ಕೋಲಾರ:ಕಾಣೆಯಾದ ಮಕ್ಕಳ ಪತ್ತೆಗೆ ಆಧಾರ್ ಬಳಸಿ: ಡಾ.ಕೆ.ವಿ.ತ್ರಿಲೋಕ್ ಚಂದ್ರ

Source: shabbir | By Arshad Koppa | Published on 2nd August 2017, 8:12 AM | Coastal News | Guest Editorial |

ಕೋಲಾರ, ಆಗಸ್ಟ್ 01:ಬಾಲ ಮಂದಿರದಿಂದ ತಪ್ಪಿಸಿಕೊಂಡು ಕಾಣೆಯಾಗಿರುವ ಮಕ್ಕಳನ್ನು ಹುಡುಕಲು ಆಧಾರ್ ಬಳಸಲು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಸೂಚಿಸಿದರು. 
    ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕಾಣೆಯಾಗಿರುವ ಮಹಿಳಾ ಮತ್ತು ಮಕ್ಕಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ ಮಂದಿರಗಳಲ್ಲಿ ರಕ್ಷಣಾ ನ್ಯೂನತೆಗಳಿಂದ ಮಕ್ಕಳು ತಪ್ಪಿಸಿಕೊಂಡು ಹೋಗುವುದನ್ನು ತಡೆಯಲು ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಾಲ ಮಂದಿರಗಳ ನಿರ್ವಹಣೆಗೆ ನೀಡಲಾಗಿರುವ ಅನುದಾನವನ್ನು ರಕ್ಷಣಾ ವ್ಯವಸ್ಥೆ ಎಷ್ಟು ಮಟ್ಟಿಗೆ ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಿದರು. 
    ರಾತ್ರಿ ಹೊತ್ತು ಹೆಚ್ಚು ಗಮನವಹಿಸಿ ಬಾಲ ಮಂದಿರಗಳ ಕಾವಲು ಇರಬೇಕು. ಸಂಸ್ಥೆಗಳ ಸುತ್ತ ತಡೆಗೋಡೆಗಳ ಎತ್ತರವನ್ನು ಹೆಚ್ಚಿಸಬೇಕು ಎಂದು ಅವರು ಸೂಚಿಸಿದರು. ತಪ್ಪಿಸಿಕೊಂಡಿರುವ ಮಕ್ಕಳಲ್ಲಿ ಬಹುತೇಕ ಒಡಿಶಾ ಮತ್ತು ಉತ್ತರಾಖಂಡ ರಾಜ್ಯದ ಮಕ್ಕಳಾಗಿದ್ದು ಇವರುಗಳ ಆಧಾರ್ ಗುರುತಿನ ಚೀಟಿಯನ್ನು ಮಾಡಿಸಲಾಗಿದ್ದು ಅವರನ್ನು ಪತ್ತೆ ಹಚ್ಚಲು ಆಧಾರ್ ಗುರುತಿನ ಚೀಟಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. 
    ಅಲ್ಲದೆ, ರಾಜ್ಯ ಮಕ್ಕಳ ರಕ್ಷಣಾ ಸಮಿತಿಗೆ ಕಾಣೆಯಾದ ಮಕ್ಕಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಇನ್ನು ಮುಂದೆ ಬಾಲ ಮಂದಿರಗಳಿಗೆ ಪ್ರವೇಶ ಪಡೆಯುವ ಮಕ್ಕಳ ಆಧಾರ್ ನೋಂದಣ ಯನ್ನು ಮೊದಲು ಮಾಡಿಸುವಂತೆ ಸೂಚಿಸಿದರು. 
    ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ರೈಲ್ವೇ ನಿಲ್ದಾಣಗಳಲ್ಲಿ ಮುಖ್ಯವಾಗಿ ಖಾಲಿ ಇರುವ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಯ ಹುದ್ದೆಯನ್ನು ರೈಲ್ವೇ ಇಲಾಖೆಯಿಂದ ಭರ್ತಿ ಮಾಡುವವರೆಗೂ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನೇ ತಾತ್ಕಾಲಿಕವಾಗಿ ನೇಮಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು. 
    ಮಾಲೂರಿನಲ್ಲಿ ಪರಿತ್ಯಕ್ತ ಮಹಿಳೆಯರ ಪುನರ್ವಸತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಆಶಾಗೆ ಕೂಡ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 
    ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಮಾಧ್ಯಮಗಳಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 
    ಕಳೆದ ಎರಡು ವರ್ಷಗಳಲ್ಲಿ ಕಾಣೆಯಾಗಿರುವ ಮಹಿಳೆಯರು ಹಾಗೂ ಮಕ್ಕಳ ಪ್ರಕರಣಗಳ ಮಾಹಿತಿಯನ್ನು ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಅವರುಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಈ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸಬಹುದಾಗಿದೆ ಎಂದ ಜಿಲ್ಲಾಧಿಕಾರಿಗಳು ಇನ್ನು 2 ವಾರಗಳ ನಂತರ ಸೇರುವ ಸಭೆಗೆ ಈ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ ಸಾರ್ವಜನಿಕರು ಯಾವುದೇ ಕಾಣೆಯಾದ ಮಹಿಳೆ ಅಥವಾ ಮಕ್ಕಳ ಮಾಹಿತಿ ಇದ್ದಲ್ಲಿ ಸಮಿತಿಯ ಗಮನಕ್ಕೆ ತರುವಂತೆ ಕೋರಿದರು. 
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿನೋದ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.  
     
ಧರಪಟ್ಟಿ ಅಹ್ವಾನ
ಕೋಲಾರ, ಆಗಸ್ಟ್ 01 :ಸರ್ಕಾರಿ ವಾಹನ ಮಹೇಂದ್ರ ಬುಲೋರೋ ನೊಂದಣ  ಸಂಖ್ಯೆ: ಕೆಎ-07 ಜಿ-583 ರ ವಾಹನಕ್ಕೆ 05 ಹೊಸ ಟೈರು ಮತ್ತು ಟ್ಯೂಬ್ ಗಳನ್ನು ಖರೀದಿಸಿ ಅಳವಡಿಸಲು ಅಧಿಕೃತ ಸಂಸ್ಥೆದಾರರಿಂದ ಧರಪಟ್ಟಿಗಳನ್ನು ಅಹ್ವಾನಿಸಲಾಗಿದೆ. 
ಧರಪಟ್ಟಿಗಳನ್ನು ಕೋಲಾರ ಅಬಕಾರಿ ಇಲಾಖೆಗೆ ದಿನಾಂಕ: 05-08-2017 ರಂದು ಮಧ್ಯಾಹ್ನ 3 ಗಂಟೆಯೊಳಗೆ ತಲುಪಿಸಬೇಕು. ಸ್ವೀಕೃತ ಧರಪಟ್ಟಿಗಳನ್ನು ಅಂದು ಸಂಜೆ 04 ಗಂಟೆಗೆ ತೆರೆಯಲಾಗುವುದು ಎಂದು ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...