ಕೋಲಾರ:ವಕ್ಫ್ ಆಸ್ತಿ ಮಾರಲು ಯಾರಿಗೂ ಅಧಿಕಾರವಿಲ್ಲ : ನಜೀರ್ ಅಹಮದ್ 

Source: shabbir | By Arshad Koppa | Published on 21st August 2017, 8:19 AM | State News | Guest Editorial |

ಕೋಲಾರ, ಆಗಸ್ಟ್ 18:    ವಕ್ಫ್ ಆಸ್ತಿಯನ್ನು ಮಾರಲು ಯಾರಿಗೂ ಅಧಿಕಾರವಿಲ್ಲ. ಅದನ್ನು ಕೇವಲ ಲೀಸ್‍ಗೆ ನೀಡಲು ಅವಕಾಶವಿದೆ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಸೀರ್ ಅಹಮದ್ ಅವರು ತಿಳಿಸಿದರು.
    ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತು ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡುತ್ತಾ ಅವರು ಅಧಿಕಾರಿಗಳಿಗೆ ಈ ಮಾಹಿತಿ ನೀಡಿದರು. 
ಇಂದು ಬೆಳಗ್ಗೆ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸಿದ ಅಧ್ಯಕ್ಷರು, ಮದ್ಯಾಹ್ನ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 
ಸಂವಾದ ಸಭೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಕುರಿತು ಬಂದ ದೂರುಗಳಿಗೆ ಉತ್ತರಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಲು 18 ವರ್ಷ ತುಂಬಿದ ಪ್ರತಿಯೊಬ್ಬರೂ ಚುನಾವಣಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರುಗಳನ್ನು ಬೂತ್ ಮಟ್ಟದ ಅಧಿಕಾರಗಳ ಮೂಲಕ ಸೇರಿಸಲು ಅವಕಾಶವಿರುತ್ತದೆ. ಅಧಿಕಾರಿಗಳೂ ಸಹ ಸಕಾಲದಲ್ಲಿ ಮತದಾರರ ಪಟ್ಟಿಯನ್ನು ತಯಾರಿಸಬೇಕೆಂದರು.  
ಸಮುದಾಯದ ಕೆಲವು ಮುಖಂಡರು ಜಿಲ್ಲೆಯಲ್ಲಿ ಎರಡು ತಿಂಗಳಿಂದ ಕೇವಲ 50 ಪಡಿತರ ಚೀಟಿಗಳು ವಿತರಣೆಯಾಗಿಲ್ಲ ಎಂದು ದೂರಿದರು. ಇದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಅಧ್ಯಕ್ಷರು ಪ್ರಸ್ತುತ ಪಡಿತರ ಅರ್ಜಿಗಳು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದ್ದು ಶೇ.89 ರಷ್ಟು ಅರ್ಜಿಗಳು ಗ್ರಾಮ ಲೆಕ್ಕಾಧಿಕಾರಿಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಅತಿ ಶೀಘ್ರದಲ್ಲೇ ಉಳಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡು ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. 
1 ರಿಂದ 5 ತರಗತಿಯ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಂದ ಅಹವಾಲಿಗೆ ಸಂಬಂಧಿಸಿದಂತೆ, ಶಿಕ್ಷಣ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ಜಾಗದ ಸಮಸ್ಯೆ ಇದ್ದಲ್ಲಿ ಅಂತಹ ಶಾಲೆಗಳ ಅಕ್ಕ ಪಕ್ಕ ಬಾಡಿಗೆಗೆ ಕೊಠಡಿಗಳನ್ನು ಪಡೆದು ತರಗತಿ ನಡೆಸಲು ಸೂಚಿಸಿದರು. ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದಲ್ಲಿ ಅಂತಹ ಶಾಲೆಗಳಿಗೆ ಆರ್.ಟಿ.ಇ. ಮುಖಾಂತರ ಹೆಚ್ಚು ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. 
