‘ಕಾರವಾರ ವಾರಿಯರ್ಸ್’ ಮುಡಿಗೆ ‘ಮೀಡಿಯಾ ಕಪ್’ ಭಟ್ಕಳ ಮಿಡಿಯಾ ವಾರಿಯರ್ಸ್ ರನ್ನರ್ಸ್.

Source: SO News | By Laxmi Tanaya | Published on 11th April 2021, 8:25 PM | Coastal News |

ಕಾರವಾರ : ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ ‘ಮೀಡಿಯಾ ಕಪ್ 2021’ರ ಚಾಂಪಿಯನ್ ಆಗಿ ‘ಕಾರವಾರ ವಾರಿಯರ್ಸ್’ ತಂಡವು ಹೊರಹೊಮ್ಮಿತು. ನಗರದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ‘ಭಟ್ಕಳ ಮೀಡಿಯಾ ವಾರಿಯರ್ಸ್’ ವಿರುದ್ಧ ಭರ್ಜರಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಟ್ಕಳ ತಂಡವು, 10 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ‘ಕಾರವಾರ ವಾರಿಯರ್ಸ್’ ತಂಡವು 7.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 93 ರನ್‌ ಗಳಿಸಿ ₹ 25 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಆದ ಭಟ್ಕಳ ತಂಡವು ₹ 15 ಸಾವಿರ ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ ‘ಕಾರವಾರ ವಾರಿಯರ್ಸ್’ನ ಬ್ಯಾಟ್ಸ್‌ಮ್ಯಾನ್ ಸತೀಶ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯಲ್ಲಿ ಒಟ್ಟು 105 ರನ್ ಗಳಿಸಿದ ‘ಭಟ್ಕಳ ಮೀಡಿಯಾ ವಾರಿಯರ್ಸ್’ನ ಶಾಹಿದ್ ‘ಉತ್ತಮ ಬ್ಯಾಟ್ಸ್‌ಮ್ಯಾನ್’ ಗೌರವ ಗಳಿಸಿದರು. ಆರು ವಿಕೆಟ್ ಪಡೆದುಕೊಂಡ ನಿತಿನ್ ‘ಉತ್ತಮ ಬೌಲರ್’ ಪುರಸ್ಕಾರ ಸ್ವೀಕರಿಸಿದರು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತಿನ್ ‘ಮ್ಯಾನ್ ಆಫ್ ದ ಸೀರೀಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಭಾನುವಾರ ಬೆಳಿಗ್ಗೆ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ‘ಭಟ್ಕಳ ಮೀಡಿಯಾ ವಾರಿಯರ್ಸ್’ ತಂಡವು, ‘ಶಿರಸಿ ಸ್ಟಾರ್ಸ್’ ತಂಡವನ್ನು ಕಾರವಾರ ವಾರಿಯರ್ಸ್’ ತಂಡವು, ‘ಕಾರವಾರ ಫೈಟರ್ಸ್’ ತಂಡವನ್ನು ಎರಡನೇ ಪಂದ್ಯದಲ್ಲಿ ಪರಾಭವಗೊಳಿಸಿದ್ದವು.

ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ‘ಪತ್ರಕರ್ತರು ತಮ್ಮ ದೈನಂದಿನ ವೃತ್ತಿಯಲ್ಲಿ ಬಹಳ ಒತ್ತಡದಲ್ಲಿರುತ್ತಾರೆ. ಅದರ ನಡುವೆಯೂ ಎರಡು ದಿನಗಳಿಂದ ಕ್ರಿಕೆಟ್ ಆಟದಲ್ಲಿ ಭಾಗವಹಿಸಿದ್ದು ಶ್ಲಾಘನೀಯ. ಈ ರೀತಿ ಇಡೀ ಜಿಲ್ಲೆಯ ಪತ್ರಕರ್ತರನ್ನೆಲ್ಲ ಒಗ್ಗೂಡಿಸಿ ಪಂದ್ಯಾವಳಿ ಆಯೋಜಿಸುವುದು ಸುಲಭದ ಕಾರ್ಯವಲ್ಲ. ಮುಂದೆಯೂ ಎಲ್ಲರೂ ಇದೇ ಮಾದರಿಯಲ್ಲಿ ಒಂದೇ ಮನಸ್ಥಿತಿಯಿಂದ ಮುನ್ನಡೆಯಿರಿ’ ಎಂದು ಹಾರೈಸಿದರು.

ಭಟ್ಕಳದ ಜೆ.ಡಿ.ಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಮಾತನಾಡಿ, ‘ಕ್ರೀಡೆಯಲ್ಲಿ ಪ್ರೀತಿ, ಪ್ರೇಮ, ಸೌಹಾರ್ದತೆ ಇರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಇಂತಹ ಪಂದ್ಯಾವಳಿಗಳು ಆಯೋಜನೆಯಾಗಲಿ’ ಎಂದು ಆಶಿಸಿದರು. ಪ್ರಮುಖರಾದ ಆನಂದ ನಾಯ್ಕ ಮಾತನಾಡಿದರು.

ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ಉಪಾಧ್ಯಕ್ಷ ಗಿರೀಶ, ಕಾರ್ಯದರ್ಶಿ ದೀಪಕ್ ಶೆಟ್ಟಿ, ರತ್ನಾಕರ ನಾಯ್ಕ, ಇನಾಯತ್ ಉಲ್ಲಾ ಗವಾಯಿ, ಕಾರವಾರ ತಂಡದ ನಾಯಕ ಅರವಿಂದ ಗುನಗಿ ಹಾಗೂ ಭಟ್ಕಳ ತಂಡದ ನಾಯಕ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಹಿಲ್ ಮತ್ತು ಅರುಣ್ ಪಂದ್ಯಾವಳಿಯುದ್ದಕ್ಕೂ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...