ಬ್ರಾಹ್ಮಣ ಯುವತಿಯರನ್ನು ಬ್ರಾಹ್ಮಣೇತರರು ಮದುವೆಯಾಗದಂತೆ ಸೂಚನೆ

Source: ಪ್ರಭುದೇವ ಜಿ./ Karavali Munjavu | Published on 18th March 2021, 7:02 PM | Coastal News | Special Report | National News |

ಬ್ರಾಹ್ಮಣ ಹೆಣ್ಣು ಮಕ್ಕಳು ಇತರೇ ಜಾತಿ ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಳಿ ರಚಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶಿವಮೊಗ್ಗದಲ್ಲಿ ಕಳೆದ ಮಂಗಳವಾರ ಸಲಹೆ ನೀಡಿದ್ದಾರೆ.

ಮನೆಗಳಲ್ಲಿ ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಏನಿದೆ? ಅವರು ಇಂತಹ ಸುಸಂಸ್ಕೃತ  ಸಮಾಜ ತೊರೆದು ಬೇರೆ ಸಮಾಜದ ಯುವಕರನ್ನು ವರಿಸಲು ಕಾರಣಗಳೇನು? ಎನ್ನುವ ಅಂಶಗಳನ್ನು ಮಾತೃಮಂಡಳಿ ಮೂಲಕ ಅರಿಯಬೇಕಿದೆ . ಗಣನೀಯವಾಗಿ ಇಳಿಕೆಯಾಗುತ್ತಿರುವ ಬ್ರಾಹ್ಮಣರ ಜನಸಂಖ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.

ಇದು 21ನೇ ಶತಮಾನದ ಓರ್ವ ಬ್ರಾಹ್ಮಣ ಮಠಾಧೀಶರ ಅಭಿಪ್ರಾಯ. ಆದರೆ 12ನೇ ಶತಮಾನದ ಬಸವಣ್ಣ ಬ್ರಾಹ್ಮಣ ಹುಡುಗಿಯನ್ನು ಅಸ್ಪೃಶ್ಯ ಕುಟುಂಬದ ಯುವಕನಿಗೆ ಮದುವೆ ಮಾಡಿ ವರ್ಗರಹಿತ, ಜಾತಿರಹಿತ ಸಮಾಜಕ್ಕೆ ಪ್ರೇರೇಪಿಸಿದ್ದನ್ನು ಯೋಚಿಸಿದರೆ ಪೇಜಾವರ ವಿಶ್ವಪ್ರಸನ್ನರಿಗೆ ಮುಂಪಾದ ಅಥವಾ ಹಿಂಪಾದವಿದೆ ಎಂದು ಯೋಚಿಸಬೇಕಾಗಿದೆ.

ಧರ್ಮಗುರುಗಳು ಹೇಳುವುದನ್ನು ನಂಬುವುದಾದರೆ ದೇವರು ಮನುಷ್ಯರನ್ನು ಸೃಷ್ಟಿಸಿದ್ದು ನರಕವನ್ನು ಭರ್ತಿ ಮಾಡುವುದಕ್ಕಾಗಿ ಎಂದು ಚಿಂತಕ ಮಾರ್ಕಿಸ್‌ ಡಿ. ಶೇಡ್ ಹೇಳಿದ ಮಾತು ಈ ಸಂದರ್ಭದ ನೆನಪು.

ಒಂದು ಹಂತದಲ್ಲಿ ಸ್ವಾಮೀಜಿಯ ಮಾತುಗಳು ಬ್ರಾಹ್ಮಣೇತರ ಜನಾಂಗದ ಅನರ್ಹತೆಯನ್ನು ಅವರು ಎತ್ತಿ ತೋರಿಸುವಂತಿದೆ. ಬ್ರಾಹ್ಮಣ ಹುಡುಗಿಯರು ಒಂದು ವೇಳೆ ಬ್ರಾಹ್ಮಣೇತರರನ್ನು ಪ್ರೀತಿಸಿದರೂ ಅವರು ಹಾಗೂ ಅವರ ಕುಟುಂಬ ಮರುಚಿಂತನೆ ಮಾಡಲಿ ಎಂಬುದು ಈ ಮಾತಿನ ಎಚ್ಚರವಾಗಿದೆ.

ಲವ್ ಜಿಹಾದ್ ವಿರುದ್ಧದ ನುಡಿಗಳಲ್ಲಿ ಮುಸ್ಲಿಂ ಸಮುದಾಯ ದವರೊಂದಿಗೆ ಹಿಂದೂ ಹುಡುಗಿಯರ ಮದುವೆ ಆಗದಂತೆ ನೋಡಿಕೊಳ್ಳಿ ಎನ್ನುವುದು ಒಟ್ಟಾರೆ ಎಲ್ಲ ಹಿಂದೂಗಳಿಗೆ ಕರೆ ಕೊಡುತ್ತಾರೆ. ಈಗ ಬ್ರಾಹ್ಮಣೇತರರಿಗೆ ಬ್ರಾಹ್ಮಣ ಹುಡುಗಿಯನ್ನು ಮದುವೆ ಮಾಡಿಕೊಡಬೇಡಿ ಎನ್ನುವುದು ಈ ಮಠಾಧೀಶರಿಂದ ಪಾಲಕರಿಗೆ ಎಚ್ಚರಿಕೆಯ ಇನ್ನೊಂದು ಸ್ಟೆಪ್ .

ಭಾರತದ ಒಗ್ಗಟ್ಟಿನಲ್ಲಿ ಒಡಕು ಬಂದಿದ್ದರೆ ಹಾಗೂ ದೇಶ ಗುಲಾಮಿ ಸ್ಥಿತಿಗೆ ತೆರಳಿದ್ದರೆ ಅದು ಕರ್ಮಠ ಬ್ರಾಹ್ಮಣರಿಂದ ಎಂದು ವಿವೇಕಾನಂದರು ಹೇಳಿದ್ದರು. ಮುಸ್ಲಿಂರನ್ನು, ಹರಿಜನರನ್ನು ಈ ದೇಶದ ಒಂದು ಭಾಗವಾಗಿ ರಾಷ್ಟ್ರವಾಹಿನಿಯಲ್ಲಿ ತರುವ ಪ್ರಯತ್ನದ ಕಾರಣಕ್ಕೆ, ಗಾಂಧೀಜಿ ಈ ಜನರ ಶತ್ರುವಾದರು. ಆದರೆ ಇವರಿಗೆ ಎರಡೂ ಜನಾಂಗಗಳು ಬ್ರಾಹ್ಮಣರ ಮೇಲ್ಮಟ್ಟದ ಅರ್ಹತೆಯನ್ನು ಒಪ್ಪಿಕೊಳ್ಳಬೇಕು ಎಂಬುದು ಅವರ ನಿಲುವಿನಂತಿದೆ.