ಕೋಲಾರ ಗಡಿನಾಡ ಜಿಲ್ಲೆಯಾಗಿದ್ದು ಇಲ್ಲಿನ ಅಲ್ಪಸಂಖ್ಯಾತರ ಹಾಸ್ಟೆಲ್‍ಗಳಿಗೆ ಅಂತರಾಜ್ಯ ಮಕ್ಕಳು ದಾಖಲಾತಿ ಪಡೆದಿರುವ ಬಗ್ಗೆ ಮಾಹಿತಿ ವ್ಯಕ್ತವಾದ ಹಿನ್ನಲೆಯಲ್ಲಿ ಅಧ್ಯಕ್ಷರು, ಈ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ. ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಕೇವಲ ಸ್ಥಳೀಯರಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿದರು.    
     ಕೋಲಾರ ಜಿಲ್ಲೆಯಲ್ಲಿ ನೌಕರಿ ಮಾಡುವ ಅಲ್ಪಸಂಖ್ಯಾತರ ಮಹಿಳೆಯರಿಗೆ ಹಾಸ್ಟೆಲ್ ಕಲ್ಪಿಸಬೇಕು ಎಂದ ವಿಷಯಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈಗಾಗಲೇ ಒಂದು ಮಹಿಳಾ ವಸತಿ ನಿಲಯಕ್ಕೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು. 


ಮಕ್ಕಳ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇರುವುದರಿಂದ ಬ್ಯಾಂಕ್‍ಗಳು ಅನಗತ್ಯವಾಗಿ ಕನಿಷ್ಠ ಠೇವಣ  500 ಅಥವಾ 1000 ರೂಗಳನ್ನು ಜಮಾ ಮಾಡುವಂತೆ ಆಗ್ರಹಿಸುತ್ತಾರೆ. ಇಲ್ಲವಾದಲ್ಲಿ ಖಾತೆ ತೆರೆಯಲು ಅವಕಾಶ ನಿರಾಕರಿಸುತ್ತಾರೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿ ಈ ರೀತಿ ಪ್ರಸಂಗಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದರು. ಅಲ್ಲದೆ ಇದೇ ರೀತಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಸಂಬಂಧ ಸಮಸ್ಯೆ ಎದುರಾಗುತ್ತಿದ್ದು ರಾಜ್ಯ ಲೀಡ್ ಬ್ಯಾಂಕರ್‍ಗಳ ಸಮಿತಿಯ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ತಿಳಿಸಿದರು. 
    ವಕ್ಫ್ ಮಂಡಳಿಯ ಆಸ್ತಿ ಒತ್ತುವರಿಯಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗೆ ಪ್ರತ್ಯೇಕ ಅನುದಾನ ಇರುವಂತೆ ಅಲ್ಪಸಂಖ್ಯಾತರ ಕಾಲೋನಿಗಳಿಗೂ ಈ ಅನುಕೂಲವನ್ನು ಕಲ್ಪಿಸಿಕೊಡಬೇಕು. ದರ್ಗಾಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದು ಕೇಂದ್ರ ಸರ್ಕಾರದಿಂದಲೂ ಅನುದಾನಗಳನ್ನು ಬಿಡುಗಡೆ ಮಾಡಿಸಬೇಕೆಂಬ ಮನವಿಗೆ, ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು. 
    ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಕ್ರೈಸ್ತ ಪಾದ್ರಿಗಳಿಗೆ ಮಸಾಶನ ನೀಡಲು ಅನುವು ಮಾಡಿಕೊಡಬೇಕೆಂಬ ಮನವಿಗೆ, ಅಧ್ಯಕ್ಷರು ಪ್ರತಿಕ್ರಿಯಿಸಿ ಕ್ರಿಶ್ಚಿಯನ್ ಅಭಿವೃದ್ಧಿ ನಿಧಿಯಲ್ಲಿ 175 ಕೋಟಿ ಹಣವಿದ್ದು ಇದಕ್ಕೆ ಸಚಿವರಾದ ಕೆ.ಜೆ.ಜಾರ್ಜ್ ಅವರು ಅಧ್ಯಕ್ಷರಾಗಿರುತ್ತಾರೆ. ಈ ಕುರಿತು ಅವರೊಂದಿಗೆ ಚರ್ಚಿಸಲಾಗುವುದು ಎಂದರು. 
