ಬಾಲ ಕಾರ್ಮಿಕರು ಕಂಡುಬಂದಲ್ಲಿ 1098 ಗೆ ಮಾಹಿತಿ ನೀಡಿ- ಸಿ.ಎಂ.ಜೋಷಿ

Source: so news | By Manju Naik | Published on 12th June 2019, 8:03 PM | Coastal News | Don't Miss |

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಬಾಲ ಕಾರ್ಮಿಕರು ಕಂಡು ಬಂದಲ್ಲಿ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಸಾರ್ವಜನಿಕರು ಕರೆ ಮಾಡಿ, ಮಾಹಿತಿ ನೀಡುವುದರ ಮೂಲಕ, ಸಮಾಜದಲ್ಲಿ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ.ಜೋಷಿ ತಿಳಿಸಿದ್ದಾರೆ.
ಅವರು ಬುಧವಾರ, ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ, ವಕೀಲರ ಸಂಘ(ರಿ) ಉಡುಪಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಉಡುಪಿ, ಇವರ ಜಂಟಿ ಆಶ್ರಯದಲ್ಲಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನಿನಿಂದ ಮಾತ್ರ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಸಾಧ್ಯವಿಲ್ಲ, ಸಮಾಜದ ಪ್ರತಿಯೊಬ್ಬರೂ ಸಹ ಇಂತಹ ಪಿಡುಗುಗಳ ನಿವಾರಣೆಗೆ ಸತತವಾಗಿ ಪ್ರಯತ್ನಿಸಬೇಕು, ಸಮಾಜದಲ್ಲಿ ಈ ಪಿಡುಗಿನ ಬಗ್ಗೆ ಅರಿವು ಮೂಡಿಸುವುದಲ್ಲದೇ, ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕೂಡಲೇ 1098 ಗೆ ಕರೆ ಮಾಡುವ ಮೂಲಕ ಮತ್ತು ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಮೂಲಕ, ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನ್ಯಾಯಧೀಶರು ಹೇಳಿದರು.
 ಕುಟುಂಬದಲ್ಲಿನ ಆರ್ಥಿಕ ಸಮಸ್ಯೆ, ಅನಿವಾರ್ಯ ಸಂದರ್ಭಗಳು, ಶಿಕ್ಷಣದ ಕೊರತೆ ಮುಂತಾದ ಸಮಾಜದಲ್ಲಿನ ಹಲವು ಸಂಗತಿಗಳು ಬಾಲ ಕಾರ್ಮಿಕರ ಪದ್ದತಿಗೆ ಕಾರಣವಾಗಿದ್ದು, ಬಾಲ ಕಾರ್ಮಿಕ ಪದ್ದತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಬಾಲ ಕಾರ್ಮಿಕ ಪದ್ಧತಿ ಎಲ್ಲೂ ತಲೆಯೆತ್ತದಂತೆ ಮಾಡಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎಂದು ನ್ಯಾ. ಜೋಷಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಇದೆ ಎನ್ನುವುದು ಸಮಾಜದ ಪ್ರತಿಯೊಬ್ಬರೂ ತಲೆ ತಗ್ಗಿಸುವ ವಿಚಾರ. ನಾಗರೀಕ ಸಮಾಜದಲ್ಲಿನ ಅಮಾನವೀಯ ಸಂಗತಿ, ಮಕ್ಕಳಿಗೆ ಅವರ ಬಾಲ್ಯ ಕಳೆಯಲು ಅವಕಾಶ ನೀಡಬೇಕು, ಮನೆ ಕೆಲಸಕ್ಕೆ ಅಥವಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಸಮಾಜದ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ದತಿಯಿಂದ ಹೊರಬಂದು, ತನ್ನ ವಿದ್ಯಾಭ್ಯಾದ ಮುಂದುವರೆಸಿ, ದ್ವಿತೀಯ ಪಿಯುಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ರಾಜುವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಬಾಲ ಕಾರ್ಮಿಕ ನಿಷೇಧ ಕುರಿತ ಪ್ರತಿಜ್ಞಾ ವಿಧಿ ಭೋಧಿಸಿದರು.
ಅಪರ ಜಿಲ್ಲಾ ಸರಕಾರಿ ವಕೀಲ ಮಹಮ್ಮದ್ ಸುಹಾನ್, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. 
 ಎಎಸ್ಪಿ ಕುಮಾರಚಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಬಾಲಕೃಷ್ಣ, ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ. ಫುರ್ಟಾಡೋ, ಉಡುಪಿ ವಕೀಲರ ಸಂಘ (ರಿ) ದ ಅಧ್ಯಕ್ಷ ದಿವಾಕರ ಎಂ ಶೆಟ್ಟಿ, ಉಡುಪಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಗದೀಶ ಉಪಸ್ಥಿತರಿದ್ದರು.
ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಂದಿಸಿದರು.

Read These Next