ಶ್ರೀ ಯೋಗೇಶ್ವರ ಏತನೀರಾವರಿ ಯೋಜನೆಯಲ್ಲಿ ನೀರಾವರಿ ಮತ್ತು ಅಮೃತ ಸರೋವರ ಯೋಜನೆಯಲ್ಲಿ 100 ಕೆರೆಗಳ ಅಭಿವೃದ್ಧಿ : ಸಚಿವ ಆಚಾರ ಹಾಲಪ್ಪ ಬಸಪ್ಪ

Source: SO News | By Laxmi Tanaya | Published on 15th August 2022, 10:57 PM | State News | Don't Miss |

ಧಾರವಾಡ : ಜಿಲ್ಲೆಯಲ್ಲಿ ಹರಿಯುವ ತುಪ್ಪರಿಹಳ್ಳದಿಂದ ಬೆಣ್ಣೆಹಳ್ಳಕ್ಕೆ ಸೇರುವ ಸುಮಾರು 1.5 ಟಿಎಂಸಿ ಪ್ರಮಾಣದ ನೀರು ಬಳಸಿಕೊಂಡು, ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕುಗಳ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರೀ ಯೋಗೇಶ್ವರ ಏತನೀರಾವರಿ ಯೋಜನೆ ರೂಪಿಸಲಾಗಿದೆ. ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ ನೂರಕ್ಕೂ  ಅಧಿಕ ಕೆರೆ ಹಾಗೂ ಜಲಮೂಲಗಳನ್ನು ರಾಷ್ಟ್ರದಲ್ಲಿಯೇ ವಿನೂತನ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗಣಿ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಜಿಲ್ಲಾಡಳಿತವು  ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ತುಪ್ಪರಿಹಳ್ಳವು ಪ್ರತಿವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿದು ಪ್ರವಾಹ ಉಂಟು ಮಾಡಿ ಸುಮಾರು 1.5 ಟಿಎಂಸಿ ಪ್ರಮಾಣದ ನೀರು ಬೆಣ್ಣೆಹಳ್ಳಕ್ಕೆ ಸೇರುತ್ತದೆ. ಈ ನೀರನ್ನು ಸದ್ಬಳಕೆ ಮಾಡಿ ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕುಗಳ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರೀ ಯೋಗೇಶ್ವರ ಏತನೀರಾವರಿ ಯೋಜನೆ ರೂಪಿಸಲಾಗಿದೆ. ನವಲಗುಂದದಲ್ಲಿ ಬೃಹತ್ ಜವಳಿ ಪಾರ್ಕನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿದ್ದು,  ಸುಮಾರು 3 ಸಾವಿರ ಯುವಜನರಿಗೆ ಉದ್ಯೋಗ ದೊರೆಯಲಿದೆ. ಜಿಲ್ಲೆಯಲ್ಲಿ ಜಲ ಜೀವನ ಮಿಷನ್ನಿನಲ್ಲಿ “ಮನೆಮನೆಗೆ ಗಂಗೆ” ಯೋಜನೆಯಡಿ 363 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮನೆಗಳಿಗೆ ನಳದ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು. 

ಪ್ರಧಾನಮಂತ್ರಿಗಳ ಮಹಾತ್ವಾಕಾಂಕ್ಷೆಯ ಅಮೃತ ಸರೋವರ ಯೋಜನೆಯಡಿಯಲ್ಲಿ ಜಿಲ್ಲೆಯ 100ಕ್ಕೂ ಅಧಿಕ ಕೆರೆ ಹಾಗೂ ಜಲಮೂಲಗಳನ್ನು ಬೃಹತ್ ನೀರಾವರಿ ಇಲಾಖೆಯ 50 ಕೋಟಿ ರೂ.ಗಳ ವಿಶೇಷ ಅನುದಾನ, ವಿವಿಧ ಕೈಗಾರಿಕೆಗಳ ಸಿಎಸ್‍ಆರ್ ಹಾಗೂ ನರೇಗಾ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ವಿನೂತನ ಶೈಲಿಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮ ಪಂಚಾಯತ ಯೋಜನೆಯಡಿ 35 ಗ್ರಾಮ ಪಂಚಾಯತಗಳನ್ನು ಆಯ್ದುಕೊಂಡು ಗ್ರಾಮಗಳ ಸಮಗ್ರ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಲ್ಲಿ ಜಿಲ್ಲೆಯ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಬೈಪಾಸ್ ಅಗಲೀಕರಣ: ರಾಷ್ಟ್ರೀಯ ಹೆದ್ದಾರಿ 48 ರ ಹುಬ್ಬಳ್ಳಿ ಧಾರವಾಡ ಮಧ್ಯದ ದ್ವಿಪಥ ಬೈಪಾಸ್ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 579 ಕೋಟಿ ರೂ ನೀಡಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. 
ಜಯದೇವ ಹೃದ್ರೋಗ ಕೇಂದ್ರ ಸ್ಥಾಪನೆ: ಉತ್ತರ ಕರ್ನಾಟಕ ಭಾಗದಲ್ಲಿ ಹೈಟೆಕ್ ಚಿಕಿತ್ಸೆ ಸೌಲಭ್ಯವುಳ್ಳ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು 250 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹುಬ್ಬಳ್ಳಿಯ ರಾಯನಾಳ ಬಳಿ ಸ್ಥಾಪಿಸಲಾಗುತ್ತಿದೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಗೆ ರಾಜ್ಯ ಸರ್ಕಾರವು 10 ಕೋಟಿ ರೂ.ಗಳ ವಿಶೇಷ ನೆರವು ನೀಡಿದೆ. ಉತ್ತರ ಕರ್ನಾಟಕ ಭಾಗದ ಹಲವಾರು ಜಿಲ್ಲೆಗಳ ಜನರಿಗೆ ಈ ಆಸ್ಪತ್ರೆಗಳ ಸೌಲಭ್ಯ ಸಿಗಲಿದೆ.

ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆ: ರಾಜ್ಯದ ಆಯ್ದ 7500 ಸ್ವ ಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ ರೂ. 1 ಲಕ್ಷ ಗಳಂತೆ ಒಟ್ಟು 75 ಕೋಟಿ ರೂ. ಬೀಜಧನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗಿದೆ.   ಧಾರವಾಡ ಜಿಲ್ಲೆಗೆ ರೂ. 1 ಕೋಟಿ 60 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ:  ಕಳೆದ ವರ್ಷಕ್ಕಿಂತ ಹೆಚ್ಚು ರಾಜಧನ ಸಂಗ್ರಹ ಮಾಡಿ ನಿಗದಿತ ಗುರಿಗಿಂತ ಶೇ. 145 ರಷ್ಟು ಹೆಚ್ಚು ಆದಾಯ ಸಂಗ್ರಹಿಸಿದೆ.  ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಾಧನೆಯನ್ನು ಗುರುತಿಸಿ ಕೇಂದ್ರ ಗಣಿ ಸಚಿವಾಲಯವು “ರಾಷ್ಟ್ರೀಯ ಖನಿಜ ಪುರಸ್ಕಾರ” ನೀಡಿ ಗೌರವಿಸಿದೆ ಎಂದರು.

ಸ್ವಾತಂತ್ರ್ಯ ಚಳುವಳಿಯ ಸ್ಮರಣೆ: ಭಾರತ ದೇಶವು ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯಗೊಂಡು 75 ವರ್ಷಗಳು ಪೂರ್ಣಗೊಂಡು, ಇಂದು 76 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ. ಈ ಸಂಭ್ರಮವನ್ನು ದೇಶದೆಲ್ಲೆಡೆ ಆಜಾದಿ ಕಾ ಅಮೃತ ಮಹೋತ್ಸವ ಹೆಸರಿನಡಿ ವರ್ಷದುದ್ದಕ್ಕೂ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದೇವೆ. ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿ ಅವರು ಮುಂಬರುವ 25 ವರ್ಷಗಳ ಅವಧಿಯನ್ನು ಅಭಿವೃದ್ಧಿಯ ಅಮೃತ ಕಾಲ ಎಂದು ಕರೆದಿದ್ದಾರೆ, ಅದಕ್ಕೆ ಪೂರಕವಾಗಿ ರಾಜ್ಯದ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ನವ ಕರ್ನಾಟಕದ ಮೂಲಕ ನವಭಾರತ ನಿರ್ಮಾಣದ ಧ್ಯೇಯದೊಂದಿಗೆ ಮುನ್ನಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಕಾರ್ಯಕ್ರಮದ ಕರೆಗೆ ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ಎರಡು ದಿನಗಳಿಂದ ದೇಶದ ಮನೆ ಮನೆಗಳ ಮೇಲೆ ರಾಷ್ಟ್ರದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡುತ್ತಿರುವುದನ್ನು ನಾವು ನೀವೆಲ್ಲ ಕಣ್ತುಂಬಿಕೊಂಡಿದ್ದೇವೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರವಾಹಕ್ಕೆ, ಕನ್ನಡ ನಾಡು ಹಾಗೂ ಧಾರವಾಡ ಜಿಲ್ಲೆಯಲ್ಲಿ ನಡೆದ ಹೋರಾಟಗಳೂ ಕೂಡ ಪ್ರಮುಖ ಧಾರೆಗಳಾಗಿವೆ. “ಸ್ವಾತಂತ್ರ್ಯವೇ ನನ್ನ ಆಜನ್ಮ ಸಿದ್ಧ ಹಕ್ಕು” ಎಂಬ ರಣಕಹಳೆ ಮೂಲಕ ಭಾರತೀಯರನ್ನು ಜಾಗೃತಿಗೊಳಿಸಿದ ಬಾಲಗಂಗಾಧರ ತಿಲಕ್ ಅವರು ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ಭೇಟಿ ನೀಡಿದ್ದಾಗ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಿ ಸ್ವಾತಂತ್ರ್ಯ ಚಳವಳಿಗಾರರ ಸಭೆಗಳನ್ನು ಏರ್ಪಡಿಸಿದ ಹೆಮ್ಮೆಯ ಇತಿಹಾಸ ನಮ್ಮದಾಗಿದೆ. ಕರ್ನಾಟಕ ಕೇಸರಿ ಗಂಗಾಧರರಾವ್ ದೇಶಪಾಂಡೆ ಹೋಮ್‍ರೂಲ್ ಲೀಗಿನ ನೇತೃತ್ವವಹಿಸಿದ್ದರು. ಇದೇ ಕಾಲದಲ್ಲಿ ಆಲೂರು ವೆಂಕಟರಾಯರು ಹಾಗೂ ಕಡಪ ರಾಘವೇಂದ್ರರಾಯರ ಮುಂದಾಳತ್ವದಲ್ಲಿ ಧಾರವಾಡದಲ್ಲಿ ಕರ್ನಾಟಕ ಸಭೆ ನಡೆಯಿತು. ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂಬ ಮಹಾತ್ಮಾ ಗಾಂಧೀಜಿ ಅವರ ಹೋರಾಟಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಗದಿಗೆಯ್ಯ ಹೊನ್ನಾಪುರಮಠ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್.ಎಸ್. ಹರ್ಡಿಕರ್, ಹಳ್ಳಿಕೇರಿ ಗುದ್ಲೆಪ್ಪನವರು ಸೇರಿದಂತೆ ಮೊದಲಾದ ನೇತಾರರು ಕೈ ಜೋಡಿಸಿದರು ಎಂದು ಹೋರಾಟ ಮತ್ತು ಚಳುವಳಿಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು.