ಹಿಂದೂ ಧರ್ಮದ ಜಾತೀಯ ಪ್ರಬೇಧವನ್ನು ಈಗಲೂ ದಲಿತರು ಅನುಭವಿಸುತ್ತಿದ್ದಾರೆ. ಈ ಜಾತಿಂರು ಸೃಷ್ಟಿಯಿಂದ ಉಂಟಾದ ಭಾರತೀಯರ ಒಗ್ಗಟ್ಟಿನ ಒಡಕಿನಿಂದ ಹೊದಗಿನವರ ದಾಳಿಯಲ್ಲಿ ಭಾರತವನ್ನೇ ಲೂಟಿ ಹೊಡೆದರು. ಬ್ರಿಟೀಷರು ಎರಡು ಶತಮಾನ ನಮ್ಮನ್ನು ಗುಲಾಮಗಿರಿಯಲ್ಲಿಟ್ಟರು. ಆಗ ಸ್ವಾತಂತ್ರ್ಯದ ಗುಲಾಮಗಿರಿ ಹಾಗೂ ಹಿಂದು ಧರ್ಮದ ಶ್ರೇಣೀಕೃತ ವ್ಯವಸ್ಥೆಯ ಗುಲಾಮಗಿರಿ ವಿರುದ್ಧ ಗಾಂಧೀಯಂಥ ಮಹಾತ್ಮನ ಅವತಾರವಾಯಿತು. ದಲಿತರ ವಿಮೋಚನೆಗೆ ಜನ್ಮವಿತ್ತಂತ್ತಿದ್ದ ಅಂಬೇಡ್ಕರ್‌, ರಾಷ್ಟ್ರವು ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಂಡರೆ ಅದು ಅಸಮಾನತೆಯ ಮುಂದುವರಿಕೆಯಿಂದ ಮಾತ್ರ ಎಂದರು. ಹಾಗೆಯೇ ಮುಂದಿನ ಜನ್ಮವೇನಾದರೂ ಇದ್ದರೆ ನಾನು ಹಿಂದೂವಾಗಿ ಹುಟ್ಟಲು ಇಷ್ಟ ಪಡಲಾರೆ ಎಂದು ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಈಗಲೂ ದಲಿತರು ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕಾರ ಮಾಡುತ್ತಲೇ ಇದ್ದಾರೆ.

ಈ ಮುಜುಗರ ಸ್ವಾಮೀಜಿಗೆ ಇದ್ದಂತಿಲ್ಲ. ಆದರೆ ಬ್ರಾಹ್ಮಣರಲ್ಲದ ಉಳಿದ ಎಲ್ಲ ಸಮಾಜಕ್ಕೆ ಅವರ ಮಾತಿನಿಂದ ನೋವಾಗುತ್ತದೆ. ಹಿಂದೂ ಧರ್ಮವೆಂದರೆ ಬ್ರಾಹ್ಮಣರು ಉಳಿದವರಿಗಿಂತ ಶ್ರೇಷ್ಠ ಎಂದು ನಾವು ಒಪ್ಪಿಕೊಳ್ಳಬೇಕು ಹಾಗೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಅವರ ಸೂಚನೆಯಲ್ಲಿದೆ.

ಸ್ವಾಮೀಜಿಗೆ ಪ್ರೇಮ ಪ್ರಭಾವದ ಮೂಲವಾದ ವಿಜ್ಞಾನದ ಅರಿವಿಲ್ಲ. ಪ್ರೇಮ ಸೃಷ್ಟಿಸುವ ಸೃಜನಶೀಲತೆಯೂ ತಿಳಿದಿಲ್ಲ. ಅಂತರ್ಜಾತಿ ವಿವಾಹದ ಪರಿಣಾಮ ಆ ಕುಟುಂಬದಲ್ಲಿ ಜನಿಸುವ ಮಕ್ಕಳು ಪಾಲಕರ ಸಮನ್ವಯತೆಯಲ್ಲಿ ಪ್ರತಿಭಾವಂತರಾಗುವ ಉದಾಹರಣೆಗಳು ಗಮನಕ್ಕೆ ಬಂದಿಲ್ಲ. ಮೂಢ ಹಾಗೂ ಕರ್ಮಠ ಪದ್ಧತಿಯ ಆಚರಣೆಗಿಂತ ಅದನ್ನು ಧಿಕ್ಕರಿಸುವುದರ ಮೂಲಕ ಮನುಷ್ಯನಾಗುವ ಪ್ರಕ್ರಿಯೆ ತಿಳಿದಿಲ್ಲ. ಮನುಷ್ಯ ಮನುಷ್ಯರನ್ನು ಪ್ರೀತಿಸುವತ್ತ ಎಲ್ಲರ ದೇವರಾಗುವ ಬೌದ್ಧಿಕತೆ ಅವರ ಬಳಿ ಇಲ್ಲ.

ಸ್ವಾಮೀಜಿಯ ಅತಿಯಾದ ಆತ್ಮವಿಶ್ವಾಸ ಅಪಾಯದ ಮೊಟ್ಟೆ ಇಡುತ್ತಿದೆ. ಹಾಗಂತ ಸ್ವಾಮಿಯ ತಲೆಹರಟೆ ಹೇಳಿಕೆಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸ್ವಾಮೀಜಿಗಳಿಗೆ ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿದೆ ಎಂದರೆ, ಬ್ರಾಹ್ಮಣರ ಏಳಿಗೆಗೆ ಇಲ್ಲಿನ ಮತದಾರರು ಮತಹಾಕಿದ್ದಾರೆಂಬ ಭ್ರಮೆ ಇದೆ. ಹಾಗೇನೂ ಇಲ್ಲ ಸ್ವಾಮೀಜಿ. ನೀವು ಮನಸ್ಸಿಗೇ ಗಡಿ ಹಾಕಿಕೊಂಡ ಮಂದಿ. ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತೇವೆ. ದಯವಿಟ್ಟು ನಿಮ್ಮ ಜಾತಿಯ ಹೆಣ್ಣು ಮಕ್ಕಳಿಗೆ ಬುರ್ಖಾ ಹಾಕಲು ಹೋಗಬೇಡಿ. ಬ್ರಾಹ್ಮಣರು ಶ್ರೇಷ್ಠ ಎನ್ನುತ್ತ ಇರಬೇಡಿ. ಪರಂಪರಾಗತವಾಗಿ ಬಂದ ವಿದ್ಯೆಯಿಂದ ಸಮಾಜದಲ್ಲಿನ ಹುದ್ದೆಗಳನ್ನು ನಿಮ್ಮ ಸಮಾಜ ಪಡೆದಿರಬಹುದು. ಆದರೆ ಭಾರತದಲ್ಲಿ ಮೇಲ್ಬಾತಿಗಳ ಹೊರತಾಗಿ ಶೂದ್ರರು ದಲಿತರು ಮೇಲ್ಬಾತಿಯ ಅವಕಾಶಗಳನ್ನು, ಅವರೊಂದಿಗಿನ ಒಡನಾಟ, ದಾಂಪತ್ಯವನ್ನು ಪಡೆಯಬಾರದು ಎಂದರೆ ಅದು ಬ್ರಾಹ್ಮಣೇತರರಿಗೆ ಈ ಧರ್ಮದಲ್ಲಿ ಮಾಡುವ ಅಪಮಾನ. ಆದರೆ ಸಾವಿರಾರು ವರ್ಷದಿಂದ ಈ ಜಾತಿ ವಿಂಗಡಣೆ ಮೂಲಕವೇ ಉಳಿದ ಜಾತಿಗಳಲ್ಲಿ ಕೀಳರಿಮೆ ಸೃಷ್ಟಿಸಿ, ವಿದೇಶಿಗರ ದಾಳಿಗೆ ತಡೆಯೊಡ್ಡುವ ಚೈತನ್ಯವಿಲ್ಲದೇ ಆದ ಹಾನಿ ಸಾಕು. ನಿಮ್ಮ ವಾದ ಅಭಿಪ್ರಾಯವನ್ನು ಬಹುತೇಕ ಬ್ರಾಹ್ಮಣರೂ ಒಪ್ಪುವುದಿಲ್ಲ. ಪ್ರೀತಿ ಇಲ್ಲದೇ ಮನಸ್ಸು ಮತ್ತು ದೇಹ ಅವರ ವಿಚಾರವನ್ನು ನಿರಾಕರಿಸುತ್ತದೆ. ನೀವು ದೇಶದ ಜಾತ್ಯತೀತ ನಿಲುವು ಹಾಗೂ ಪ್ರಜಾಪ್ರಭುತ್ವವನ್ನು ನಿರಾಕರಿಸುತ್ತಿದ್ದೀರಿ. ವಿವಾದದ ಹೇಳಿಕೆ ಮೂಲಕ ನಿಮ್ಮ ಪೀಠ ರಕ್ಷಿಸಿಕೊಳ್ಳಬೇಡಿ. ಮಠಾಧೀಶರು ಸಾಮಾನ್ಯವಾಗಿ ತಮ್ಮ ತತ್ವಗಳಿಗಿಂತ ತನ್ನ ಲಾಭದಾಯಕ ಪೀಠದ ಬಗ್ಗೆ ಜಾಗರೂಕರಾಗುತ್ತಾರೆ ಎನ್ನುವುದಕ್ಕೆ ಈಗ ಪಂಚಮಸಾಲಿ ಜನಾಂಗದ ಮೀಸಲಾತಿ ಹಾಗೂ ಈ ಸ್ವಾಮಿಗಳ ಮಾತಲ್ಲಿ ಗುರುತಿಸಬಹುದಾಗಿದೆ. ಪ್ರೀತಿ ನಿಮ್ಮ ಪೀಠವನ್ನು ಮೀರಿದ ಶಕ್ತಿ. ನಾವು ಓದಿದ ಪಾಠದಲ್ಲಿ, ನಿಮ್ಮ ಪೀಠ, ಬ್ರಾಹ್ಮಣರು ಶ್ರೇಷ್ಠ ಎಂದು ಬರೆದು ಓದಿಸುವ ಮೂರ್ಖತನಕ್ಕೆ ಯಾವ ವಿದ್ಯಾವಂತ ಬ್ರಾಹ್ಮಣರೂ ಪಾಠ ಮಾಡುವುದಕ್ಕೆ ಪ್ರಯತ್ನಿಸಿಲ್ಲ, ನೆನಪಿರಲಿ.

