ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ಒದಗಿಸಲು ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Source: SO News | By Laxmi Tanaya | Published on 6th August 2024, 7:18 AM | State News |

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರವನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಸೋಮವಾರ ಬೆಳಗಾವಿ ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಜೂನ್‌ನಿಂದ ಇದುವರೆಗೆ 565 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದೆ. ಅತಿವೃಷ್ಟಿಯಿಂದ  6ಮಂದಿ ಸಾವಿಗೀಡಾಗಿದ್ದು, ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. 12 ಜಾನುವಾರುಗಳು ಸಾವನ್ನಪ್ಪಿದ್ದು, ಪರಿಹಾರ ಒದಗಿಸಲಾಗಿದೆ.  ಸಾವಿಗೀಡಾದ ಒಂದು ಜಾನುವಾರಿಗೆ 37,500 ರೂಪಾಯಿ ಪರಿಹಾರ ನೀಡಲಾಗುತ್ತಿದೆ.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 48 ಮನೆಗಳು ಪೂರ್ಣ ಹಾನಿಗೀಡಾಗಿದ್ದು, 950 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಈ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಹಾನಿಗೆ ನೀಡಲಾದ ಪರಿಹಾರ ದುರುಪಯೋಗವಾದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ದುರುಪಯೋಗ ತಪ್ಪಿಸಲು ಪೂರ್ಣ ಮನೆ ಹಾನಿಗೀಡಾದವರಿಗೆ ರೂ. 1.20 ಲಕ್ಷ ನಗದು ಪರಿಹಾರ ನೀಡಲಾಗುತ್ತಿದ್ದು, ಇದರೊಂದಿಗೆ ಮನೆಯನ್ನು ಸಹ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಭಾಗಶ: ಹಾನಿಗೀಡಾದ ಮನೆಗಳಿಗೆ 6500 ರೂ. ಪರಿಹಾರವನ್ನು ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುತ್ತಿದೆ.  ಮಳೆಯಿಂದ ಹಾನಿಗೀಡಾದವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 43,500  ರೂ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಿಂದೆ ಪರಿಹಾರದ ವಿಷಯದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತು. ಈಗ ಏಕರೂಪದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 17 ಜನರಿಗೆ ಪರಿಹಾರ ಒದಗಿಸಲಾಗಿದ್ದು, ಮನೆ ಹಾನಿಗೀಡಾದ ಎಲ್ಲರಿಗೂ ಆದಷ್ಟು ಬೇಗನೆ ಪರಿಹಾರ ಒದಗಿಸಲಿದ್ದೇವೆ ಎಂದರು.

ಜಿಲ್ಲೆಯಲ್ಲಿ 41706  ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿ, 372 ಹೆಕ್ಟೇರ್‌ ತೋಟಗಾರಿಕಾ ಬೆಳೆ ಗಳಿಗೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಮಳೆಯಿಂದಾಗಿ  2962 ವಿದ್ಯುತ್‌ ಕಂಬಗಳು  ಹಾನಿಗೀಡಾಗಿದ್ದು, ಆದಷ್ಟು ಬೇಗನೆ ವಿದ್ಯುತ್‌ ಕಂಬಗಳು ಮತ್ತು ಪರಿವರ್ತಕಗಳನ್ನು ಸರಿಪಡಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.

ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳು, ಸೇತುವೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ಮಳೆಯಿಂದಾಗಿ ಮುಳುಗಡೆಯಾಗುವ ಸಣ್ಣ ಸೇತುವೆಗಳನ್ನು ಎತ್ತರಿಸುವ ಬಗ್ಗೆ ತಾಂತ್ರಿಕ ವರದಿಯನ್ನು ಪಡೆಯಲಾಗುವುದು.

ನೆರೆ ಪರಿಹಾರ ಕಾರ್ಯಗಳಿಗೆ ಅನುದಾನ ಕೊರತೆಯಿರುವುದಿಲ್ಲ. ತುರ್ತು ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ 48 ಕೋಟಿ ರೂ. ಅನುದಾನ ಲಭ್ಯವಿದ್ದು, ತಹಶೀಲ್ದಾರ್‌ ಖಾತೆಗಳಲ್ಲೂ ಅನುದಾನ ಲಭ್ಯವಿದೆ. ಅಗತ್ಯ ಬಿದ್ದರೆ ಇನ್ನಷ್ಟು ಪರಿಹಾರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು.

Read These Next

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ಅಳವಡಿಸಿ, ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಪ್ರಸಾರ ...

ಬೆಂಗಳೂರು: ವಿವಿಧ ವಸತಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ...

ಬೆಂಗಳೂರು: ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2017ನೇ ಸಾಲಿನಿಂದ 2023ನೇ ಸಾಲಿನವರೆಗೆ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ...

ರಾಯಚೂರು ಜಿಲ್ಲೆಯ ಮಾನ್ವಿ ಬಳಿ ಸಾರಿಗೆ ಬಸ್ ಮತ್ತು ಖಾಸಗಿ ಶಾಲಾ ಬಸ್ ನಡುವೆ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳ ಸಾವು

ಮೃತಪಟ್ಟಿರುವ ವಿದ್ಯಾರ್ಥಿಗಳನ್ನು ಸಮರ್ಥ ಅಮರೇಶ(7) ಹಾಗೂ ಶ್ರೀಕಾಂತ್ ಮಾರೇಶ(12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 15 ...