ಕೋವಿಡ್ 2ನೇ ಅಲೆ:ನಿರ್ಲಕ್ಷ್ಯವಹಿಸದೇ ಬಿಗಿಯಾದ ಕ್ರಮಗಳು ಕೈಗೊಳ್ಳಲು ಸಚಿವ ಸಿಂಗ್ ಖಡಕ್ ಸೂಚನೆ

Source: SO News | By Laxmi Tanaya | Published on 20th April 2021, 8:05 AM | State News | Don't Miss |

ಬಳ್ಳಾರಿ : ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ಹರಡುತ್ತಿದ್ದು, ಸೊಂಕಿಗೆ ಒಳಗಾಗಿ ಹೋಂ ಐಸೋಲೇಶನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ತೀವ್ರ ನಿಗಾವಹಿಸಿ ಅವರನ್ನು ಹೊರಗೆ ತಿರುಗಾಡದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೂಲಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಪ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸೂಚನೆ ನೀಡಿದರು.

ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ತುರ್ತು ಪರಿಸ್ಥಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇವರನ್ನು ಹೊರಗಡೆ ಬಿಡುವುದರಿಂದ ಸೊಂಕು ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು,ರ್ಯಾಪಿಡ್ ರೆಸ್ಪಾನ್ಸ್ ಟೀಂ,ಸಂಬಂಧಿಸಿದ ಆಯಾ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಿ ಕ್ರಮವಹಿಸಬೇಕು ಎಂದು ಸೂಚಿಸಿದ ಅವರು ಹೋಂ ಐಸೋಲೇಶನ್ ಇರುವವರ ವಿಷಯದಲ್ಲಿ ಉದಾಸೀನತೆ ತೋರಿದಲ್ಲಿ ಸೊಂಕು ವ್ಯಾಪಕವಾಗಿ ಹರಡಲಿದ್ದು,ಅದರ ಪರಿಣಾಮವನ್ನೆಲ್ಲ ನಾವೆಲ್ಲರೂ ಅನುಭವಿಸಬೇಕಾಗುತ್ತದೆ;ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಜಾರಿ ಮಾಡಲಾಗಿರುವ ಕೊರೊನಾ ನೈಟ್ ಕಫ್ರ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದ ಸಚಿವ ಸಿಂಗ್ ಅವರು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಮುಂದುವರಿಸುವಂತೆ ಸೂಚಿಸಿದರು.

ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ: ಬಳ್ಳಾರಿ ಜಿಲ್ಲೆಯು ಆಂದ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಾಗಿದ್ದು, ಆ ಕಡೆಯಿಂದ ಬರುವ ಮಾರ್ಗಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ ಆ ಕಡೆಯಿಂದ ಬರುವ ಜನರಿಗೆ ತೀವ್ರ ತಪಾಸಣೆ ನಡೆಸಬೇಕು. ಸ್ವಲ್ಪ ಲಕ್ಷಣಗಳು ಕಂಡುಬಂದರೂ ಸಹ ಅಂತರವನ್ನು ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಬೇಕು ಎಂದು ಸಚಿವ ಸಿಂಗ್ ಸೂಚಿಸಿದರು.
15ದಿನಗಳ ಕಾಲ ಪರಿಣಾಮಕಾರಿಯಾಗಿ ತಪಾಸಣೆ ನಡೆಸಿ ಎಂದು ಹೇಳಿದ ಅವರು ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು  ನಿಯೋಜಿಸಿ ಎಂದರು.

ಕಳೆದ ಬಾರಿ 9 ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿತ್ತು. ಈ ಬಾರಿ 6 ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ. ಅಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.

ಜಿಂದಾಲ್ ಸಂಸ್ಥೆಯಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಮತ್ತು ತಮ್ಮ ಸಂಸ್ಥೆಯ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಪಾಲಿಸುವ ಹಾಗೂ ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು ಎಂದು ಜಿಂದಾಲ್ ಅಧಿಕಾರಿ ಪ್ರಭು ಅವರಿಗೆ ಸೂಚಿಸಿದ ಸಚಿವ ಸಿಂಗ್ ಅವರು ಈಗಾಗಲೇ ಅತಿಹೆಚ್ಚು ಸೊಂಕಿತರಿರುವ ತಾಲೂಕುಗಳಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

