2017ರಲ್ಲಿ ಇಸ್ರೇಲ್‌ನಿಂದ ಪೆಗಾಸಸ್ ಖರೀದಿಸಿದ್ದ ಭಾರತ ರಕ್ಷಣಾ ಒಪ್ಪಂದದಡಿ ಸ್ಪೆವೇರ್ ಮಾರಾಟ; ನ್ಯೂಯಾರ್ಕ್ ಟೈಮ್ಸ್ ವರದಿ

Source: VB | By I.G. Bhatkali | Published on 31st January 2022, 4:36 PM | National News | Global News |

ನ್ಯೂಯಾರ್ಕ್: ಇಸ್ರೇಲಿ ಪ್ರೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಾಧನಗಳ ಖರೀದಿಗಾಗಿ ಭಾರತವು ಇಸ್ರೇಲ್ ಜೊತೆ 2017ರಲ್ಲಿ ಮಾಡಿಕೊಂಡಿದ್ದ ಅಂದಾಜು ಎರಡು ಶತಕೋಟಿ ಬಿಲಿಯನ್ ಡಾಲರ್‌ಗಳ ಖರೀದಿ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್ (ಎನ್‌ವೈಟಿ) ವರದಿ ಮಾಡಿದೆ.

ಎನ್‌ಎಸ್‌ಒ ಗ್ರೂಪ್‌ನ ಉತ್ಪನ್ನವಾಗಿರುವ, ಮಿಲಿಟರಿ ದರ್ಜೆಯದೆಂದು ವರ್ಗೀಕರಿಸಲಾಗಿ ರುವ ವಿವಾದಾತ್ಮಕ ಪೆಗಾಸಸ್ ಸ್ಪೆವೇರ್‌ನ ರಕ್ಷಣಾ ಒಪ್ಪಂದದ ಭಾಗವಾಗಿತ್ತು ಎಂದು ಎನ್ ವೈಟಿ 'ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ ಮೋಸ್ಟ್ ಪವರ್‌ಫುಲ್‌ ಸೈಬರ್‌ವೆಪನ್' ಶೀರ್ಷಿಕೆಯ ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.

ಭಾರತ ಸೇರಿದಂತೆ ಹಲವಾರು ದೇಶಗಳ ಸರಕಾರಗಳಿಂದ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಇತರರ ಮೇಲೆ ಕಣ್ಣಾವಲಿಗಾಗಿ ಇಸ್ರೇಲಿನ ಎನ್ ಎಸ್‌ಒ ಗ್ರೂಪ್‌ನ ಪೆಗಾಸಸ್ ಪ್ರೈವೇರ್‌ನ ಬಳಕೆಯು ಖಾಸಗಿತನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕಳವಳಗಳಿಗೆ ಕಾರಣವಾಗಿದ್ದು, ಕಳೆದ ವರ್ಷ ಭಾರೀ ವಿವಾದ ಸೃಷ್ಟಿಯಾಗಿತ್ತು.

ವರ್ಷವಿಡೀ ನಡೆಸಿದ ತನಿಖೆಯ ಸಂದರ್ಭ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಹೇಗೆ ಪೆಗಾಸಸ್‌ನ್ನು ಖರೀದಿಸಿತ್ತು ಮತ್ತು ಅಂತಿಮವಾಗಿ ಅದನ್ನು ಬಳಸದಿರಲು ಕಳೆದ ವರ್ಷ ನಿರ್ಧಾರ ಕೈಗೊಳ್ಳುವವರೆಗೆ ದೇಶಿಯ ಕಣ್ಣಾವಲಿಗಾಗಿ ಅದನ್ನು ಬಳಸುವ ಯೋಜನೆಯೊಂದಿಗೆ ವರ್ಷಗಳ ಕಾಲ ಅದನ್ನು ಪರೀಕ್ಷೆಗೊಳಪಡಿಸಿತ್ತು ಎನ್ನುವುದನ್ನು ಪರಿಶೀಲಿಸಲಾಗಿದೆ ಎಂದು ಎನ್‌ವೈಟಿ ತನ್ನ ವರದಿಯಲ್ಲಿ ಹೇಳಿದೆ.

ಇಸ್ರೇಲ್ ರಕ್ಷಣಾ ಸಚಿವಾಲಯದ ಪರವಾನಿಗೆಯನ್ನು ಪಡೆದುಕೊಂಡಿದ್ದ ಹೊಸ ಒಪ್ಪಂದಗಳಡಿ ಪೆಗಾಸಸ್ ಸ್ಪೆವೇರ್‌ನ ಹೇಗೆ ಭಾರತ, ಹಂಗರಿ ಮತ್ತು ಪೋಲ್ಯಾಂಡ್‌ಗಳಿಗೆ ಮಾರಾಟ ಮಾಡಲಾಗಿತ್ತು ಎನ್ನುವುದನ್ನು ವರದಿಯು ವಿವರಿಸಿದೆ.

