ಕೋಲಾರ:ಶಿಶು ಮರಣ ಪ್ರಮಾಣ ಕಡಿಮೆ ಮಾಡಲು “ಮಾತೃಪೂರ್ಣ” ವರದಾನ-ಪಲ್ಲವಿ ಹೊನ್ನಾಪುರ

Source: shabbir | By Arshad Koppa | Published on 29th September 2017, 8:48 AM | State News | Special Report |

“ಮಾತೃಪೂರ್ಣ ಯೋಜನೆಯ ಉದ್ಘಾಟನಾ ಸಮಾರಂಭ” ಉದ್ಘಾಟನೆ: ಶ್ರೀ ಕೆ.ಆರ್.ರಮೇಶ್ ಕುಮಾರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಘನ ಉಪಸ್ಥಿತಿ : ಶ್ರೀ ಕೆ.ಹೆಚ್.ಮುನಿಯಪ್ಪ ಲೋಕಸಭಾ ಸದಸ್ಯರು ಅಧ್ಯಕ್ಷತೆ: ಶ್ರೀ ವರ್ತೂರು ಆರ್. ಪ್ರಕಾಶ್, ಶಾಸಕರು, ಕೋಲಾರ ವಿಧಾನ ಸಭಾ ಕ್ಷೇತ್ರ. ದಿನಾಂಕ: 02-10-2017 ಬೆಳಗ್ಗೆ: 11.00 ಗಂಟೆಗೆ ಟಿ.ಚನ್ನಯ್ಯ ರಂಗಮಂದಿರ, ಕೋಲಾರ.

ಕೋಲಾರದ ಗ್ರಾಮೀಣ ಪ್ರದೇಶದ ಮತ್ತು ಬಡಕುಟುಂಬದ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಉತ್ತಮಗೊಳಿಸಲು ಮತ್ತು ರಕ್ತಹೀನತೆ ಕಡಿಮೆಗೊಳಿಸಿ ತನ್ಮೂಲಕ ಶಿಶು ಹಾಗೂ ಮಾತೃ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಮಹತ್ವಾಕಾಂಕ್ಷಿ ‘ಮಾತೃಪೂರ್ಣ’ ಯೋಜನೆಯು ವರದಾನವಾಗಲಿದೆ.

ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಜಿಲ್ಲೆಯ ಒಟ್ಟು 28,857 ಗರ್ಭಿಣಿಯರು ಮತ್ತು ಬಾಣಂತಿಯರಿಗೆ 2,061 ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಉಚಿತ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ಮಾತೃಪೂರ್ಣ’ ಯೋಜನೆಗೆ ಇದೇ ಅಕ್ಟೋಬರ್ 2 ರಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ ಆರ್ ರಮೇಶ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ.

ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪ್ರಸ್ತುತ ಜಿಲ್ಲೆಯ ಸರಾಸರಿ ಮಾತೃ ಮರಣ ಪ್ರಮಾಣ 17 ಆಗಿದ್ದು, ಶಿಶು ಮರಣ ಪ್ರಮಾಣ 12.92 ಆಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎನ್ನುತ್ತಾರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಂ. ಸೌಮ್ಯ ಅವರು.

ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ ಈ ಯೋಜನೆಯಡಿ, ಜಿಲ್ಲೆಯಲ್ಲಿನ ನೊಂದಾಯಿತ ಎಲ್ಲಾ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಿಂಗಳಿಗೆ 25 ದಿನದಂತೆ ವರ್ಷದಲ್ಲಿ 300 ದಿನ ನಿತ್ಯ ಮಧ್ಯಾಹ್ನದ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ.

ಈ ಯೋಜನೆಯನ್ನು ಈಗಾಗಲೇ ರಾಯಚೂರು ಜಿಲ್ಲೆಯ ಮಾನ್ವಿ. ಮೈಸೂರಿನ ಎಚ್.ಡಿ. ಕೋಟೆ, ತುಮಕೂರಿನ ಮಧುಗಿರಿ ಮತ್ತು ಬಾಗಲಕೋಟೆಯ ಜಮಖಂಡಿ ತಾಲ್ಲೂಕುಗಳಲ್ಲಿ ಯೋಜನೆಯು ಈಗಾಗಲೇ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸಲಾಗಿದೆ ಎನ್ನುವ ಸೌಮ್ಯ ಅವರು, ಇದರ ಪ್ರಯೋಜನವನ್ನು ಸಮರ್ಪಕವಾಗಿ ಬುಡಮಟ್ಟದಲ್ಲಿ ಅರ್ಹರಿಗೆ ತಲುಪಿಸುವ ಸಲುವಾಗಿ ಹೋಬಳಿ ಕೇಂದ್ರಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು, ಆರೋಗ್ಯ ಸಿಬ್ಬಂದಿ, ಸ್ತ್ರೀಶಕ್ತಿ, ಆರೋಗ್ಯ ಸಿಬ್ಬಂದಿ ಸ್ತ್ರೀಶಕ್ತಿ ಸಂಘಟನೆಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು

ಸಹಾಯಕಿಯರಿಗೆ ಅರಿವು ಕಾರ್ಯಾಗಾರಗಳನ್ನು ನಡೆಸಲಾಗುವುದು ಎನ್ನುತ್ತಾರೆ.

