ಕಾರವಾರ:ಮೀನುಗಾರರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Source: so news | By MV Bhatkal | Published on 24th June 2019, 8:00 PM | Coastal News | Don't Miss |

ಕಾರವಾರ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೀನು ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು. ಅಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮೀನು ಮಾರಾಟ ಮಹಿಳಾ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.
ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಕಾಂಗ್ರೆಸ್‌ನ ಸತೀಶ ಸೈಲ್ ಮತ್ತು ಜೆಡಿಎಸ್‌ನ ಆನಂದ ಅಸ್ನೋಟಿಕರ್ ಕೂಡ ಜೊತೆಯಾದರು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಸೂಕ್ತ ಸೌಕರ್ಯಗಳಿಲ್ಲ. ಬೀಸಿಗೆಯಲ್ಲಿ ಸುಡು ಬಿಸಿಲಿನಲ್ಲಿ, ಈಗ ಮಳೆಗಾಲದಲ್ಲಿ ಮಳೆಯ ನಡುವೆ ಕೊಡೆ ಹಿಡಿದುಕೊಂಡು ಮೀನು ಮಾರಾಟ ಮಾಡುವಂತಾಗಿದೆ ಎಂದು ಮೀನು ಮಾರಾಟಗಾರರು ಅಳಲು ತೋಡಿಕೊಂಡರು.
ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿ ಎರಡು ವರ್ಷಗಳೇ ಕಳೆದರೂ ಹೊಸ ಮಾರುಕಟ್ಟೆಯ ನಿರ್ಮಾಣವಾಗಿಲ್ಲ. ಈ ಸಮಸ್ಯೆ ಬಗೆಹರಿಸುವುದಾಗಿ ನಗರಸಭೆ ನೀಡಿದ್ದ ಭರವಸೆಯೂ ಈಡೇರಿಲ್ಲ ಎಂದು ಮೀನುಗಾರರು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಒಂದೊಮ್ಮೆ ಮಾರುಕಟ್ಟೆಯ ನಿರ್ಮಾಣವಾಗದೇ ಉಳಿದಲ್ಲಿ ಅನಿವಾರ್ಯವಾಗಿ ನಗರ ಪ್ರದೇಶದಲ್ಲೇ ಕುಳಿತು ಮೀನು ಮಾರಾಟ ಮಾಡಲಿದ್ದೇವೆ. ಹೀಗಾಗಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟು ಸಹಕರಿಸಿ’ ಎಂದು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮನವಿ ಸ್ವೀಕರಿಸಿ, ‘ಮೀನು ಮಾರುಕಟ್ಟೆ ಸಂಬಂಧ ಜೂನ್ 27ರಂದು ಹೈಕೋರ್ಟ್‌ನಿಂದ ಆದೇಶ ಬರುವ ನಿರೀಕ್ಷೆ ಇದೆ. ನಂತರ ಸಭೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದರು.
ಮುಖಂಡರ ವಾಗ್ವಾದ: ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ್ದ ಪ್ರತಿಭಟನಾಕಾರರ ಜೊತೆ ಶಾಸಕಿ ರೂಪಾಲಿ ನಾಯ್ಕ ಮಾತನಾಡುತ್ತ, ಮೀನು ಮಾರುಕಟ್ಟೆ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸತೀಶ್ ಸೈಲ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಇಬ್ಬರೂ ಮುಖಂಡರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮೀನುಗಾರರು, ಜಿಲ್ಲಾಧಿಕಾರಿ ಜೊತೆ ಚರ್ಚಿಸಿದರು.
ಮೀನುಗಾರರ ಮುಖಂಡರಾದ ಗಣಪತಿ ಮಾಂಗ್ರೆ, ರಾಜು‌ ತಾಂಡೇಲ, ಚೇತನ ಹರಿಕಂತ್ರ, ಪ್ರವೀಣ ಜಾವ್ಕರ್, ವಿನಾಯಕ ಹರಿಕಂತ್ರ ಹಾಗೂ ನೂರಾರು ಮೀನುಗಾರರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...