ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ-2020 ಕೋವಿಡ್-19 ಮಾರ್ಗಸೂಚಿ ಪಾಲನೆ, ಆರೋಗ್ಯ ಸಿಬ್ಬಂದಿ ಪಾತ್ರವೂ ಮುಖ್ಯ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Source: SO News | By Laxmi Tanaya | Published on 22nd October 2020, 8:51 PM | State News |

ಧಾರವಾಡ :  ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆ ನೀಡಿರುವ ಕೋವಿಡ್-19 ಮಾರ್ಗಸೂಚಿಗಳ ಪಾಲನೆ ಮತ್ತು ಪ್ರತಿಯೊಬ್ಬರು ಯಶಸ್ವಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸುವಲ್ಲಿ ಆರೋಗ್ಯ ಸಿಬ್ಬಂದಿಯ ಪಾತ್ರವೂ ಮುಖ್ಯವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
 
 ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕೋವಿಡ್-19 ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳ ತರಬೇತಿ ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.

 ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಪಾಲಿಸಲು ಪ್ರತ್ಯೇಕವಾದ ಕೋವಿಡ್-19 ಮಾರ್ಗಸೂಚಿಗಳನ್ನು (ಎಸ್‍ಓಪಿ) ನೀಡಿದೆ. ಅದರಂತೆ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಜಿಲ್ಲಾ ಹೆಲ್ತ್ ನೋಡಲ್ ಅಧಿಕಾರಿಯಾಗಿ ಹಾಗೂ ಸೆಕ್ಟರ್ ಹೆಲ್ತ್ ಅಧಿಕಾರಿಯಾಗಿ ತಾಲೂಕಾ ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ.

 ಪ್ರತಿ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಗಳೊಂದಿಗೆ ಓರ್ವ ವೈದ್ಯ, ಆಶಾ ಹಾಗೂ ಎ.ಎನ್.ಎಂ. ಕಾರ್ಯರ್ತರನ್ನು ನೇಮಿಸಿ, ಆದೇಶಿಸಲಾಗಿದೆ. ನೇಮಕಗೊಂಡ ಸಿಬ್ಬಂದಿಗಳು ಸೆಕ್ಟರ್ ಅಧಿಕಾರಿಗಳೊಂದಿಗೆ ನೇಮಿಸಿದ ಸ್ಥಳಗಳಲ್ಲಿ ಅಕ್ಟೋಬರ್ 27 ಹಾಗೂ 28 ರಂದು ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

 ಪ್ರತಿ ಮತಗಟ್ಟೆಯಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೋವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಶನ್ ರೂಮ್ ವ್ಯವಸ್ಥೆ ಮಾಡಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. 

 ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್‍ಗ್ಲೌಸ್, ಪಲ್ಸ್ ಆಕ್ಷಿಮಿಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶರ್‍ಗಳನ್ನು ನೀಡಲಾಗುತ್ತದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೆ ಪಲ್ಸ್ ಆಕ್ಷಿ ಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು. 

ಮತದಾರರು ಮತದಾನಕ್ಕೆ ಹೋಗುವಾಗ ಮತ್ತು ಮತದಾನ ಮಾಡಿ ಬಂದ ಮೇಲೆ ಅವರ ಕೈಗೆ ಸ್ಯಾನಿಟೈಸರ್ ಹಾಕಬೇಕು. ಮತದಾನಕ್ಕೆ ನೇರಳೆ ಬಣ್ಣದ ಸ್ಕೇಚ್‍ಪೆನ್ ನೀಡಲಾಗುತ್ತಿದ್ದು, ಮತದಾನದ ನಂತರ ನಿರ್ಧಿಷ್ಟಪಡಿಸಿದ ಸ್ಥಳದಲ್ಲಿ ಅದನ್ನು ಇಡುವಂತೆ ಮತದಾರರಿಗೆ ತಿಳಿಸಬೇಕು. ಆಗಾಗ ಆ ಸ್ಕೇಚ್‍ಪೆನ್‍ಗಳನ್ನು ಸ್ಯಾನಿಟೈಸರ್ ಉಪಯೋಗಿಸಿ ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಬಿಎಲ್‍ಓ ಗಳ ಮೂಲಕ ಓಟರ್ ಸ್ಲಿಪ್‍ಗಳನ್ನು ಮತದಾರನ ಮನೆಗೆ ತಲುಪಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಕೋವಿಡ್ ಸೋಂಕಿತರಾಗಿರುವ ಅರ್ಹ ಮತದಾರ ಮತದಾನ ಮಾಡಲು ಬರುವುದನ್ನು ಮುಂಚಿತವಾಗಿ ಖಚಿತಪಡಿಸಿದರೆ, ಅವರಿಗೆ ಅಂಬುಲೆನ್ಸ್ ಮೂಲಕ ಅವರಿದ್ದ ಸ್ಥಳದಿಂದ ನೇರವಾಗಿ ಮತಗಟ್ಟೆಗೆ ಕರೆ ತಂದು, ಮತದಾನದ ನಂತರ ಅವರ ಸ್ಥಳಕ್ಕೆ ಬಿಡಲಾಗುತ್ತದೆ. ಮತದಾನದ ದಿನದಂದು ಕೊನೆಯ ಒಂದು ಗಂಟೆ ಅವಧಿಯನ್ನು ಕೋವಿಡ್ ಸೋಂಕಿತರಿಗೆ ಮತ್ತು ಕೋವಿಡ್ ಲಕ್ಷಣ ಇರುವವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

 ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸುವ ಮಹಿಳೆ, ಪುರುಷ ಮತ್ತು ಇತರರಿಗಾಗಿ ಪ್ರತ್ಯೇಕ ಮೂರು ಸಾಲುಗಳನ್ನು ಮಾಡಲಾಗಿರುತ್ತದೆ. ಪ್ರತಿಯೊಬ್ಬರು ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ಆರೋಗ್ಯ ಸಿಬ್ಬಂದಿ ಕಣ್ಗಾವಲು ಇಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

 ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ ಕೋವಿಡ್-19 ಮಾರ್ಗಸೂಚಿಗಳ ಪಾಲನೆ ಕುರಿತು ತರಬೇತಿ ನೀಡಿದರು.

 ತರಬೇತಿಯಲ್ಲಿ ಜಿಲ್ಲಾ ಆರ್‍ಸಿಎಚ್‍ಓ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ, ಹುಡಾ ಆಯುಕ್ತ ವಿನಾಯಕ ಪಾಲನಕರ ಮತ್ತು ಜಿಲ್ಲಾ ತರಬೇತಿದಾರ ಕೆ.ಎಂ. ಶೇಖ್ ಮಾತನಾಡಿ ವಿವಿಧ ವಿಷಯಗಳನ್ನು ತಿಳಿಸಿದರು. ಚುನಾವಣಾ ತಹಶೀಲ್ದಾರ ಎಚ್.ಎನ್. ಬಡಿಗೇರ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  

 ತರಬೇತಿಯಲ್ಲಿ ಚುನಾವಣಾ ಸೆಕ್ಟರ್ ಆಫೀಸರ್ ಆಗಿರುವ ವಿವಿಧ ಇಲಾಖೆ ಅಧಿಕಾರಿಗಳು, ವೈಧ್ಯಾಧಿಕಾರಿಗಳು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...