ನಾವು ವೈದ್ಯರು, ಎಂಜಿನಿಯರ್, ವಿಜ್ಞಾನಿಗಳನ್ನು ಸೃಷ್ಟಿಸಿದರೆ ಪಾಕ್ ಉಗ್ರರು, ಜಿಹಾದಿಗಳನ್ನು ಹುಟ್ಟು ಹಾಕುತ್ತಿದೆ: ಸುಷ್ಮಾ ಸ್ವರಾಜ್

Source: Kannada Prabha | By I.G. Bhatkali | Published on 25th September 2017, 1:10 AM | National News |
ನವದೆಹಲಿ: ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದ ನಂತರವೂ ಭಾರತ ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡು ಎಂಜಿನಿಯರ್ ಗಳು, ವೈದ್ಯರನ್ನು ಉತ್ಪಾದಿಸುತ್ತಿದ್ದರೆ ಪಾಕಿಸ್ತಾನ ಏಕೆ ಜಿಹಾದಿಗಳನ್ನು ಹುಟ್ಟುಹಾಕಿ ಬೆಳೆಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಕೇಳಿದೆ. ಈ ವಿಷಯ ಕುರಿತು ಸ್ವಲ್ಪ ಚಿಂತಿಸಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಕೂಡ ಅವರು ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಳೆದ ರಾತ್ರಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಹಿಂದಿಯಲ್ಲಿ ಮಾತನಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಈ ವೇಳೆ, ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಅವರ ಜಮ್ಮು-ಕಾಶ್ಮೀರದಲ್ಲಿ ದುಷ್ಕೃತ್ಯಗಳು ನಡೆಯುತ್ತಿದ್ದು ಅದಕ್ಕೆ ಭಾರತ ಕಾರಣ ಎಂದು ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

ಪಾಕಿಸ್ತಾನ ತನ್ನ ಸಂಪನ್ಮೂಲವನ್ನು ತನ್ನ ದೇಶದಲ್ಲಿ ಭಯೋತ್ಪಾದನೆಯನ್ನು ಕಿತ್ತೊಗೆಯಲು ಸದುಪಯೋಗಪಡಿಸಿಕೊಂಡರೆ ವಿಶ್ವದಲ್ಲಿ ಭಯೋತ್ಪಾದನೆಯನ್ನು ಹೊಡೆದೋಡಿಸಬಹುದು ಎಂದರು.

ಭಾರತದಲ್ಲಿ ನಾವು ಐಐಟಿ, ಐಐಎಂ ಪದವೀಧರರನ್ನು ಸೃಷ್ಟಿ ಮಾಡಿದರೆ ನೀವು ಲಷ್ಕರ್ ಎ-ತೊಯ್ಬಾ, ಜೈಶ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ರಂತಹ ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿ ಮಾಡಿದ್ದೀರಿ. ನಾವು ವೈದ್ಯರು, ವಿಜ್ಞಾನಿಗಳನ್ನು ಸೃಷ್ಟಿಸಿದರೆ ನೀವು ಭಯೋತ್ಪಾದಕರನ್ನು ಮತ್ತು ಜಿಹಾದಿಗಳನ್ನು ಬೆಳೆಸಿದ್ದೀರಿ. ವೈದ್ಯರು ಜೀವ ಉಳಿಸಿದರೆ. ಜಿಹಾದಿ ಕೊಲ್ಲುತ್ತಾನೆ ಎಂದು ಸುಷ್ಮಾ ಸ್ವರಾಜ್ ತೀಕ್ಷ್ಣವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

193 ರಾಷ್ಟ್ರಗಳ ನಾಯಕರು ಭಾಗವಹಿಸಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ 21 ನಿಮಿಷಗಳ ಭಾಷಣದಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನ ಪ್ರಧಾನಿಯ ಹೆಸರನ್ನು ಎರಡು ಬಾರಿ ಉಚ್ಛರಿಸಿದರು. ತೀವ್ರ ಹಿಂಸೆ, ಸಾವು ನೋವು ಮತ್ತು ಅಮಾನವೀಯತೆಯನ್ನು ನಡೆಸುವ ದೇಶ ಇಂದು ಈ ವೇದಿಕೆಯಲ್ಲಿ ಮಾನವೀಯತೆಯ ಬೋಧನೆ ಮಾಡುತ್ತಿದೆ ಎಂದರು. 

ಪಾಕ್ ಪ್ರಧಾನಿ ಇದಕ್ಕೂ ಮುನ್ನ ತಮ್ಮ ಮೊದಲ ಭಾಷಣದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಭಯೋತ್ಪಾದನೆ ನಡೆಸುತ್ತಿದೆ ಮತ್ತು ಕಾಶ್ಮೀರವನ್ನು ಯುದ್ಧ ಭೂಮಿಯನ್ನಾಗಿ ಮಾಡಿದೆ, ಅಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ,ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತುವ ಯಾವುದೇ ಅಧಿಕಾರ ಪಾಕಿಸ್ತಾನಕ್ಕೆ ಇಲ್ಲ. ಪಾಕಿಸ್ತಾನ ಒಂದು ವಿಫಲ ದೇಶ ಎಂದು ಆರೋಪಿಸಿದರು.

ಸುಷ್ಮಾ ಸ್ವರಾಜ್ ಹವಾಮಾನ ಬದಲಾವಣೆ ಮತ್ತು ವಿಶ್ವ ಸಂಸ್ಥೆಯ ಸುಧಾರಣೆಗಳ ಬಗ್ಗೆ ಮಾತನಾಡಿದರು.ಅದಕ್ಕಿಂತಲೂ ಹೆಚ್ಚು ಭಯೋತ್ಪಾದನೆಯನ್ನು ಹೋಗಲಾಡಿಸಲು ಪಾಕಿಸ್ತಾನದ ನೆರವಿಗೆ ಅವರು ಈ ಸಂದರ್ಭದಲ್ಲಿ ವಿಶೇಷ ಒತ್ತು ನೀಡಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...