ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮುರುಡೇಶ್ವರ ದೇವಸ್ಥಾನಕ್ಕೆ ರಾಜ್ಯಪಾಲರು ಭೇಟಿ

Source: SO NEWS | By MV Bhatkal | Published on 3rd December 2021, 11:47 PM | Coastal News |

ಭಟ್ಕಳ:ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಅವರು ಇಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ಮುರ್ಡೇಶ್ವರದ ಮಹಾ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬೆಳಿಗ್ಗೆ ೧೧.೩೦ರ ಸುಮಾರಿಗೆ ಕೊಲ್ಲೂರಿನಿಂದ ಆಗಮಿಸಿದ ರಾಜ್ಯಪಾಲರನ್ನು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್.ಎನ್.ಎಸ್. ಟ್ರಸ್ಟ್ ಪರವಾಗಿ ನಾಗರಾಜ ಶೆಟ್ಟಿ ಬರಮಾಡಿಕೊಂಡರು. 
ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ದೇವಸ್ಥಾನದ ಅರ್ಚಕ ವೇ.ಮೂ. ಜಯರಾಮ ಅಡಿಗಳ್ ಅವರು ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ನೀಡಿದರು. ಇದೇ ಸಂದರ್ಭದಲ್ಲಿ ದೇವಾಲಯ ವತಿಯಿಂದ ಪ್ರಸಾದದ ರೂಪದಲ್ಲಿ ದೇವರ ಎದುರಿನಲ್ಲಿ ಶಾಲು ಹಾಕಿ ರಾಜ್ಯಪಾಲರನ್ನು ಗೌರವಿಸಲಾಯಿತು.  ನಂತರ ಅವರು ದೇವಸ್ಥಾನದ ಪ್ರಾರಾಂಗಣದಲ್ಲಿ ತಮಗಾಗಿ ಇಡಲಾಗಿದ್ದ ಆಸನದಲ್ಲಿ ಕುಳೀತು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಸಂದೇಶವನ್ನು ಬರೆದರು. 
ನಂತರ ರಾಜ್ಯಪಾಲರು ದೇವಾಲಯದ ಪ್ರಾರಾಂಗಣ, ಬೃಹತ್ ಶಿವನ ಮೂರ್ತಿಯನ್ನು ನೋಡಿದ್ದಲ್ಲದೇ ಬೃಹತ್ ಗೋಪುರದ ೨೧ನೇ ಮಹಡಿಗೆ ಲಿಪ್ಟ್ ಮೂಲಕ ತೆರಳಿ ಅಲ್ಲಿಂದಲೇ ದೇವಾಲಯದ ಹಿಂದುಗಡೆ ಇರುವ ಶಿವನ ಮೂರ್ತಿ, ಅರಬ್ಬೀ ಸಮುದ್ರದ ಸೌಂದರ್ಯನವನ್ನು ವೀಕ್ಷಿಸಿದರು. 
ಬಿಗಿ ಬಂದೋಬಸ್ತ್: ರಾಜ್ಯಪಾಲರ ಭೇಟಿಯ ಹಿನ್ನೆಲೆಯಲ್ಲಿ ಮುರ್ಡೇಶ್ವರ ದೇವಸ್ಥಾನಕ್ಕೆ ಭಕ್ತರನ್ನು ನಿರ್ಭಂದಿಸಲಾಗಿದ್ದು ರಸ್ತೆಯಲ್ಲಿ ಕೂಡಾ ವಾಹನ ಓಡಾಟವನ್ನು ನಿಲ್ಲಿಸಲಾಗಿತ್ತು. ಅಲ್ಲಲ್ಲಿ ಜನರು ರಸ್ತೆಗಿಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರೆ, ದೇವಸ್ಥಾನದ ಸುತ್ತಮುತ್ತ ಕಮಾಂಡೋಗಳು ಕಾವಲು ಕಾಯುತ್ತಿದ್ದರು. ಮುರುಡೇಶ್ವರಕ್ಕೆ ರಾಜ್ಯಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಬಂದೋಬಸ್ತ್ ಕಾರ್ಯವನ್ನು ಕೈಗೊಂಡಿದ್ದರು. ಬೆಳಿಗ್ಗೆಯಿಂದಲೇ ಭಟ್ಕಳದ ಗಡಿಯಿಂದ ಮುರ್ಡೇಶ್ವರದ ತನಕ ರಾಷ್ಟಿಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಪಾಯಿಂಟ್ ಹಾಕಿದ್ದು ಅಲ್ಲದೇ ಗಸ್ತು ವಾಹನಗಳು ನಿರಂತರವಾಗಿ ಓಡಾಡುತ್ತಿದ್ದವು. ಎಸ್.ಪಿ. ಸುಮನ್ ಪನ್ನೇಕರ್, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ಗುರುವಾರವೇ ಭಟ್ಕಳಕ್ಕೆ ಬಂದು ವಾಸ್ತವ್ಯ ಮಾಡಿದ್ದು ಇಂದು ಬೆಳಿಗ್ಗೆ ಸಂಪೂರ್ಣ ಬಂದೋಬಸ್ತ್ ಉಸ್ತುವಾರಿ ನೋಡಿಕೊಂಡರು. ಮುರ್ಡೇಶ್ವರದ ಆರ್.ಎನ್.ಎಸ್. ರೆಸಿಡೆನ್ಸಿಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ನಂತರ ಗೋಕರ್ಣಕ್ಕೆ ತೆರಳಿದರು. 
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್, ಎಸ್.ಪಿ. ಸುಮನ್ ಪನ್ನೇಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಎಸ್. ರವಿಚಂದ್ರ, ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read These Next