ವರದಿಯು ಹೇಳಿರುವಂತೆ ಪೆಗಾಸಸ್ ಪ್ರೈವೇರ್ ಖರೀದಿ ಯನ್ನೊಳಗೊಂಡ ಭಾರತ-ಇಸ್ರೇಲ್ ನಡುವಿನ ಒಪ್ಪಂದವನ್ನು 2017ರಲ್ಲಿ ಮಾಡಿಕೊಳ್ಳಲಾಗಿತ್ತು. ಅದೇ ವರ್ಷ ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯನ್ನೂ ವರದಿಯು ಪ್ರಸ್ತಾಪಿಸಿದೆ. ಮೋದಿ ಆ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿದ್ದರು. ಭಾರತವು ದಶಕಗಳಿಂದಲೂ ತಾನು ಬಣ್ಣಿಸಿದ್ದ 'ಫೆಲೆಸ್ತೀನಿ ಹೋರಾಟದ ಕಾರಣಕ್ಕೆ ತನ್ನ ಬದ್ಧತೆ'ಯನ್ನು ಕಾಯ್ದುಕೊಂಡಿತ್ತು ಮತ್ತು ಇಸ್ರೇಲ್‌ನೊಂದಿಗಿನ ಸಂಬಂಧ ಅಪಕಷ ಇತ್ತು.

2017 ಜುಲೈನಲ್ಲಿ ಇಸ್ರೇಲ್‌ಗೆ ಮೋದಿ ಭೇಟಿಯು ಗಮನಾರ್ಹವಾಗಿ ಸೌಹಾರ್ದಯುತವಾಗಿತ್ತು ಮತ್ತು ಅವರು ಹಾಗೂ ಇಸ್ರೇಲಿನ ಆಗಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಸಮುದ್ರ ತೀರದಲ್ಲಿ ಬರಿಗಾಲಿನಿಂದವಾಕಿಂಗ್ ಮಾಡುತ್ತಿದ್ದ ಎಚ್ಚರಿಕೆಯಿಂದ ಯೋಜಿತವಾಗಿದ್ದ ಘಳಿಗೆಯೊಂದಿಗೆ ಪೂರ್ಣಗೊಂಡಿತ್ತು ಎಂದು ವರದಿಯು ಹೇಳಿದೆ.

ಉಭಯ ಪ್ರಧಾನಿಗಳ ನಡುವಿನ ಆತ್ಮೀಯ ನಡವಳಿಕೆಗೆ ಕಾರಣವಿತ್ತು. ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಕೇಂದ್ರಬಿಂದುವನ್ನಾಗಿಸಿಕೊಂಡು ಅಂದಾಜು ಎರಡು ಶತಕೋಟಿ ಡಾಲರ್‌ಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಾಧನಗಳ ಪ್ಯಾಕೇಜ್‌ನ ಮಾರಾಟಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದ್ದವು. ತಿಂಗಳುಗಳ ಬಳಿಕ ನೇತನ್ಯಾಹು ಭಾರತಕ್ಕೆ ಅಪರೂಪದ ಭೇಟಿಯನ್ನು ನೀಡಿದ್ದರು. 2019 ಜೂನ್‌ನಲ್ಲಿ ಭಾರತವು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಫೆಲೆಸ್ತೀನ್‌ನ ಪ್ರಪ್ರಥಮ ಮಾನವ ಹಕ್ಕುಗಳ ಸಂಘಟನೆಗೆ ವೀಕ್ಷಕ ಸ್ಥಾನಮಾನವನ್ನು ನಿರಾಕರಿಸಲು ಇಸ್ರೇಲ್ ಪರವಾಗಿ ಮತ ಚಲಾಯಿಸಿತ್ತು ಎಂದು ವರದಿಯು ಬೆಟ್ಟು ಮಾಡಿದೆ.

ಮೆಕ್ಸಿಕೋ ಮತ್ತು ಪನಾಮಾದಂತಹ ದೇಶಗಳು ಪೆಗಾಸಸ್ ಸ್ಟವೇರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಬಳಿಕ ವಿಶ್ವಸಂಸ್ಥೆಯಲ್ಲಿ ಪ್ರಮುಖ ಮತದಾನಗಳ ಸಂದರ್ಭಗಳಲ್ಲಿ ತಮ್ಮ ನಿಲುವನ್ನು ಇಸ್ರೇಲ್ ಪರವಾಗಿ ಬದಲಿಸಿಕೊಂಡಿವೆ ಎಂದೂ ವರದಿಯು ಹೇಳಿದೆ.

ಒಪ್ಪಂದದ ನಿರ್ದಿಷ್ಟತೆಗಳ ಕುರಿತು ಅಥವಾ ಸರಕಾರದ ಯಾವ ಏಜೆನ್ಸಿ ಅಥವಾ ಇಲಾಖೆ ಭಾರತ ಸರಕಾರದ ಪರವಾಗಿ ಪೆಗಾಸಸ್‌ನ್ನು ಖರೀದಿಸಿತ್ತು ಎನ್ನುವ ಬಗ್ಗೆ ಹೆಚ್ಚಿನ ವಿವರಗಳನ್ನು ವರದಿಯು ಒದಗಿಸಿಲ್ಲ.

