ಹೊಸದಿಲ್ಲಿ: ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ: ಟ್ವಿಟರ್

Source: VB | By S O News | Published on 12th July 2021, 4:28 PM | National News |

ಹೊಸದಿಲ್ಲಿ: ಭಾರತದಲ್ಲಿ ಜಾರಿಯಾಗಿರುವ ನೂತನ ಐಟಿ ಕಾಯ್ದೆಯ ನಿಯಮದಂತೆ, ಭಾರತದ ಪ್ರಜೆಯನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಿಸಿರುವುದಾಗಿ ಟ್ವಿಟರ್ ಘೋಷಿಸಿದೆ.

ವಿನಯ್ ಪ್ರಕಾಶ್ ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿರುತ್ತಾರೆ ಎಂದು ಹೇಳಿರುವ ಟ್ವಿಟರ್, ಅವರನ್ನು ಸಂಪರ್ಕಿಸುವ ಇ-ಮೇಲ್ ಐಡಿಯನ್ನೂ ಒದಗಿಸಿದೆ.

ಭಾರತ ಮೂಲದ ಕುಂದುಕೊರತೆ ಅಧಿಕಾರಿ ನೇಮಕದ ನಿಯಮದ ಬಗ್ಗೆ ಕೇಂದ್ರ ಸರಕಾರ ಮತ್ತು ಟ್ವಿಟರ್ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ತಿಂಗಳ ಆರಂಭದಲ್ಲಿ ಮಧ್ಯಂತರ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿರುವುದಾಗಿ ಘೋಷಿಸಿದ್ದಟ್ವಿಟರ್, ಹೊಸ ಐಟಿ ಕಾಯ್ದೆಯ ಪ್ರಕಾರ ಇತರ ಇಬ್ಬರು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ನೇಮಿಸುವುದಾಗಿ ಘೋಷಿಸಿತ್ತು ಮತ್ತು ಭಾರತದ ಪ್ರಜೆಯನ್ನು ಹೊಸ ಸ್ಥಾನಿಕ ಅಧಿಕಾರಿಯನ್ನಾಗಿ ನೇಮಿಸಲು 8 ವಾರದ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಕೋರಿಕೆ ಸಲ್ಲಿಸಿತ್ತ.

 

ಜೊತೆಗೆ ಪ್ರಥಮ ಪಾಲನಾ ವರದಿಯನ್ನು ಜುಲೈ 11ರೊಳಗೆ ಬಿಡುಗಡೆಗೊಳಿಸುವುದಾಗಿ ಹೇಳಿತ್ತು.

ಈ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ್ದ ದಿಲ್ಲಿ ಹೈಕೋರ್ಟ್, ಟ್ವಿಟರ್ ಭಾರತದ ಹೊಸ ನಿಯಮ ಪಾಲಿಸದಿದ್ದರೆ ಅದಕ್ಕೆ ನೀಡಿರುವ ಕಾನೂನಿನಡಿಯ ರಕ್ಷಣೆ ರದ್ದಾಗುತ್ತದೆ ಎಂದು ಎಚ್ಚರಿಸಿತ್ತು ಮತ್ತು 2 ವಾರದೊಳಗೆ ಈ ಮಾಹಿತಿಯನ್ನು ಅಫಿಡವಿಟ್ ಮೂಲಕ ಒದಗಿಸುವಂತೆ ಸೂಚಿಸಿತ್ತು. ಬಳಕೆದಾರರು ಪೋಸ್ಟ್ ಮಾಡುವ ವಿಷಯದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯಿಂದ ವಿನಾಯಿತಿ ಪಡೆಯುವ ಅವಕಾಶವನ್ನು ಟ್ವಿಟರ್ ಕಳೆದುಕೊಂಡಿತ್ತು.

ಇದೀಗ ಪ್ರಥಮ ಪಾಲನಾ ವರದಿ ಬಿಡುಗಡೆಗೊಳಿಸಿರುವ ಟ್ವಿಟರ್ 'ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ಆಚಾರ ಸಂಹಿತೆ) ಕಾಯ್ದೆ 2021ರ ನಿಯಮ4(1)(ಡಿ) ಪ್ರಕಾರ, 2021ರ ಜುಲೈ 11ರಂದು ನಮ್ಮ ಆರಂಭಿಕ ಪಾಲನಾ ವರದಿಯನ್ನು ಪ್ರಕಟಿಸಿದ್ದೇವೆ' ಎಂದು ಹೇಳಿಕೆ ನೀಡಿದೆ.

