೀಡಿಯೇಟ್ಸ್ ತಂಡದ ಸದಸ್ಯರಾದ ರಫೀಕ್ ಮಂಚಿ, ಫೈಸಲ್ ಬೆಳಪು, ತಮೀಮ್ ಉಳ್ಳಾಲ್, ಮುಸ್ತಕೀಮ್ ಶಿರೂರ್, ಇಮ್ರಾನ್ ಮುಲ್ಕಿ ಇವರನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಇಮ್ತಿಯಾಝ್ ಅಹ್ಮದ್ ಅರ್ಕುಳರವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದಿಸಿದ್ದಾರೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...