ಪಥ ಸಂಚಲನ: 76 ನೇ ಸ್ವಾತಂತ್ರ್ಯ ಅಂಗವಾಗಿ ಜಿಲ್ಲಾಡಳಿತವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ದಳಗಳು ಆಕರ್ಷಕ ಪಥಸಂಚಲನ ಮೂಲಕ ತುಂತುರು ಮಳೆ ಮಧ್ಯದಲ್ಲಿ ಗೌರವ ಸಲ್ಲಿಸಿದರು. 
ಪರೇಡ್ ಕಮಾಂಡರ್ ಬಿ.ಆರ್. ಚನ್ನಮ್ಮನವರ ಮತ್ತು ರಾಜು ಎಸ್. ಗುಡನಟ್ಟಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ,  ಅರಣ್ಯ ಇಲಾಖೆ, ಭಾರತ ಸೇವಾ ದಳಗಳ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ: 76 ನೇ ಸ್ವಾತಂತ್ರ್ಯ ಅಂಗವಾಗಿ ಜಿಲ್ಲಾಡಳಿತವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ ನೀಡಲಾಯಿತು. 

ಶಿವಾನಂದ ಎಚ್.ತಿಮ್ಮಪೂರ (ಸಾಮಾಜಿಕ ಸೇವೆ), ಅದಿತಿ ಕ್ಷತ್ರತೇಜ (ಕ್ರೀಡೆ), ಡಾ.ಬಸು ಬೇವಿನಗಿಡದ ಮತ್ತು ಡಾ.ಎಸ್.ಬಿ.ಬಸಟ್ಟೆ (ಸಾಹಿತ್ಯ), ಜಿ.ಕೆ.ಹಿರೇಮಠ (ಶಿಕ್ಷಣ) ಅವರನ್ನು ಅಮೃತ ಮಹೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ: ಆಝಾದಿ ಕಾ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಾಥಮಿಕ ಶಾಲೆ: ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಮಿತಾ ಪ್ರಕಾಶ ಅಂಗಡಿ(ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಕಾವ್ಯ ಅಣ್ಣಿಗೇರಿ (ಪ್ರಥಮ), ಗೀತ ಗಾಯನ ಸ್ಪರ್ದೆಯಲ್ಲಿ ಅನುಷ್ಕಾ ರಾಘವೇಂದ್ರ(ಪ್ರಥಮ) ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಭಾಷಣ ಸ್ಪರ್ಧೆಯಲ್ಲಿ ಚೈತನ್ಯ ಪಾಟೀಲ(ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಸುಧಾ ದಾನಮ್ಮನವರ (ಪ್ರಥಮ), ಗೀತ ಗಾಯನ ಸ್ಪರ್ದೆಯಲ್ಲಿ ಸುಪ್ರಜಾ ಕಾಮತ್ (ಪ್ರಥಮ) ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2022 ನೇ ಸಾಲಿನ ಸ್ವತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಾದ ಸಾನಿಕಾ ರವಿಶಂಕರ ಗುಂಡುರಾವ್, ಕವಿತಾ ಮಂಜುನಾಥ ಇನಾಮತಿ, ಶ್ರೀಕಾಂತ ಶಂಕರ ಸುಲದಾಳ ಮತ್ತು ವಿನಾಯಕ ಬಿ.ಎಂ ಅವರನ್ನು ಸನ್ಮಾನಿಸಲಾಯಿತು. 
ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ಕರಿಗೌಡರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...