     ಖಾಸಗಿ ಆಸ್ಪತ್ರೆಗಳ ಹಣ ಸುಲಿಗೆ ದಂದೆಗೆ ಕಡಿವಾಣ ಹಾಕಲು ಖಾಸಗಿ ಆಸ್ಪತ್ರೆಗಳ ನಿಯಂತ್ರಣಾ ಕಾಯ್ದೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್.ರಮೇಶ್‍ಕುಮಾರ್ ಅವರು ಮುತುವರ್ಜಿ ವಹಿಸಿ ಮಸೂದೆಯನ್ನು ಮಂಡಿಸಿದ್ದು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ತಿಳಿಸಿದರು. 
    ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗಾಗಿ ವಸತಿ ಯೋಜನೆಗಳು ಶ್ರೀನಿವಾಸಪುರದಲ್ಲಿ ಹೊರತು ಪಡಿಸಿದರೆ ಬೇರೆಡೆ ಅಷ್ಟಾಗಿ ತೃಪ್ತಿಕರವಾಗಿ ಅನುಷ್ಠಾನಗೊಂಡಿಲ್ಲ ಎಂದು ಅಧ್ಯಕ್ಷರು ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ವಿತರಿಸಲು ಅವಕಾಶವಿದ್ದು ನಗರ ಪ್ರದೇಶಗಳಲ್ಲಿ ಇರುವುದಿಲ್ಲ. ನಗರ ಪ್ರದೇಶಗಳಲ್ಲಿ ಕೇವಲ ಬಹುಮಹಡಿ ಸಮುಚ್ಛಯಗಳಲ್ಲಿ ಮನೆ ವಿತರಣೆಗೆ ಮಾತ್ರ ಅವಕಾಶವಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಅಗತ್ಯವಿದ್ದಲ್ಲಿ ವಸತಿ ನಿಗಮ ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಅನುಕೂಲ ಮಾಡಿಕೊಡಲಾಗುವುದು ಎಂದ ಅಧ್ಯಕ್ಷರು, ವಸತಿ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಸೂಚಿಸಿದರು. 
    ಪ್ರಧಾನ ಮಂತ್ರಿಗಳ 15 ಅಂಶದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು ತಾಲ್ಲೂಕು ಮಟ್ಟದ ಮಾಹಿತಿ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಮೊದಲು ಯೋಜನೆಗಳ ಬಗ್ಗೆ ತರಬೇತಿ ನೀಡಿ ಎಂದು ಅಧ್ಯಕ್ಷರು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸೀನಾ ಅವರಿಗೆ ಸೂಚನೆ ನೀಡಿದರು. ಮೌಲ್ವಿಗಳು ಹಾಗೂ ಕ್ರೈಸ್ತ ಧರ್ಮಗುರುಗಳೊಂದಿಗೆ ಸಭೆ ನಡೆಸಿ ಈ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಪ್ರಾರ್ಥನಾ ಸಮಯದಲ್ಲಿ ಅರಿವು ಮೂಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸೀನಾ ಅವರು ಸಭೆಗೆ ತಿಳಿಸಿದರು. ಇದನ್ನು ಅಧ್ಯಕ್ಷರು ಒಳ್ಳೆಯ ಕಾರ್ಯ ಎಂದು ಶ್ಲಾಘಿಸಿದರು.
    ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನಿಸ್ ಸಿರಾಜ್, ಸದಸ್ಯರುಗಳಾದ ಅಬ್ದುಲ್ ಹಮೀದ್, ಮಿಟಿಲ್ಲಾ ಡಿಸೋಜಾó, ಬಲಜೀತ್ ಸಿಂಗ್, ರಫೀ ಬಂಡಾರಿ, ಮಹೇಂದ್ರ ಜೈನ್, ಮೆಹಮೂದ್ ಪಟೇಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣ  ಕಟೋಚ್ ಸಫೆಟ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸೇರಿದಂತೆ ಅಲ್ಪಸಂಖ್ಯಾತರ ಮುಖಂಡರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...