ಭಾರತವು ಇಸ್ರೇಲಿನಿಂದ ಪೆಗಾಸಸ್ ಸ್ಪೆವೇರ್ ಅನ್ನು ಖರೀದಿಸಿತ್ತು ಎನ್ನುವುದನ್ನು ಈವರೆಗೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿಲ್ಲ. ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ತಾಂತ್ರಿಕ ಸಮಿತಿಯು ತಮ್ಮ ಮೊಬೈಲ್ ಸಾಧನಗಳು ಪೆಗಾಸಸ್ ಮಾಲ್‌ವೇರ್‌ನಿಂದ ಬಾಧಿತಗೊಂಡಿದ್ದವು ಎಂಬ ಅನುಮಾನವಿದ್ದರೆ ಅಂತಹ ನಾಗರಿಕರು ಮುಂದೆ ಬಂದು ತನ್ನನ್ನು ಸಂಪರ್ಕಿಸುವಂತೆ ಸೂಚಿಸಿ ಜ.2ರಂದು ಬಹಿರಂಗ ನೋಟಿಸನ್ನು ಹೊರಡಿಸಿತ್ತು.

ತಮ್ಮ ಮೊಬೈಲ್ ಸಾಧನವು ಪೆಗಾಸಸ್‌ ನಿಂದ ಬಾಧಿತವಾಗಿದೆ ಎಂದು ಭಾವಿಸಲು ಕಾರಣಗಳನ್ನು ಮತ್ತು ಸದ್ರಿ ಸಾಧನವನ್ನು ಪರೀಕ್ಷಿಸಲು ತಾಂತ್ರಿಕ ಸಮಿತಿಗೆ ಅವಕಾಶ ನೀಡಲು ಅವರು ಸಿದ್ದರಿದ್ದಾರೆಯೇ ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿಸುವಂತೆಯೂ ಬಹಿರಂಗ ನೋಟಿಸ್‌ನಲ್ಲಿ ನಾಗರಿಕರನ್ನು ಕೋರಲಾಗಿತ್ತು.

ವಿಶ್ವಾದ್ಯಂತ ಹಲವಾರು ಸರಕಾರಗಳು ವಿರೋಧಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಕಣ್ಣಾವಲು ಇರಿಸಲು ಪೆಗಾಸಸ್ ಪ್ರೈವೇರ್‌ನ್ನು ಬಳಸಿಕೊಂಡಿವೆ ಎಂದು ಅಂತರ್‌ರಾಷ್ಟ್ರೀಯ ಮಾಧ್ಯಮ ಗುಂಪುಗಳ ಜಾಗತಿಕ ಒಕ್ಕೂಟವು 2021,ಜುಲೈನಲ್ಲಿ ಬಹಿರಂಗಗೊಳಿಸಿತ್ತು.

ಪ್ರತಿಪಕ್ಷ ನಾಯಕರು, ಸಾಮಾಜಿಕ ಹೋರಾಟಗಾರರು, ಉದ್ಯಮಿಗಳು, ನ್ಯಾಯಾಧೀಶರು ಮತ್ತು ಪತ್ರಕರ್ತರ ಮೇಲೆ ಕಣ್ಣಾವಲು ಇರಿಸಲು ಸರಕಾರವು ಮಿಲಿಟರಿ ದರ್ಜೆಯ ಖಾಸಗಿ ಇಸ್ರೇಲಿ ಪೆಗಾಸಸ್ ಸ್ಪೆವೇರ್‌ನ್ನು ಬಳಸಿಕೊಂಡಿತ್ತೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ತಜ್ಞರ ಸಮಿತಿಗೆ ನಿರ್ದೇಶ ನೀಡಿತ್ತು.

ವಿಶ್ವಾದ್ಯಂತ ಪೆಗಾಸಸ್ ಸ್ಪೆವೇರ್ ಹೇಗೆ ಬಳಕೆಯಾಗಿದೆ ಎನ್ನುವುದರ ಮೇಲೆಯೂ ವರದಿಯು ಬೆಳಕು ಚೆಲ್ಲಿದೆ. ಮೆಕ್ಸಿಕೊ ಭಿನ್ನಮತೀಯರನ್ನು ಮತ್ತು ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದ್ದರೆ, ಸೌದಿ ಅರೇಬಿಯವು ಮಹಿಳಾ ಹಕ್ಕುಗಳ ಪರ ಹೋರಾಟಗಾರರು ಮತ್ತು 2018ರಲ್ಲಿ ಇಸ್ತಾಂಬುಲ್‌ನಲ್ಲಿ ಸೌದಿ ಏಜೆಂಟ್‌ರಿಂದ ಹತ್ಯೆಗೀಡಾಗಿದ್ದ 'ದಿ ವಾಶಿಂಗ್ಟನ್ ಪೋಸ್ಟ್ 'ನ ಅಂಕಣಕಾರ ಜಮಾಲ್ ಖಶೋಗಿಯವರ ಸಹಚರರ ವಿರುದ್ಧ ಪೆಗಾಸಸ್‌ನ್ನು ಬಳಸಿಕೊಂಡಿತ್ತು ಎಂದು ಅದು ಹೇಳಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...