ಬೆಂಗಳೂರು: ಆರ್ಥಿಕ ವರ್ಷದೊಳಗೆ 5 ಗ್ಯಾರಂಟಿ ಜಾರಿ; ಚಾರಿತ್ರಿಕ ನಿರ್ಧಾರ ಪ್ರಕಟಿಸಿದ ಮುಖ್ಯ ಮಂತ್ರಿ ಸಿದ್ದರಾಮಯ; ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ

Source: Vb | By I.G. Bhatkali | Published on 3rd June 2023, 10:49 AM | State News |

ಬೆಂಗಳೂರು: ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ(ಶಕ್ತಿ) ಸೇರಿದಂತೆ ಎಲ್ಲ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾರಿತ್ರಿಕ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ದಂತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇಲಿ ಇಲ್ಲದೆ ರಾಜ್ಯದ ಸಮಸ್ತ ಕನ್ನಡಿಗರಿಗೆ ಈ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ' ಎಂದು ದರು. ಪ್ರಕಟಿಸಿ

'ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ನಾನು ಮತ್ತು ಪಕ್ಷದ ಅಧ್ಯಕ್ಷರು ರುಜು ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಕನ್ನಡ ನಾಡಿನ ಪ್ರತೀ ಮನೆಗೂ ತಲುಪಿಸಿದ್ದೆವು. ಅದರಂತೆಯೇ ಮೊದಲ

ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದಲ್ಲದೆ, ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಯೋಜನೆಗಳ ಅನುಷ್ಠಾನ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಅವರು ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್‌, ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಡಾ.ಎಚ್‌.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ವರ್, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಎಲ್ಲ ಸಚಿವರು ಉಪಸ್ಥಿತರಿದ್ದರು.

ಅನ್ನಭಾಗ್ಯ
ಅನ್ನಭಾಗ್ಯ ಯೋಜನೆಯಡಿ ಹಿಂದಿನ ತಮ್ಮ ಸರಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರಧಾನ್ಯವನ್ನು ಬಿಜೆಪಿ ಸರಕಾರವು 5 ಕೆಜಿಗೆ ಇಳಿಸಿದೆ. ಇದೀಗ ಆಹಾರಧಾನ್ಯದ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಜೂನ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1ರಿಂದ ಈ ಯೋಜನೆಯೂ ಜಾರಿಗೆ ಬರಲಿದೆ. ಅದೇ ರೀತಿ, ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ.

ಗೃಹ ಜ್ಯೋತಿ
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತೀ ಮನೆಗೆ ಗರಿಷ್ಠ 200 ಯುನಿಟ್‌ವರೆಗೆ ವಿದ್ಯುತ್‌ ಅನ್ನು ಉಚಿತವಾಗಿ ನೀಡಲಾಗುವುದು. ಆದರೆ, ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್‌ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ ಶೇ.10ರಷ್ಟು ವಿದ್ಯುತ್ ಅನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್‌ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದು.

ಯುವನಿಧಿ
2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1,500 ರೂ.ನಿರುದ್ಯೋಗ ಭತ್ತೆ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪ ಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು.

ಗೃಹ ಲಕ್ಷ್ಮೀ
ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2 ಸಾವಿರ ರೂ. ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕಿದ್ದು, ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು. ಆನಂತರ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮಾಹಿತಿ ಒದಗಿಸಬೇಕು. ಜೂ.15ರಿಂದ ಜು.15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಜು.15 ರಿಂದ ಆ.15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...