ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ 'ಒಳ ಮೀಸಲಾತಿ' ಕಲ್ಪಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ಕುರಿತು ನೀಡಿರುವ ತೀರ್ಪನ್ನು ಯಾವ ರೀತಿ ಜಾರಿ ಮಾಡಬಹುದು ಎಂಬುದರ ಕುರಿತು ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಆಯೋಗಕ್ಕೆ ಸೂಕ್ತವಾದ ಮಾರ್ಗಸೂಚಿಗಳನ್ನು ನೀಡಲಾಗುವುದು. ಮೂರು ತಿಂಗಳಲ್ಲಿ ನಂಬಲರ್ಹ ದಾಖಲೆಗಳು ಮತ್ತು ದತ್ತಾಂಶವನ್ನು ಸಂಗ್ರಹಿಸಿ, ಸರಕಾರಕ್ಕೆ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಆಯೋಗವು ತನ್ನ ವರದಿ ನೀಡುವವರೆಗೂ ಮುಂದಿನ ನೇಮಕಾತಿ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ. ಸಚಿವ ಸಂಪುಟದ ತೀರ್ಮಾನದ ಬಳಿಕ ಯಾವುದಾದರೂ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಲ್ಲಿ, ಆಯೋಗದ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು 2022ರಲ್ಲಿ ಬಿಜೆಪಿ ಸರಕಾರ ತಿರಸ್ಕಾರ ಮಾಡಿದೆ. ಒಳ ಮೀಸಲಾತಿಯನ್ನು ಸಾಂವಿಧಾನಿಕ ಹಾಗೂ ಕಾನೂನು ರೀತಿಯಲ್ಲಿ ನೀಡಬೇಕು ಎಂದು ನಮ್ಮ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಈಗ ಸುಪ್ರೀಂಕೋರ್ಟ್ ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ನೀಡಿದೆ ಎಂದು ಹೇಳಿದರು.
ನಮ್ಮ ಪಕ್ಷ ಚುನಾವಣಾ ಪೂರ್ವ ಚಿತ್ರದುರ್ಗದಲ್ಲಿ ನಡೆಸಿದ ಸಮಾವೇಶದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲೂ ಭರವಸೆ ನೀಡಿತ್ತು. ನಾವು ಒಳ ಮೀಸಲಾತಿ ಕಲ್ಪಿಸಲು ಬದ್ಧರಾಗಿದ್ದೇವೆ. ದಲಿತ ಪಂಗಡಗಳ ಎಡ, ಬಲ, ಭೋವಿ, ಲಂಬಾಣಿ ಸಮೂಹಗಳ ಜೊತೆ ಈ ಸಂಬಂಧ ಚರ್ಚೆ ಮಾಡಿದ್ದೇವೆ. ಅವರೆಲ್ಲರೂ ಒಳ ಮೀಸಲಾತಿ ಪರವಾಗಿ ಇದ್ದಾರೆ. ನಂಬಲರ್ಹವಾದ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿ ಜಾರಿ ಮಾಡುವಂತೆ ಹೇಳಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು.
ನಂಬಲರ್ಹವಾದ ಮಾಹಿತಿಯ ಜನಗಣತಿಯಲ್ಲಿ ಮಾತ್ರ ಸಿಗುತ್ತದೆ. ಆದುದರಿಂದ, ಈ ಸಂಬಂಧ ಆಯೋಗಕ್ಕೆ ಜವಾಬ್ದಾರಿ ನೀಡಿ, ಸುಪ್ರೀಂಕೋರ್ಟ್ ತೀರ್ಮಾನದ ಹಿನ್ನೆಲೆಯಲ್ಲಿ ಯಾವ ರೀತಿ ಇದನ್ನು ಮಾಡಬಹುದು ಎಂದು ವರದಿ ನೀಡುವಂತೆ ಸೂಚಿಸಲಾಗುವುದು. ಈಗಾಗಲೇ ತೆಲಂಗಾಣ ರಾಜ್ಯದಲ್ಲಿಯೂ ಆಯೋಗ ರಚನೆ ಮಾಡಲಾಗಿದೆ. ಕುಂಟು ನೆಪ ಹೇಳುವ ತೀರ್ಮಾನ ನಾವು ಮಾಡಿಲ್ಲ. ಎಲ್ಲ ಶಾಸಕರು, ಸಚಿವರು ಚರ್ಚೆ ಮಾಡಿ, ಒಗ್ಗಟ್ಟಾಗಿದ್ದೇವೆ. ಆಯೋಗಕ್ಕೆ ನೀಡುವ ಮಾರ್ಗಸೂಚಿಗಳನ್ನು ನೋಡಿದ ಬಳಿಕ ಎಲ್ಲರ ಗೊಂದಲಗಳು ಬಗೆಹರಿಯಲಿದೆ ಎಂದು ಅವರು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, 30 ವರ್ಷದ ಹೋರಾಟಕ್ಕೆ ಇವತ್ತು ಫಲ ಸಿಕ್ಕಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ನಾವೆಲ್ಲ ಶಾಸಕರು, ಸಚಿವರು ಸೇರಿ ಚರ್ಚಿಸಿ ಪರಸ್ಪರ ವಿಶ್ವಾಸದಿಂದ ಒಗ್ಗಟ್ಟಾಗಿ ಮುಂದೆ ಹೋಗುವ ತೀರ್ಮಾನ ಮಾಡಿದ್ದೇವೆ. ಸರಕಾರ ಒಳ ಮೀಸಲಾತಿ ಕಲ್ಪಿಸಲು ಮಾಡಿರುವ ತೀರ್ಮಾನಕ್ಕೆ ಅಂಭಿನಂದನೆ ಸಲ್ಲಿಸುತ್ತೇನೆ. ನಮ್ಮ ಒಳ ಪಂಗಡಗಳು ಎಲ್ಲ ಸೇರಿ ಆಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತೇವೆ. ಸಂಘ ಸಂಸ್ಥೆಗಳು ತೀಕ್ಷ್ಮವಾದ ಟೀಕೆಗಳನ್ನು ಮಾಡುವುದು ಬಿಟ್ಟು, ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.