*ಕೋವಿಡ್ 2ನೇ ಅಲೆಯ ಸೊಂಕಿಗೆ ಯುವಕರು ಮತ್ತು ಮಧ್ಯವಯಸ್ಕರು: ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ವಯಸ್ಕರು ಅತಿಹೆಚ್ಚಾಗಿ ಕೋವಿಡ್ ಸೊಂಕಿಗೆ ಒಳಗಾಗಿದ್ದರು. ಆದರೇ 2ನೇ ಅಲೆಯಲ್ಲಿ ಯುವಜನರು ಮತ್ತು ಮಧ್ಯವಯಸ್ಕರು ಅತಿಹೆಚ್ಚು ಸೊಂಕಿಗೆ ಒಳಗಾಗುತ್ತಿದ್ದಾರೆ; ಅವರ ಟ್ರಾವೆಲ್ ಹಿಸ್ಟರಿ ಅಧ್ಯಯನ ಮಾಡಿದಾಗ ಹೊರಗಡೆ ಪ್ರಯಾಣ ಮಾಡಿರುವುದು ಮತ್ತು ಎಸ್‍ಎಂಎಸ್ ನಿಯಮಾವಳಿಗಳನ್ನು ಪಾಲಿಸದಿರುವುದು ತಿಳಿದುಬಂದಿದೆ ಎಂದು ತಜ್ಞವೈದ್ಯರನೇಕರು ಸಚಿವರು ಮುಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಭಯ ಎನ್ನುವುದು ಕಡಿಮೆಯಾಗಿದೆ; ಸೊಂಕು ಬಂದರೂ ಸಹ ಆಸ್ಪತ್ರೆಯ ಕಿರಿಕಿರಿ ಯಾಕೆ ಅಂತ ಹೋಂ ಐಸೋಲೇಶನ್‍ನಲ್ಲಿರುತ್ತಿದ್ದಾರೆ;ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಅಸಮಾಧಾನಗಳನ್ನು ಅವರು ತೋಡಿಕೊಂಡರು.

ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ ಜಿಲ್ಲೆಗೆ ರಾಜ್ಯ ಸರಕಾರದಿಂದ ಪ್ರತಿನಿತ್ಯ 2350 ಕೋವಿಡ್ ಟೆಸ್ಟ್ ಮಾಡಬೇಕೆನ್ನುವ ಗುರಿ ನಿಗದಿಪಡಿಸಲಾಗಿದ್ದು ನಾವು ಪ್ರತಿನಿತ್ಯ 3500ರಿಂದ 4 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ.
ಸೊಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು ಹಾಗೂ ಕೆಮ್ಮು ಮತ್ತು ಜ್ವರದ ಲಕ್ಷಣವಿದ್ದುಕೊಂಡು ಆಸ್ಪತ್ರೆಗೆ ಬರುವವರನ್ನು ಹಾಗೂ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ತೆರಳಿ ಅಲ್ಲಿಯೂ ಜನರನ್ನು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ನಮ್ಮಲ್ಲಿ ವಿಮ್ಸ್ ನಲ್ಲಿ ಕೋವಿಡ್ ಸೊಂಕು ಪತ್ತೆ ಪ್ರಯೋಗಾಲಯವಿದ್ದು, ಅಜೀಂ ಫ್ರೇಮ್‍ಜೀ ಫೌಂಡೇಶನ್ ಅಡಿ 1 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೂ ಸಹ ಒಂದು ಕೋವಿಡ್ ಸೊಂಕು ಪತ್ತೆ ಲ್ಯಾಬ್ ಇನ್ನೊಂದು ವಾರದಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ನಮ್ಮಲ್ಲಿನ ಕೋವಿಡ್ ಟೆಸ್ಟ್‍ಗಳನ್ನು ಬೇರೆಡೆ ಕಳುಹಿಸದೇ ನಮ್ಮಲ್ಲಿಯೇ ಪರೀಕ್ಷಿಸಿ ತಕ್ಷಣ ಫಲಿತಾಂಶ ತಿಳಿಯಲು ಸಾಧ್ಯವಾಗಲಿದೆ ಎಂದರು.
ಸದ್ಯದ ಪಾಸಿಟಿವಿಟಿ ದರ 100ಕ್ಕೆ ಶೇ.5ರಷ್ಟಿದ್ದು, ಇನ್ನೂ 10 ದಿನಗಳಲ್ಲಿ ಶೇ.10ಕ್ಕಿಂತ ಜಾಸ್ತಿಯಾಗಲಿರುವ ಆತಂಕದ ವಿಷಯವನ್ನು ಡಿಸಿ ಮಾಲಪಾಟಿ ಅವರು ಸಚಿವ ಆನಂದಸಿಂಗ್ ಅವರ ಗಮನಕ್ಕೆ ತಂದರು ಮತ್ತು ಇದಕ್ಕಾಗಿ ಜಿಲ್ಲಾಡಳಿತ ಕೈಗೊಂಡ ಸಿದ್ಧತಾ ಕ್ರಮಗಳನ್ನು ಅವರು ವಿವರಿಸಿದರು.

