ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Source: S O News | By I.G. Bhatkali | Published on 24th August 2024, 5:28 PM | State News |

ಬೆಂಗಳೂರು:  ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಅವರು ಇಂದು ಗಾಂಧಿ ಭವನದಲ್ಲಿ ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆಗಾಗಿ ಆಯೋಜಿಸಲಾಗಿದ್ದ  "21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ" ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು
 ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಯಿತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮ ಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ. ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು. 

ಪ್ರಕೃತಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನು ಅದು ಪೂರೈಸುವುದಿಲ್ಲ ಎನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು. ಕೇರಳದ ವಯನಾಡು ಮತ್ತು ರಾಜ್ಯದ ನಾನಾ ಕಡೆ ನಡೆಯುತ್ತಿರುವ ಪರಿಸರ ಅವಘಡಗಳಿಗೆ ಮನುಷ್ಯನ ದುರಾಸೆಗಳೇ ಕಾರಣವಾಗಿದೆ. ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ನೆಹರೂ ಅವರು ವೈಜ್ಞಾನಿಕ ಮತ್ತು ವೈಚಾರಿಕ ಮಾರ್ಗದಲ್ಲಿ ಸಮಾಜವನ್ನು ಸನ್ನದ್ದಗೊಳಿಸಿ ದೇಶವನ್ನು ಮುನ್ನಡೆಸುತ್ತಿದ್ದರು. ಸರ್ವರನ್ನೂ ಒಳಗೊಳ್ಳುವ ಮತ್ತು ಅಹಿಂಸೆ ಗಾಂಧಿಯವರ ಮಾರ್ಗವಾಗಿತ್ತು. ಇದನ್ನು ಯುವಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ದೇಶದ ಶೇ85 ರಷ್ಟು ಆಸ್ತಿ ಶೇ1 ಶ್ರೀಮಂತರ ಕೈಗೆ ಸೇರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಈ ಆರ್ಥಿಕ ಅಸಮಾನತೆ ಹೋಗಲಾಡಿಸಲು ಗಾಂಧಿಯವರು ವಿಚಾರಗಳಲ್ಲಿ ಮಾರ್ಗಗಳಿವೆ ಎಂದರು. 

ಮಹಾತ್ಮಗಾಂಧಿಯವರು‌ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನದ ಶತಮಾನೋತ್ಸವವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ. ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಾದ  ಹೆಚ್.ಕೆ.ಪಾಟೀಲ್, ಗಾಂಧಿ ಸ್ಮಾರಕ ನಿಧಿ ನವದೆಹಲಿ ಅಧ್ಯಕ್ಷರಾದ ರಾಮಚಂದ್ರ ರಾಹಿ, ಕಾರ್ಯದರ್ಶಿಗಳಾದ ಡಾ.ಸಂಜೋಯ್ ಸಿಂಗ್ , ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಅಧ್ಯಕ್ಷರಾದ ಡಾ.ವೂಡೆ.ಪಿ.ಕೃಷ್ಣ,ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಎನ್.ಆರ್. ವಿಶುಕುಮಾರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Read These Next

ಸಿಎಂ ಆಗಿ ಅತಿ ಹೆಚ್ಚು ಬಾರಿ ಅಂಬಾರಿ ಏರಿದ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಭಾಗ್ಯ: ರಾಜ್ಯದ ಜನತೆಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು : ಅದ್ಧೂರಿ ಮತ್ತು ಅಚ್ಚುಕಟ್ಟಾದ ದಸರಾ ಆಯೋಜಿಸಿದ ಜಿಲ್ಲಾಡಳಿತ ಶ್ರಮ ಮತ್ತು ಶಿಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ...

ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದ ಮುನಿರತ್ನ; ರಕ್ಷಣೆ ನೀಡಿದರೆ 'ಸಿಟ್' ಮುಂದೆ ದಾಖಲೆ ಬಿಡುಗಡೆ: ಸಂತ್ರಸ್ತೆ

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿ, ಅವರನ್ನು ...

ಚಿಕ್ಕಮಗಳೂರು: ಓವರ್‌ಡೋಸ್ ಇಂಜೆಕ್ಷನ್‌ನಿಂದ ಏಳು ವರ್ಷದ ಬಾಲಕನ ದುರ್ಮರಣ; ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಖಾಸಗಿ ಕ್ಲಿನಿಕ್‌ನ ...

ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಆರೋಪ; ಕೇಂದ್ರ ಸಚಿವೆ ನಿರ್ಮಲಾ ವಿರುದ್ಧ ಎಫ್‌ಐಆರ್

ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ...