ಹೈಕೋರ್ಟ್ ತೀರ್ಪಿಗೆ ಮನ್ನಣೆ, ಜನರ ಆರೋಗ್ಯದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕ ಮುಂದೂಡಿಕೆ; ನೀರಿಗಾಗಿ ನಮ್ಮ ಹೋರಾಟ ನಿಲ್ಲದು: ಡಿಕೆಶಿ

Source: S O news | By I.G. Bhatkali | Published on 14th January 2022, 7:59 AM | State News |

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಯ ತ್ವರಿತಗತಿ ಅನುಷ್ಠಾನಕ್ಕೆ ಆಗ್ರಹಿಸಿ 'ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ನೀರಿಗಾಗಿ ನೀರಿಗಾಗಿ ನಡಿಗೆ 'ಪಾದಯಾತ್ರೆ' ಹೈಕೋರ್ಟ್ ಅಭಿಪ್ರಾಯ, ಸರಕಾರದ ನಿರ್ಬಂಧ ಹಾಗೂ ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮೂಂದೂಡಲಾಗಿದೆ.

ಕನಕಪುರ ಜಿಲ್ಲೆ ಸಾತನೂರು ಸಮೀಪದ ಅರ್ಕಾವತಿ, ಕಾವೇರಿ ಹಾಗೂ ವೃಷಭಾವತಿ ನದಿಗಳು ಸೇರುವ 'ಸಂಗಮ' ಸ್ಥಳದಿಂದ ಜ.9ರಿಂದ ಆರಂಭವಾಗಿದ್ದ ಪಾದಯಾತ್ರೆ ಜ.19ರವರೆಗೆ ನಡೆಯಬೇಕಿತ್ತು. ಆದರೆ, ಐದನೇ ದಿನಕ್ಕೆ ಮೊಟಕುಗೊಂಡಿದೆ. ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 'ನೀರಿಗಾಗಿ ನಡಿಗೆ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಬಿದ್ದಿದ್ದರೂ, ಕೋವಿಡ್ ಪ್ರಮಾಣ ಇಳಿಕೆ ಬಳಿಕ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸರಕಾರದ ನಿರ್ಬಂಧ, ಹೈಕೋರ್ಟ್ ಆಭಿಪ್ರಾಯದ ಹಿನ್ನೆಲೆಯಲ್ಲಿ ' ಪಾದಯಾತ್ರೆ ನಿಲ್ಲುವುದೋ.. ನಡೆಯಲಿದೆಯೋ.. ಎಂಬ ಕುತೂಹಲ ಸೃಷ್ಟಿಸಿತ್ತು. ಹೀಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಉಪಸ್ಥಿತಿಯಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ ಪಕ್ಷದ ಮುಖಂಡರು, ಹೈಕೋರ್ಟ್ ಅಭಿಪ್ರಾಯಕ್ಕೆ ಗೌರವ ಕೊಟ್ಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ಪ್ರಕಟಿಸಿದರು.

ಪಾದಯಾತ್ರೆ ನಿಲ್ಲದು: ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ನಮ್ಮ ಈ ಹೋರಾಟ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ, ಜನರಿಗೆ ಕುಡಿಯುವ ನೀರು ನೀಡುವ ಬದ್ಧತೆಯನ್ನು ಪಕ್ಷಕಾಯ್ದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸಲಾಗುತ್ತದೆ. ನೋಟಿಸ್, ಕೇಸ್, ಜೈಲಿಗೆ ಹೆದರುವುದಿಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.

ತಾತ್ಕಾಲಿಕ ಮುಂದೂಡಿಕೆ: ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಪತ್ರ ಎಂದು ಕೊಡಲು ಬಂದರು. ಜಿಲ್ಲಾಧಿಕಾರಿಗೆ ಕೋವಿಡ್ ಬಂದಿದೆಯಲ್ಲ, ಈಗ ಏಕೆ ಬಂದಿದ್ದೀರಿ ಎಂದು ಹೇಳಿ ಕಳುಹಿಸಿದೆ. ನಮ್ಮ ಮಾಜಿ ಮೇಯರ್ ಪಿ.ಆರ್. ರಮೇಶ್ ಬೆಳಗ್ಗೆ ಕರೆ ಮಾಡಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜ.19ಕ್ಕೆ ಆಯೋಜಿಸಿದ್ದ ಸಮಾರೋಪ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಸರಕಾರದ ನೋಟಿಸ್ ನೀಡಿದೆ. ಅದರಲ್ಲಿ ಪಾದಯಾತ್ರೆ ರದ್ದು ಮಾಡಬೇಕು ಎಂದು ಹೇಳಿದೆ. ಇನ್ನು ನಮ್ಮ ಜಿಲ್ಲಾಧ್ಯಕ್ಷರಿಗೆ ನೀಡಿದ ಅನುಮತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಲಾಗಿತ್ತು. ಪೊಲೀಸರಿಗೆ ಬರೆದ ಪತ್ರದಲ್ಲಿ ವ್ಯವಸ್ಥಿತವಾಗಿ ಅವಕಾಶ ಮಾಡಿಕೊಡಿ ಎಂದೂ ಹೇಳಿತ್ತು. ಆ ಮೂಲಕ ಈ ಪಾದಯಾತ್ರೆ ನಡೆಯಲಿ ಎಂಬ ಆಸೆ ಸರಕಾರಕ್ಕೂ ಇದೆ. ಆದರೂ, ನಿಮ್ಮ ಮುಂದೆ ಬೇರೆಯದೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನ್ಯಾಯಾಲಯ ನಮಗೆ ಪಾದಯಾತ್ರೆ ಮಾಡಬೇಡಿ ಎಂದು ಹೇಳದಿದ್ದರೂ ಹೈಕೋರ್ಟ್ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ನಮ್ಮ ದೇವರುಗಳಾದ ಜನರ ಭಾವನೆ ನೋಡಿ ಈ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. ಪಾದಯಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಲು ಅವಕಾಶವಾಗದಿದ್ದರೂ ನಾವಿಬ್ಬರೇ ನಡೆಯಬೇಕು ಎಂದು ಮೊದಲು ಅಂದುಕೊಂಡಿದ್ದೆವು. ನಾವು ಹೋಗುವಾಗ ಜನ ಸೇರುತ್ತಿದ್ದಾರೆ. ಇದರಿಂದ ಮತ್ತೆ ಗುಂಪು ಸೃಷ್ಟಿಯಾಗುತ್ತದೆ. ಬಿಜೆಪಿಯವರು ತಮ್ಮ ತಪ್ಪನ್ನು ನಮ್ಮ ಮೇಲೆ ಹಾಕಲು ಪಿತೂರಿ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ನಾವು ನಿಲ್ಲಿಸುತ್ತಿಲ್ಲ, ಕೇವಲ ಮುಂದೂಡುತ್ತಿದ್ದೇವೆ. ಮುಂದೆ ಇದೇ ರಾಮನಗರದಿಂದಲೇ ಆರಂಭಿಸುತ್ತೇವೆ. ಇದು ತಾತ್ಕಾಲಿಕ ಅರಾಮ್ ಅಷ್ಟೆ ಎಂದು ಅವರು ವಿವರಣೆ ನೀಡಿದ್ದರು.

