ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

Source: SO News | By Laxmi Tanaya | Published on 20th January 2022, 10:19 PM | State News | Don't Miss |

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ಕಾಲೇಜುಗಳನ್ನು ಎಂದಿನಂತೆ ಮುಂದುವರೆಸುವುದು ಉತ್ತಮ ಎಂದು ಗುರುವಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕೋವಿಡ್ ತಜ್ಞರ ಸಭೆಯಲ್ಲಿ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದರೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಮೂರನೇ ಅಲೆಯಲ್ಲಿ ಕೋವಿಡ್ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕೋವಿಡ್ ಪಾಸಿಟಿವ್ ಮಕ್ಕಳನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಿ ಶಾಲಾ ಕಾಲೇಜುಗಳನ್ನು ನಡೆಸುವುದು ಉತ್ತಮ. ಪ್ರತಿ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ರೋಗ ಲಕ್ಷಣವಿರುವ ಮಕ್ಕಳನ್ನು ಮನೆಗೆ ಕಳುಹಿಸಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದರು.

ಅಂಕಿಅಂಶಗಳನ್ನು ಗಮನಿಸಿದರೆ ಕೋವಿಡ್ ಮೂರನೇ ಅಲೆಯಲ್ಲಿ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿರುವವರ ಪ್ರಮಾಣ ಅತಿ ಕಡಿಮೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ 63 ಜನರ ಪೈಕಿ ಇಬ್ಬರಿಗೆ ಮಾತ್ರ ಆಕ್ಸಿಜನ್ ಒದಗಿಸುವ ಅಗತ್ಯ ಬಿದ್ದಿದೆ. ಈಗಾಗಲೇ ಬೇರೆ ರೋಗಗಳನ್ನು ಹೊಂದಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಬಿದ್ದಿದೆ. ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದರೆ ಬಹುತೇಕ ಮಂದಿಯನ್ನು ಆಸ್ಪತ್ರೆಯ ಬದಲಿಗೆ ಅಲ್ಲಿಗೆ ಸೇರಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದರು. 

ಲಸಿಕೆ ಪ್ರತಿಯೊಬ್ಬರೂ ಹಾಕಬೇಕು: ಮೂರನೇ ಅಲೆಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಅಂಕಿಅಂಶಗಳನ್ನು ಗಮನಿಸಿದಾಗ, ಎರಡು ಲಸಿಕೆ ಹಾಕಿಸಿದವರ ಮೇಲೆ ಕೋವಿಡ್ ಸಾಮಾನ್ಯ ಪ್ರಭಾವ ಬೀರಿದ್ದು ಬಹುತೇಕ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಎರಡು ಲಸಿಕೆ ಹಾಕದ 17ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಕೋವಿಡ್ ರೋಗ ಲಕ್ಷಣಗಳು ಹೆಚ್ಚಾಗಿವೆ. ಈಗಾಗಲೇ ಜಿಲ್ಲೆಯಲ್ಲಿ ಶೇ.99 ಮಂದಿ ಪ್ರಥಮ ಡೋಸ್ ಹಾಗೂ ಶೇ.84ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯುವ ಮೂಲಕ ಕೋವಿಡ್ ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿದೆ ಎಂಬುವುದು ಇದರಿಂದ ಸ್ಪಷ್ಟ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಹೇಳಿದರು.

ಒಂದೆರಡು ದಿನಗಳಲ್ಲಿ ಅಗತ್ಯವಿರುವ ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗುವುದು. ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಟೆಲಿಫೋನ್ ಮೂಲಕ ಟ್ರಯಾಜ್ ಮಾಡಲು ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಹ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಸಭೆಯಲ್ಲಿ ಮಕ್ಕಳ ತಜ್ಞರಾದ ಡಾ.ಧನಂಜಯ ಸರ್ಜಿ, ಡಾ.ಶ್ರೀಕಾಂತ್ ಹೆಗ್ಡೆ, ಡಾ.ಮಲ್ಲಿಕಾರ್ಜುನ ಕೊಪ್ಪದ್, ಡಾ.ಪಾಟೀಲ್, ಡಾ.ಸತೀಶ್ಚಂದ್ರ, ಡಾ.ನಾಗರಾಜ ನಾಯಕ್, ಡಾ.ಮಲ್ಲಪ್ಪ, ಸಿಮ್ಸ್ ನಿರ್ದೇಶಕ ಡಾ. ಸಿದ್ದಪ್ಪ, ಡಾ.ಕಿರಣ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Read These Next

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಗ್ರಾಮೀಣ ವಿದ್ಯಾರ್ಥಿಗಳದೇ ಮೇಲುಗೈ; 145 ವಿದ್ಯಾರ್ಥಿಗಳಿಗೆ 625 ಅಂಕ

ಮಾರ್ಚ್ ತಿಂಗಳಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಒಟ್ಟು 8,53,436 ವಿದ್ಯಾರ್ಥಿಗಳ ಪೈಕಿ 7,30,881 ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ಪೊನ್ನಂಪೇಟೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ; ಸರಕಾರ ಜೀವಂತವಿದೆಯೇ? ಸಿದ್ದರಾಮಯ್ಯ ಆಕ್ರೋಶ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ಬಜರಂಗದಳ ನಡೆಸಿದ ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ...