ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು 9 ಕೋಟಿ ದಂಡ ವಿಧಿಸಿದೆ.
ಅಕ್ಟೋಬರ್ 24ರಂದು ಸೈಲ್ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ, ಇಂದು ಶಿಕ್ಷೆಯನ್ನು ಪ್ರಕಟಿಸಿತು. ದಂಡದ 9 ಕೋಟಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸಿದೆ.
ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ಗೆ ನಾಲ್ಕು ಕೇಸುಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಒಳಸಂಚು ಪ್ರಕರಣದಲ್ಲಿ 5 ವರ್ಷ ಜೈಲು, ವಂಚನೆ ಪ್ರಕರಣದಲ್ಲಿ 7 ವರ್ಷ ಜೈಲು, ಹಾಗೂ ಕಳ್ಳತನ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆದ ಕಾರಣ, ಸೈಲ್ ಅವರ ಶಾಸಕ ಸ್ಥಾನವೂ ಅನರ್ಹಗೊಳ್ಳುವ ಸಾಧ್ಯತೆಯಿದೆ.