ಸರಕಾರಕ್ಕೆ ನ್ಯಾಯ, ಕಾನೂನು ಎಲ್ಲರಿಗೂ ಒಂದೇ ಎಂಬ ಬದ್ಧತೆ ಇದ್ದರೆ, ಕೋವಿಡ್ ಆರಂಭವಾದಾಗಿನಿಂದ ನಿಮ್ಮ ಶಾಸಕರು, ಸಚಿವರು, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಧಾರ್ಮಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ಕಾನೂನು, ನ್ಯಾಯ ಅನ್ವಯ ಆಗುತ್ತದೆಯೇ? ಈಗಲಾದರೂ ಕಾನೂನು ಉಲ್ಲಂಘನೆ ಮಾಡಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಿ, ನಿಮ್ಮ ಧೈರ್ಯ ಪ್ರದರ್ಶಿಸಿ ಎಂದು ಡಿಕೆ ಸವಾಲು ಹಾಕಿದರು.

ಕೋವಿಡ್ ಗಂಭೀರ ಸ್ಥಿತಿ ತಲುಪಿದಾಗ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸರಕಾರಕ್ಕೆ ಸಹಕರಿಸಿದೆ. ಅವರಿಗಿಂತ ಹೆಚ್ಚಾಗಿ ಜನರ ಸೇವೆ ಮಾಡಿದೆ. ತರಕಾರಿ ಖರೀದಿ ಮಾಡಿ, ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದೇವೆ. ಔಷಧಿ, ಹಣ್ಣು ಆಹಾರ, ದಿನಸಿ, ಆಕ್ಸಿಜನ್ ಕೊಟ್ಟಿದ್ದೇವೆ. ಅಲ್ಪಸಂಖ್ಯಾತರು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ಎಲ್ಲ ಧರ್ಮಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ನಮ್ಮ ಧೈಯ ಎಂದು ಶಿವಕುಮಾರ್‌ ನುಡಿದರು.

ಈ ಹೋರಾಟದಲ್ಲಿ ಮಹಿಳೆಯರು, ಮಕ್ಕಳು, ಎಲ್ಲ ವರ್ಗದ ಜನ ಕೊಟ್ಟಿರುವ ಪ್ರೀತಿ-ಬೆಂಬಲ ಅಪಾರ. ಅವರಿಗೆ ಕುಡಿಯುವ ನೀರು ನೀಡುವುದೇ ನಮ್ಮ ಗುರಿ. ಈ ಹಿಂದೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ವಿರುದ್ಧ ಹೋರಾಡುತ್ತಿದ್ದೆವು. ಆದರೆ, ಈಗ ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಡಬೇಕಾದ ಸ್ಥಿತಿ ಬಂದಿದೆ. ಅವರಿಂದ ಜನರ ರಕ್ಷಣೆ ಮಾಡಬೇಕಾಗಿದೆ. ಜನರಿಗೆ ಕಾವೇರಿ ಕುಡಿಯುವ ನೀರು ನೀಡುವುದು ನಮ್ಮ ಗುರಿ. ಅದಕ್ಕೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ತಡೆಗೆ ಪೊಲೀಸರ ಸಿದ್ಧತೆ: ಈ ಮಧ್ಯೆ ಸರಕಾರದ ನಿರ್ಬಂಧದ ನಡುವೆಯೂ ಮೇಕೆದಾಟು ಪಾದಯಾತ್ರೆ ಮುಂದುವರಿಸಿದ್ದಲ್ಲಿ ಇಲ್ಲಿನ ರಾಮನಗರದ ಐಜೂರು ವೃತ್ತದಲ್ಲಿಯೇ ಪಾದಯಾತ್ರೆ ತಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದರು. ಅಶ್ರುವಾಯು, ವಾಟರ್ ಜೆಟ್ ಸೇರಿದಂತೆ ಹಲವು ವಾಹನಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...