ಈಗ ನಮಗಿರುವುದು ಎರಡೇ ದಾರಿ. ಈ ಸ್ವಾಮೀಜಿಯ ಸಲಹೆ ನಮ್ಮ ಒಡನಾಟದ ಬ್ರಾಹ್ಮಣರು ಮನಸ್ಸಿನಲ್ಲಿ ಮೆತ್ತಿಕೊಳ್ಳದಂತೆ ಕೊಡವಿಕೊಳ್ಳುವುದು. ಹಾಗೂ ಕೆಳಜಾತಿಯವರು ಈ ವಿವಾದಕ್ಕೆ
ಸ್ಪಂದಿಸದೇ ಸ್ತಬ್ಧವಾಗುವುದು.

ನಾವು ಬದುಕಿರುವುದರಿಂದ ನಾನು ಇದ್ದೇನೆ

ಓರ್ವ ಧರ್ಮ ಗುರು ಆಫ್ರಿಕನ್ ಬುಡಕಟ್ಟಿನ ಚಿಕ್ಕ ಮಕ್ಕಳಿಗೆ ಒಂದು ಪಂದ್ಯವನ್ನು ಏರ್ಪಡಿಸಿ, ಯಾರು ದೂರದ ಮರದಡಿ ಇಟ್ಟ ಹಣ್ಣಿನ ಬುಟ್ಟಿಯನ್ನು ಓಟದ ಪಂದ್ಯದಲ್ಲಿ ಮೊದಲು ತಲುಪುತ್ತಾರೋ, ಅವರಿಗೆ ಅದು ಸೇರುತ್ತದೆ ಎಂದು ಘೋಷಿಸಿದರು. ಹಾಗೆಯೇ ಸಾಲಾಗಿ ಈ ಮಕ್ಕಳನ್ನು ನಿಲ್ಲಿಸಿ ಅವರಿಗೆ ಓಡುವಂತೆ ಸೀಟಿ ಹೊಡೆದರು. ಸಾಲಾಗಿ ನಿಂತ ಈ ಓಟಗಾರ ಮಕ್ಕಳು ಒಬ್ಬರ ಕೈ ಇನ್ನೊಬ್ಬರು ಗಟ್ಟಿಯಾಗಿ ಹಿಡಿದು ಒಟ್ಟಾಗಿಯೇ ಓಡತೊಡಗಿದರು. ಹಾಗೆ ಹಣ್ಣಿನ ಬುಟ್ಟಿ ಹತ್ತಿರ ಒಟ್ಟಾಗಿ ತಲುಪಿ ಬುಟ್ಟಿಯಲ್ಲಿದ್ದ ಹಣ್ಣನ್ನು ಸವಿಯತೊಡಗಿದರು.