 

ಮಾತೃಪೂರ್ಣ ಮೆನು:

ಈ ಯೋಜನೆಯಡಿ ನೀಡಲಾಗುವ ಬಿಸಿಯೂಟದಲ್ಲಿ ಅನ್ನ, ಸಾಂಬಾರ್, ಬೇಯಿಸಿದ ಮೊಟ್ಟೆ, ಪಲ್ಯ, 200 ಮಿಲಿ ಹಾಲು, ಶೇಂಗಾ ಚಿಕ್ಕಿ (ಮಿಠಾಯಿ) ಸೇರಿರುತ್ತದೆ. ಮೊಟ್ಟೆ ಸೇವಿಸದವರಿಗೆ ಮೊಳಕೆ ಕಾಳು ನೀಡಲಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ದಿನಕ್ಕೆ ಅಗತ್ಯವಿರುವ ಶೇ 40 ರಿಂದ 45 ರಷ್ಟು ಪ್ರೋಟೀನ್, ಕ್ಯಾಲರಿ ಮತ್ತು ಕ್ಯಾಲ್ಸಿಯಂ ಈ ಒಂದು ಹೊತ್ತಿನ ಊಟದಿಂದ ದೊರಕುತ್ತದೆ. ಜೊತೆಗೆ ಕಬ್ಬಿಣಾಂಶಯುಕ್ತ ಮಾತ್ರೆಯನ್ನು ನೀಡಲಾಗುತ್ತಿದ್ದು, ಊಟವಾದ ಬಳಿಕ ಕಡ್ಡಾಯವಾಗಿ ಸೇವಿಸುವಂತೆ ಸೂಚಿಸಲಾಗುತ್ತದೆ.

ಮೂರು ತಿಂಗಳು ತುಂಬಿದ ಗರ್ಭಿಣಿಯರಿಂದ ಮಗು ಜನಿಸಿದ ನಂತರ ಬಾಣಂತಿ ಅವಧಿಯ 6 ತಿಂಗಳವರೆಗೆ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ. ಅಂದರೆ ಒಟ್ಟು 12 ತಿಂಗಳು ಉಚಿತ ಊಟ ನೀಡಲಾಗುತ್ತದೆ. ಪ್ರತಿ ಊಟಕ್ಕೆ ರೂ.21/- ವೆಚ್ಚವಾಗುತ್ತದೆ. ಹೆಸರು ನೊಂದಾಯಿಸಿ ಗರ್ಭಿಣಿಯರು 3ನೇ ತಿಂಗಳಿನಿಂದ 8ನೇ ತಿಂಗಳ ಅಂತ್ಯದವರೆಗೂ ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸೇವಿಸಬೇಕು. 9ನೇ ತಿಂಗಳಿನಿಂದ ಬಾಣಂತಿ ಅವಧಿಯ 45 ದಿನದವರೆಗೂ ಸಹಾಯಕಿಯರು ಮನೆ ಬಾಗಿಲಿಗೆ ಊಟದ ಡಬ್ಬಿ ತಲುಪಿಸುತ್ತಾರೆ. ಉಳಿದ 41/2 ತಿಂಗಳು ಬಾಣಂತಿಯರು ಕೇಂದ್ರಕ್ಕೆ ಬರಬೇಕಾಗುತ್ತದೆ. ಇದಕ್ಕಾಗಿ ಸಹಾಯಕಿಯರಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಅನುಭವ ಹಂಚಿಕೆಗೆ ಒಂದು ವೇದಿಕೆ:

ಗರ್ಭಿಣಿಯರ ನೊಂದಣಿಯಿಂದ ಅವರಿಗೆ ಪ್ರಸವಪೂರ್ವ ಆರೈಕೆ ಸೇವೆಗಳು ದೊರಕುತ್ತದೆ. ಇಲ್ಲಿ ಹೆರಿಗೆಯ ಅನುಭವ ಹೊಂದಿರುವವರು ಮತ್ತು ಅನುಭವಿಗಳು ಒಂದೆಡೆ ಸೇರುವುದರಿಂದ ಅನುಭವ ಹಂಚಿಕೆ ಸಾಧ್ಯವಾಗುತ್ತದೆ. ಈ ವೇಳೆ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಸ್ತನ್ಯ ಪಾನದ ಮಹತ್ವ, ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು, ನಿಯಮಿತ ವೈದ್ಯಕೀಯ ತಪಾಸಣೆ, ವಿಶ್ರಾಂತಿ ಮುಂತಾದ ಅಗತ್ಯ ಮಾಹಿತಿ ನೀಡಲಾಗುತ್ತದೆ.

ಪ್ರಸ್ತುತ ಗರ್ಭಿಣಿಯರು ಇರುವ ಮನೆಗೆ ಅಕ್ಕಿ, ಗೋಧಿ ಮುಂತಾದ ಧಾನ್ಯ ಪದಾರ್ಥಗಳನ್ನು ನೀಡುವ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯನ್ನು ಅಕ್ಟೋಬರ್ 1 ರಿಂದ ಸ್ಥಗಿತಗೊಳಿಸಲಾಗುತ್ತದೆ. ಮಾತೃಪೂರ್ಣ ಯೋಜನೆಯು ಅಕ್ಟೋಬರ್-2 ರಿಂದ ಪರಿಣಾಮಕಾರಿಯಾಗಿ ಜಾರಿಗೆ

ಬರಲಿದೆ ಎಂದು ಸೌಮ್ಯ ಅವರು ತಿಳಿಸುತ್ತಾರೆ. ಒಟ್ಟಾರೆ, ಈ ಯೋಜನೆಯು ಜಿಲ್ಲೆಯ ಮಾತೃ ಹಾಗೂ ಶಿಶು ಆರೋಗ್ಯ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಯನ್ನು ತರುವುದರಲ್ಲಿ ಸಂಶಯವಿಲ್ಲ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...