ಬೆಂಗಳೂರು: ಇಂದು ನೂತನ ಸಚಿವರ ಪ್ರಮಾಣ ವಚನ ಮೊದಲ ಹಂತದಲ್ಲಿ 24 ಮಂದಿ ಸಂಪುಟ ಸೇರ್ಪಡೆ?

Source: VB | By S O News | Published on 4th August 2021, 2:34 PM | State News |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದ್ದು, ಆ.4ರಂದು ಸಂಜೆ 5 ಗಂಟೆಗೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ.

ಕಳೆದ ಎರಡು ದಿನಗಳಿಂದ ದಿಲ್ಲಿಯಲ್ಲಿ ಸಚಿವ ಸಂಪುಟ ರಚನೆ ಕುರಿತು ವರಿಷ್ಠರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ, ಅಂತಿಮವಾಗಿ ಸಚಿವ ಸಂಪುಟ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ನೂತನ ಸಚಿವರ ಪಟ್ಟಿಯೊಂದಿಗೆ ಬುಧವಾರ ಬೆಂಗಳೂರಿಗೆ ಹಿಂದಿರುಗಲಿ ದ್ದಾರೆ. ಮಂಗಳವಾರವೇ ರಾಜ್ಯಕ್ಕೆ ಹಿಂದಿರಬೇಕಾಗಿದ್ದ ಸಿಎಂ ಅವರು ರಾತ್ರಿ 9:15ಕ್ಕೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್‌ ಅನ್ನು ಕೊನೆಕ್ಷಣದಲ್ಲಿ ರದ್ದುಪಡಿಸಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ 24 ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಾದೇಶಿಕ ಸಮತೋಲನ, ಜಾತಿವಾರು ಪ್ರಾತಿನಿಧ್ಯ ಹಾಗೂ ಹೊಸಬರಿಗೆ ಬಿಜೆಪಿ ಹೈಕಮಾಂಡ್ ಆದ್ಯತೆ ನೀಡಿದ್ದು, ಕಳೆದ ಬಾರಿ ಬಿಎಸ್‌ವೈ ಸಂಪುಟದಲ್ಲಿದ್ದ ಸುಮಾರು 8ಕ್ಕೂ ಹೆಚ್ಚು ಕ್ರಿಯಾಶೀಲರಲ್ಲದ ಸಚಿವರನ್ನು ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಸೋಮವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಸಭೆ ನಡೆಸಿದ ಬಳಿಕವೇ ನೂತನ ಸಚಿವರ ಪಟ್ಟಿ ಗೆ ಅನುಮೋದನೆ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಸಹಕಾರಿ ಯಾಗುವಂತೆ ನೂತನ ಸಚಿವ ಸಂಪುಟ ರಚನೆಯಾಗಬೇಕು ಎಂಬುದು ಹೈಕಮಾಂಡ್ ಬಯಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೊಮ್ಮೆ ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದರು.

ಒಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿಫಾರಸು ಮಾಡಿರುವ ಹೆಸರುಗಳು, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ಸಚಿವರಾಗಿರುವವರನ್ನು ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಹೈಕಮಾಂಡ್ ಇದೆ. ಜೊತೆಗೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ವಿವಿಧ ಮಠಾಧೀಶರು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದಿರುವವರ ಪೈಕಿ ಆರ್.ಶಂಕರ್, ಶ್ರೀಮಂತಾಟೀಲ್‌ಗೆ ಅವಕಾಶ ತಪ್ಪುವ ಸಾಧ್ಯತೆ ಹೆಚ್ಚಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಈ ಬಾರಿ ಸಂಪುಟ ಸೇರುವುದು ಖಚಿತ ಎನ್ನಲಾಗಿದೆ. ಆದರೆ, ಬಿ.ಸಿ.ಪಾಟೀಲ್ ವಿರುದ್ಧವು ಹಿಂದಿನ ಸರಕಾರದಲ್ಲಿ ಅವರು ಉಸ್ತುವಾರಿಯಾಗಿದ್ದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ ಅಸಮಾಧಾನ ಹೊಂದಿರುವುದು ಅವರಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ.

ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಸಂಪುಟ ಸೇರುವ ಸಾಧ್ಯತೆಯಿರುವವರ ಪೈಕಿ ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಕೆ.ಗೋಪಾಲಯ್ಯ, ಡಾ.ಕೆ. ಸುಧಾಕರ್, ಮುನಿರತ್ನ, ಎಸ್.ಟಿ. ಸೋಮಶೇಖರ್, ಬಿ.ಎ. ಬಸವರಾಜ, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಪೂರ್ಣಿಮಾ ಶ್ರೀನಿವಾಸ್, ಎಂ.ಟಿ.ಬಿ.ನಾಗರಾಜ್, ಡಾ. ನಾರಾಯಣಗೌಡ, ಪಿ. ರಾಜೀವ್, ವಿ.ಸುನೀಲ್ ಕುಮಾರ್, ಉಮೇಶ್ ಕತ್ತಿ, ಎಂ.ಪಿ. ರೇಣುಕಾಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್ ನಿರಾಣಿ, ಎಸ್.ಎ. ರಾಮದಾಸ್ ಪ್ರಮುಖರು.

ಡಿಸಿಎಂ ಹುದ್ದೆಗಳ ಬಗ್ಗೆ ಚರ್ಚೆ: ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಬಿಜೆಪಿ ಹೈಕಮಾಂಡ್ ಅಚ್ಚರಿ ಎಂಬಂತೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿತ್ತು. ಇದೀಗ, ಬಸವರಾಜ ಬೊಮ್ಮಾಯಿ ಸರಕಾರದಲ್ಲಿಯೂ ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಡಿಸಿಎಂ ಹುದ್ದೆಗಳ ಅಗತ್ಯತೆ ಬಗ್ಗೆ ಹೈಕಮಾಂಡ್ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ ಎನ್ನಲಾಗಿದೆ.

ಆರ್.ಅಶೋಕ್ ಪರವಾಗಿ ಸ್ವತಃ ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದರೆ, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪರವಾಗಿ ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ, ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, ಉಮೇಶ್ ಕತ್ತಿ ಜೊತೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಡಿಸಿಎಂ ಹುದ್ದೆಗೆ ಕೇಳಿ ಬರುತ್ತಿದೆ.

ಹಿರಿಯರಿಗೆ ಕೊಕ್: ಕೋಟ ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ, ವಿ.ಸೋಮಣ್ಣ ಆರ್.ಶಂಕರ್, ಪ್ರಭು ಚವ್ಹಾಣ್, ಶ್ರೀಮಂತ್ ಪಾಟೀಲ್, ಸಿ.ಸಿ. ಪಾಟೀಲ್‌, ಶಶಿಕಲಾ ಜೊಲ್ಲೆ ಅವರನ್ನು ನೂತನ ಸಂಪುಟಕ್ಕೆ ಸೇರಿಸಿಕೊಳ್ಳದಿರಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...