*ಶೇ.40ರಷ್ಟು ಜನರಿಗೆ ಲಸಿಕೆ: ಜಿಲ್ಲೆಯಲ್ಲಿರುವ 45 ವರ್ಷ ಮೇಲ್ಪಟ್ಟ 6 ಲಕ್ಷ ಜನರು ಹಾಗೂ 60 ವರ್ಷ ಮೇಲ್ಪಟ್ಟ 1.74ಲಕ್ಷ ಜನರಲ್ಲಿ ಇದುವರೆಗೆ 2.64ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದುವರೆಗೆ ಶೇ.40ರಷ್ಟು ಜನರಿಗೆ ಲಸಿಕೆ ನೀಡಿದಂತಾಗಿದೆ.
ಪ್ರತಿನಿತ್ಯ 15 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಬಾಕಿ ಉಳಿದವರಿಗೂ ಶೀಘ್ರ ಲಸಿಕೆ ನೀಡಲು ಕ್ರಮವಹಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸೊಂಕು ಹೆಚ್ಚಳವಾಗುತ್ತಿರುವ ಕಾರಣ ವ್ಯಾಕ್ಸಿನೇಶನ್ ಪಡೆಯಲು ಜನರು ಸ್ವಯಂಪ್ರೇರಿತವಾಗಿ ಮಂದೆಬರುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಸಭೆಗೆ ವಿವರಿಸಿದರು.
ಕಂದಾಯ,ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ ಸೇರಿದಂತೆ 40 ಸಾವಿರ ಜನ ಕೋವಿಡ್ ವಾರಿಯರ್ಸ್ ಗಳಿಗೂ ಲಸಿಕೆ ಹಾಕಲಾಗಿದೆ ಎಂದರು.

*ಬಳ್ಳಾರಿಯಲ್ಲಿ ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಸದ್ಯ 1807 ಸಕ್ರಿಯ ಪ್ರಕರಣಗಳಿದ್ದು,ಅವರಲ್ಲಿ 328ಜನರನ್ನು ಕೋವಿಡ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಕೋವಿಡ್ ಕೆರ್ ಸೆಂಟರ್‍ಗಳಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 1128 ಆಕ್ಸಿಜನ್ ಸೌಲಭ್ಯವಿರುವ ಬೆಡ್‍ಗಳಿದ್ದು,ಅವುಗಳಲ್ಲಿ 115 ಜನರು ದಾಖಲಾಗಿದ್ದಾರೆ.210 ಐಸಿಯೂ ಬೆಡ್‍ಗಳಿದ್ದು, 28 ಭರ್ತಿಯಾಗಿವೆ.118 ವೆಂಟಿಲೇಟರ್‍ಗಳಿವೆ ಎಂದು ಡಿಸಿ ಮಾಲಪಾಟಿ ಅವರು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ 1128 ಆಕ್ಸಿಜನ್ ಬೆಡ್‍ಗಳಿದ್ದು,ಅವುಗಳು ನಿರಂತರವಾಗಿ ನಡೆದರೂ 27ಕೆಎಲ್ ಆಕ್ಸಿಜನ್ ಬೇಕಾಗಲಿದ್ದು, ಸಮರ್ಪಕ ಪ್ರಮಾಣದಲ್ಲಿ ನಮ್ಮಲ್ಲಿ ಆಕ್ಸಿಜನ್ ಲಭ್ಯವಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿರುವುದರಿಂದ ಮಹಾರಾಷ್ಟ್ರ,ಮಧ್ಯಪ್ರದೇಶ ಹಾಗೂ ರಾಜಧಾನಿ ಬೆಂಗಳೂರಿಗೂ ಆಕ್ಸಿಜನ್ ಒದಗಿಸಲು ಬೇಡಿಕೆ ಬರುತ್ತಿವೆ ಎಂದು ವಿವರಿಸಿದರು.
ಕೋವಿಡ್ ಆಸ್ಪತ್ರೆಯನ್ನಾಗಿ ಟ್ರಾಮಾಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು,ಸೊಂಕಿತರು ಹೆಚ್ಚಾದಲ್ಲಿ ನ್ಯೂ ಡೆಂಟಲ್ ಕಾಲೇಜು,ಒಲ್ಡ್ ಡೆಂಟಲ್ ಕಾಲೇಜು, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಕಾಲೇಜು ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಹಾಗೂ ಜಂಬುನಾಥ ಗುಡ್ಡದ ಬಳಿಯ ಹಾಸ್ಟೆಲ್, ಕನ್ನಡ ವಿವಿಯಲ್ಲಿರುವ ಎಸ್ಸಿ/ಎಸ್ಟಿ ಹಾಸ್ಟೆಲ್, ಕೂಡ್ಲಿಗಿಯ ಬಿಸಿಎಂ ಹಾಸ್ಟೆಲ್ ಹಾಗೂ ಸಿರಗುಪ್ಪದ ಪದವಿ ಪೂರ್ವ ಹಾಸ್ಟೆಲ್ ಸೇರಿದಂತೆ ಇನ್ನೀತರೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸಿ ವೈದ್ಯರು ಮತ್ತು ನರ್ಸ್ ಹಾಗೂ ಸಿಬ್ಬಂದಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದರು.

ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ದೇವೆಂದ್ರಪ್ಪ,ಶಾಸಕರಾದ ಅಲ್ಲಂ ವೀರಭದ್ರಪ್ಪ, ಸೋಮಲಿಂಗಪ್ಪ, ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್,ಅಪರ ಜಿಲ್ಲಾಧಿಕಾರಿ ಮಂಜುನಾಥ, ಡಿಎಚ್‍ಒ ಡಾ.ಜನಾರ್ಧನ, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮತ್ತಿತರರು ಇದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...