ಈ ಘಟನೆಯಿಂದ ಅತ್ಯಾಶ್ಚರ್ಯಗೊಂಡ ಧರ್ಮ ಗುರು, ಬುಡಕಟ್ಟು ಸಮಾಜದ ಮಕ್ಕಳನ್ನು ಪ್ರಶ್ನಿಸಿ ನೀವೇಕೆ ಒಬ್ಬರನ್ನೊಬ್ಬರು ಸ್ಪರ್ಧಿಸದೇ ಒಟ್ಟಾಗಿ ಹೋಗಿ ಹಣ್ಣುಗಳನ್ನು ಹಂಚಿಕೊಂಡು ತಿಂದಿದ್ದು? ನಿಮ್ಮಲ್ಲಿ ಗೆದ್ದವರೊಬ್ಬರು ಈ ಎಲ್ಲ ಹಣ್ಣುಗಳನ್ನು ಹೊಟ್ಟೆ ತುಂಬ ಸವಿಯಬಹುದಿತ್ತಲ್ಲವೇ? ಎಂದರು.

ಆಗ ಎಲ್ಲ ಮಕ್ಕಳು ತಮ್ಮ ಸಂಸ್ಕೃತಿಯ ಒಕ್ಕಟ್ಟಿನ ಜೀವಾಳವಾದ ಒಂದು ಶಬ್ದ obomato (ಒಬೊನಟೋ) ಎಂದು ಹೇಳುತ್ತ, ಎಲ್ಲರೂ ನೋವು ಅನುಭವಿಸುವಾಗ ಓರ್ವ ಮಾತ್ರ ಸುಖವನ್ನು ಅನುಭವಿಸಲು ಸಾಧ್ಯವೇ? ನಮ್ಮದು ಒಬೋನಟೋ ನೀತಿ, ಅಂದರೆ ನಾವು ಬದುಕಿರುವುದರಿಂದ ನಾನು ಇದ್ದೇನೆ (I exist because we exist) ಎಂದರು.

ಪೇಜಾವರ ಮಠದ ಸ್ವಾಮಿ ಹಾಗೂ ಅವರ ವಾದ ಒಪ್ಪಿಕೊಳ್ಳುವವರು ಓದಿಕೊಳ್ಳಲಿ.

(Karavali Munjavu dated 18 Mar 21)

Read These Next

ಲಸಿಕಾ ಮೇಳದಲ್ಲಿ ಗುರಿ ತಲುಪಿದ ಉತ್ತರಕನ್ನಡ ಆರೋಗ್ಯ ಇಲಾಖೆ. ಯಶಸ್ಸಿಗೆ ಕಾರಣರಾದವರಿಗೆ ಡಿಸಿ ಅಭಿನಂದನೆ.

ಕಾರವಾರ : ದೇಶಾದ್ಯಂತ ನಡೆದ ಬೃಹತ್ ಕೋವಿಡ್ ಲಸಿಕಾ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೀಡಲಾದ 85000 ಗುರಿಯನ್ನು ತಲುಪಿಸುವಲ್ಲಿ ...

ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...