ಆರಂಭಿಕ ಪಾಲನಾ ವರದಿ ಬಿಡುಗಡೆಗೊಳಿಸಿದ ಟ್ವಿಟರ್

ಹೊಸದಿಲ್ಲಿ: ಭಾರತ ಸರಕಾರ ಹೊಸ ಡಿಜಿಟಲ್ ಮಾಧ್ಯಮ ನಿಯಮ ಜಾರಿಗೊಳಿಸಿದ ಸುಮಾರು 1 ತಿಂಗಳ ಬಳಿಕ, ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ ಆರಂಭಿಕ 'ಪಾರದರ್ಶಕತೆ ವರದಿ'ಯನ್ನು ರವಿವಾರ ಬಿಡುಗಡೆಗೊಳಿಸಿದೆ ಎಂದು ಮೂಲಗಳು ಹೇಳಿವೆ.

ಟ್ವಿಟರ್‌ನಲ್ಲಿ ಬಳಕೆದಾರರ ದೂರನ್ನು ಹೇಗೆ ನಿರ್ವಹಿಸಲಾಗುತ್ತಿದೆ, ಈ ಬಗ್ಗೆ ಕೈಗೊಂಡಿರುವ ಕ್ರಮಗಳು, ಯಾವೆಲ್ಲಾ ವೆಬ್‌ಲಿಂಕ್ ಹಾಗೂ ಯುಆರ್ ಎಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ಈ ಪಾಲನಾ ವರದಿಯಲ್ಲಿದೆ. ಮುಂದೆ ಈ ವರದಿಯನ್ನು ಪ್ರತೀ ತಿಂಗಳೂ ಬಿಡುಗಡೆಗೊಳಿಸಲಾಗುವುದು. ಸರಕಾರದ ಪ್ರತಿಕ್ರಿಯೆ ಆಧರಿಸಿ ಅಥವಾ ನಮ್ಮ ಆಂತರಿಕ ಬದಲಾವಣೆಗೆ ಅನುಸಾರವಾಗಿ ಕಾಲಾನುಕಾಲಕ್ಕೆ ಇದರಲ್ಲಿ ಸುಧಾರಣೆ ತರಲು ನಾವು ಬದ್ಧರಾಗಿದ್ದೇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಿರುಕುಳ, ಮಾನಹಾನಿ, ಭಯೋತ್ಪಾದನೆ ಮತ್ತು ನಕಲಿ ಹೆಸರಿನಲ್ಲಿ ಖಾತೆ ನಿರ್ವಹಿಸುವುದಕ್ಕೆ ಸಂಬಂಧಿಸಿ ಈ ವರ್ಷದ ಮೇ 26ರಿಂದ ಜೂನ್ 25ರವರೆಗಿನ ದತ್ತಾಂಶ ವಿವರವನ್ನು ಈ ವರದಿ ಹೊಂದಿದೆ. ಒಟ್ಟು 37 ದೂರು ದಾಖಲಾಗಿದ್ದು ಇದರಲ್ಲಿ 20 ಮಾನಹಾನಿಗೆ ಸಂಬಂಧಿಸಿದ ಪ್ರಕರಣವಾಗಿದೆ. ದೂರಿಗೆ ಸಂಬಂಧಿಸಿ 132 ಟ್ವಿಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ನಗ್ನತೆ, ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸುವುದನ್ನು ಉತ್ತೇಜಿಸುವ ಸುಮಾರು 18 ಸಾವಿರಕ್ಕೂ ಅಧಿಕ ಟ್ವಿಟ್‌ಗಳನ್ನು, ಭಯೋತ್ಪಾದನೆಗೆ ಉತ್ತೇಜನ ನೀಡುವ 4 ಸಾವಿರಕ್ಕೂ ಅಧಿಕ ಟ್ವಿಟ್‌ಗಳನ್ನು ಗುರುತಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.

ಇದರ ಜತೆಗೆ, ಮಾಹಿತಿ ವರದಿಯನ್ನೂ ಬಿಡುಗಡೆಗೊಳಿಸಿದ್ದು ಇದರಲ್ಲಿ ಸರಕಾರ ಮಾಹಿತಿ ಕೋರಿದ ಸಂಖ್ಯೆ ಮತ್ತು ಇದರಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ ಟ್ವಿಟರ್ ಖಾತೆಯ ವಿವರವಿದೆ ಎಂದು ಟ್ವಿಟರ್ ಹೇಳಿದೆ.

 

Read These Next

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...