ಕೋಲಾರ: ಮೇವು ಬೆಳೆ ಬೆಳೆಸುವುದು ಸಮುದಾಯ ಕಾರ್ಯವಾಗಬೇಕು:- ಡಾ.ಕೆ.ವಿ.ತ್ರಿಲೋಕ್ ಚಂದ್ರ 

Source: shabbir | By Arshad Koppa | Published on 8th August 2017, 8:14 AM | State News | Guest Editorial |

ಕೋಲಾರ, ಆಗಸ್ಟ್ 07 :    ಜಾನುವಾರುಗಳಿಗೆ ಮೇವು ಆಹಾರದಂತೆ ಪ್ರತಿನಿತ್ಯ ಅಗತ್ಯವಿರುವಂತಹದ್ದು. ಹಾಗಾಗಿ ಕೇವಲ ಕೆಲವರು ಕೆಲವೊಮ್ಮೆ ಮಾತ್ರ ಮೇವು ಬೆಳೆ ಬೆಳೆಯುವುದು ಸೂಕ್ತವಲ್ಲ. ಇದು ವರ್ಷದುದ್ದಕ್ಕೂ ನಡೆಯಬೇಕಾದ ಪ್ರಕ್ರಿಯೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ತಿಳಿಸಿದರು. 


    ಇಂದು ತಮ್ಮ ಕಚೇರಿಯಲ್ಲಿ ವಾರದ ಬರ ನಿರ್ವಹಣಾ ಸಭೆಯನ್ನು ನಡೆಸಿದ ಅವರು, ಸಹಕಾರ ಸಂಸ್ಥೆಗಳು ತಮ್ಮ ಸದಸ್ಯರನ್ನು ವರ್ಷದುದ್ದಕ್ಕೂ ಮೇವು ಬೆಳೆ ಬೆಳೆಯುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಎರಡು ಎಕರೆ ಜಮೀನಿರುವಂತಹ ರೈತನೂ ಸಹ ಕನಿಷ್ಠ ಅರ್ಧ ಎಕರೆಯಷ್ಟಾದರೂ ಮೇವು ಬೆಳೆಯನ್ನು ಬೆಳೆಯಬೇಕು. ನೀರು ಲಭ್ಯವಿರುವಂತಹ ರೈತರು ತಮ್ಮ ಜಮೀನುಗಳಲ್ಲಿ ತಮಗೆ ಬೇಕಾಗಿರುವಷ್ಟು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನ ರೈತರ ಬೇಡಿಕೆಯನ್ವಯ ಹೆಚ್ಚಾಗಿ ಮೇವು ಬೆಳೆಯನ್ನು ಬೆಳೆದು ಇದನ್ನು ಸಮುದಾಯದ ಕಾರ್ಯವನ್ನಾಗಿಸಬೇಕು ಎಂದು ಕರೆಕೊಟ್ಟರು.
    ರೈತರನ್ನು ಕೇವಲ ಹಾಲು ಉತ್ಪಾದನೆಗೆ ಮಾತ್ರವಲ್ಲದೆ ಸತತ ಮೇವು ಬೆಳೆ ಬೆಳೆಯುವಂತೆ ಸಹಕಾರ ಸಂಘಗಳು ನಿರಂತರ ಪ್ರೇರೇಪಿಸುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಮೂಹಿಕವಾಗಿ ಮೇವು ಬೆಳೆಯಲು ಯೋಗ್ಯವಿರುವ ಪ್ರದೇಶಗಳನ್ನು ಗುರುತಿಸಿ ಸಾಮೂಹಿಕವಾಗಿ ಆ ವ್ಯಾಪ್ತಿಯಲ್ಲಿ ಅಗತ್ಯವಿರುವಂತಹ ಮೇವಿನ ಬೇಡಿಕೆಯನ್ನು ಪೂರೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 
    ಸಾಮಾಜಿಕ ಅರಣ್ಯ ಇಲಾಖೆಯಿಂದ ನೀಡಲಾಗುವ ಮೇವಿನ ಮರಗಳನ್ನೂ ಸಹ ಬೆಳೆಸುವಂತೆ ರೈತರಿಗೆ ಅಗತ್ಯ ಮಾಹಿತಿ ಹಾಗೂ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದ ಜಿಲ್ಲಾಧಿಕಾರಿಗಳು, ಹಾಲು ಒಕ್ಕೂಟ ಈ ಸಸಿಗಳನ್ನು ಖರೀದಿಸಿ ತನ್ನ ಸದಸ್ಯರುಗಳಿಗೆ ಉಚಿತವಾಗಿ ವಿತರಿಸಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. 
    ಮುಂದಿನ ಸಭೆಯಲ್ಲಿ ಹಾಲು ಒಕ್ಕೂಟ ಹಾಗೂ ಹಾಲು ಉತ್ಪಾದಕ ಸಂಘದ ಅಧಿಕಾರಿಗಳು ರೈತರನ್ನು ಪ್ರೇರೇಪಿಸಲು ಸೂಕ್ತ ಕ್ರಿಯಾ ಯೋಜನೆಯನ್ನು ರಚಿಸಿ ಮಂಡಿಸುವಂತೆ ಅವರು ತಿಳಿಸಿದರು. ಬರ ನಿರ್ವಹಣಾ ಕಾರ್ಯದಲ್ಲಿ ತೊಡಗಿರುವ ಎಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡಂತೆ ಪ್ರತಿ ವಾರ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆಯನ್ನು ನಡೆಸಿ ಅಗತ್ಯ ಕ್ರಮಗಳ ಬಗ್ಗೆ ಹಾಗೂ ವಸ್ತುಸ್ಥಿತಿ ಪರಿಶೀಲನೆ ಕುರಿತು ಅವಲೋಕಿಸಬೇಕು ಎಂದು ಅವರು ಸೂಚಿಸಿದರು. 
    ಮೇವು ಬೆಳೆ ಬೆಳೆಯಲು ಸೂಕ್ತ ಭೂಮಿ ಹಾಗೂ ನೀರಿನ ವ್ಯವಸ್ಥೆ ಇರುವಂತಹ ರೈತರ ಮಾಹಿತಿಯನ್ನು ಕೂಡಲೇ ಸಂಗ್ರಹಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಬೆಸ್ಕಾಂ ಬಳಿ ಇರುವಂತಹ ಅಂಕಿ ಅಂಶಗಳನ್ನು ಅನುಸರಿಸಿ ತಮ್ಮ ಕ್ಷೇತ್ರ ಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ಕ್ರೋಢೀಕರಿಸಲು ತಿಳಿಸಿದರು. 
    ಇದೇ ಸಂದರ್ಭದಲ್ಲಿ ಎಲ್ಲಾ ರೀತಿಯ ಬೆಳೆಗಳಿಗೆ ವಿಮೆ ಮಾಡಿಸುವಂತೆ ರೈತರನ್ನು ಜಾಗೃತಗೊಳಿಸಬೇಕಾಗಿದ್ದು ಇನ್ನೂ ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. 
    ಬೆಳೆ ಹಾನಿ ಪರಿಹಾರ ನೀಡುವ ಪ್ರಮಾಣದ ಪ್ರಗತಿ ಸಮಾಧಾನಕರವಾಗಿಲ್ಲ ಎಂದ ಅವರು, ಶೀಘ್ರವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...