ದೌರ್ಜನ್ಯ ಮುಕ್ತ ಅಭಿಯಾನ ಹಾಗೂ ರೋಜ್ಗಾರ್ ದಿನ ಆಚರರಣೆ

Source: S O News | By I.G. Bhatkali | Published on 26th October 2021, 5:26 PM | Coastal News |

ಕಾರವಾರ:  ತಾಲೂಕಿನ ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾತರ ಗ್ರಾಮದಲ್ಲಿ ನರೇಗಾದಡಿ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ಪಿಚ್ಚಿಂಗ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮಹಿಳಾ ಕೂಲಿಕಾರರಿಗಾಗಿ "ದೌರ್ಜನ್ಯ ಮುಕ್ತಿ ಅಭಿಯಾನ ಹಾಗೂ ರೋಜಗಾರ್ ದಿವಸ್" ಮಂಗಳವಾರದಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕಾ ಪಂಚಾಯತ್‍ನ ಸಹಾಯಕ ನಿರ್ದೇಶಕಿ(ನರೇಗಾ) ರೂಪಾಲಿ ಬಡಕುಂದ್ರಿ ಅವರು ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಸಮುದಾಯ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಮಹಿಳಾ ಕಾರ್ಮಿಕರಿಗೆ ಉದ್ಯೋಗ ಖಾತರಿಯಲ್ಲಿ ಪಡೆಯಬಹುದಾದ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಬಾವಿ, ಬಚ್ಚಲು ಗುಂಡಿ, ಕೋಳಿ ಶೆಡ್, ದನದ ಹಟ್ಟಿ, ಎರೆಹುಳು ತೊಟ್ಟಿಯ ಬಗ್ಗೆ ಮಾಹಿತಿ ನೀಡಿದರು.

ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕೂಲಿ ಕಾರ್ಮಿಕರಿಗೆ ಮಹಿಳಾ ಕಾಯಕ ಬಂಧುಗಳಿಗೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಕಾಮಗಾರಿ ಸ್ಥಳದಲ್ಲಿ ದೈಹಿಕ ಮಾನಸಿಕ ಸಾಮಾಜಿಕವಾಗಿ ದೌರ್ಜನ್ಯ ಶಿಕ್ಷಾರ ಅಪರಾಧ ಹಾಗೂ ಕಾನೂನುಬಾಹಿರವಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಮತ್ತು ದೌರ್ಜನ್ಯದಿಂದ ಮುಕ್ತಿಯೆಂಬ ಸಂದೇಶದ ಮುಖಾಂತರ ಅರಿವು ಮೂಡಿಸಬೇಕು. ಮಹಿಳಾ ಕೂಲಿಕಾರರಿಗೆ ತಮಗಿರುವ ಕಾನೂನು, ಹಕ್ಕುಗಳ ಬಗ್ಗೆ ಅಗತ್ಯ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾತರ ಗ್ರಾಮದ ಶ್ರೀ ಸಾತೇರಿ ದೇವಸ್ಥಾನದಿಂದ ಮುನ್ನಾ ನಾಯ್ಕ್‍ರವರ ಮನೆಯವರೆಗೆ ನರೇಗಾದಡಿ ಅಂದಾಜು 3 ಲಕ್ಷ ವೆಚ್ಚದಲ್ಲಿ ಕಳೆದ 6 ದಿನಗಳಿಂದ ರಸ್ತೆ ಹಾಗೂ ಪಿಚ್ಚಿಂಗ್ ನಿರ್ಮಾಣ ಕಾಮಗಾರಿ ನಿರ್ಮಿಸಲಾಗುತ್ತಿದೆ. ಮಂಗಳವಾರ ಕಾಮಗಾರಿ ಕಾರ್ಯದಲ್ಲಿ 38 ಮಹಿಳಾ ಹಾಗೂ 11 ಪುರುಷರು ಸೇರಿದಂತೆ ಒಟ್ಟು 49 ಜನ ಕೂಲಿಕಾರರು ಪಾಲ್ಗೊಂಡಿದ್ದು, ಒಟ್ಟರೆಯಾಗಿ ನರೇಗಾ ಕಾಮಗಾರಿಯಲ್ಲಿ ಶೇ. 70ರಷ್ಟು ಮಹಿಳಾ ಕೂಲಿಕಾರರು ಹಾಗೂ ಸಂಜೀವಿನಿ ಯೋಜನೆಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ನಂತರ ತಾಲೂಕಾ ಪಂಚಾಯತ್‍ನ ಸಹಾಯಕ ನಿರ್ದೇಶಕಿ(ನರೇಗಾ) ರೂಪಾಲಿ ಬಡಕುಂದ್ರಿ ಅವರು ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿ ಕಡಿಯಾ ಗ್ರಾಮ ಹಾಗೂ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನರೇಗಾದಡಿ ನಿರ್ಮಿಸಲಾಗುತ್ತಿರುವ ಶಾಲಾ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ತಾಂತ್ರಿಕ ಸಹಾಯಕ ಅಭಿಯಂತರರಾದ ಅರ್ಜುನ್ ನಾಯ್ಕ್, ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ ಪ್ರವೀಣಾ ಎಂ. ಗಾವಸ, ಕಾರ್ಯದರ್ಶಿ ಕಮಲಾಕರ ನಾಯ್ಕ್, ಅಧ್ಯಕ್ಷೆ ದೀಪಾ ದೇವದಾಸ ನಾಯ್ಕ್, ಉಪಾಧ್ಯಕ್ಷ ರಾಮಚಂದ್ರ ನಾಯ್ಕ್,  ಸರ್ವ ಸದಸ್ಯರು ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Read These Next