ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಕೈಂ; 5 ತಿಂಗಳು, 64 ಪ್ರಕರಣಗಳು, 1.29 ಕೋಟಿ ರೂ. ಆನ್‌ಲೈನ್ ವಂಚನೆ!

Source: Vb | By I.G. Bhatkali | Published on 2nd June 2023, 12:51 PM | Coastal News | State News |

ಉಡುಪಿ: ಬದಲಾದ ಕಾಲಘಟ್ಟದಲ್ಲಿ ವಂಚನೆಯ ರೂಪಗಳು ಕೂಡ ಬದಲಾಗಿದೆ. ಇದೀಗ ಎಲ್ಲೋ ಕೂತು ಆನ್‌ಲೈನ್ ಮೂಲಕ ಜೇಬಿಗೆ ಕತ್ತರಿ ಹಾಕುವ ಜಾಲ ಎಲ್ಲೆಡೆ ವ್ಯಾಪಿಸಿದೆ. ಬ್ಯಾಂಕ್ ಖಾತೆಯ ಕೆವೈಸಿ ಬದಲಾವಣೆ, ಆನ್‌ಲೈನ್‌ ಕೆಲಸ, ಟಾಸ್ಕ್, ಸಾಮಾಜಿಕ ಜಾಲತಾಣಗಳಲ್ಲಿ ಗೆಳೆತನ, ವಸ್ತುಗಳ ಮಾರಾಟ, ಆಫರ್‌ಗಳು... ಹೀಗೆ ನಾನಾ ರೀತಿಯಲ್ಲಿ ಮೋಸಕ್ಕೆ ಬಲೆ ಬೀಸುವ ಸೈಬರ್ ಕ್ರೈಮ್ ತಂಡವೊಂದು ಸಕ್ರಿಯವಾಗಿದೆ.

ಹೀಗೆ ಬುದ್ದಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ಉಡುಪಿ ಜಿಲ್ಲೆಯಲ್ಲೂ ಸಾಕಷ್ಟು ಮಂದಿ ಈ ಜಾಲಕ್ಕೆ ಬಲಿಯಾಗಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. 2023ರ ಜನವರಿಯಿಂದ ಮೇ ತಿಂಗಳವರೆಗೆ ಕೇವಲ ಐದು ತಿಂಗಳಲ್ಲಿ ಒಟ್ಟು 64 ಪ್ರಕರಣಗಳಲ್ಲಿ ಸುಮಾರು 1,29,21,041 ರೂ.ವನ್ನು ಆನ್‌ಲೈನ್ ಮೂಲಕ ವಂಚಿಸಲಾಗಿ ದೆ. ಈ ಸಂಬಂಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ. ದಾಖಲಾದ ವಂಚನೆ ಪ್ರಕರಣಗಳು: 2019ರಲ್ಲಿ ಒಟ್ಟು 29 ಸೈಬರ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 21 ಮೊಬೈಲ್ ಮತ್ತು ಇಂಟರ್‌ನೆಟ್ ಮೂಲಕ ಹಣ ವಂಚಿಸಿರುವ ಪ್ರಕರಣಗಳಾಗಿವೆ. ಇದರಲ್ಲಿ ಒಟ್ಟು 47,94,050 ರೂ. ದೋಚಲಾಗಿದೆ.

ಅದೇ ರೀತಿ 2020ರಲ್ಲಿ ದಾಖಲಾದ ಒಟ್ಟು 48 ಸೈಬರ್ ಪ್ರಕರಣಗಳ ಪೈಕಿ 24 ಹಣ ವಂಚನೆ ಪ್ರಕರಣಗಳಾಗಿವೆ. ಇದರಲ್ಲಿ ಒಟ್ಟು 56,95,537 ರೂ. ವಂಚಿಸಲಾಗಿದೆ.

2021ರಲ್ಲಿ 43 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 25 ಪ್ರಕರಣಗಳಲ್ಲಿ ಒಟ್ಟು 33,81,104 ರೂ. ವಂಚಿಸಿ ದೋಚಲಾಗಿದೆ. 2022ರ ಫೆ.28ರವರೆಗೆ ಮೂರು ಪ್ರಕರಣಗಳಲ್ಲಿ ಇಂಟರ್‌ನೆಟ್‌ ಮತ್ತು ಮೊಬೈಲ್ ಫೋನ್ ಬಳಸಿ ಒಟ್ಟು 2,00,217 ರೂ. ವಂಚನೆ ಎಸಗಲಾಗಿದೆ ಎಂಬುದು ಪೊಲೀಸ್ ದಾಖಲೆಗಳು ತಿಳಿಸುತ್ತವೆ.

2019ರಿಂದ 2022ರ ಫೆಬ್ರವರಿವರೆಗೆ ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಒಟಿಪಿ ಪಡೆದು ವಂಚಿಸುವ 8 ಪ್ರಕರಣಗಳಲ್ಲಿ ಒಟ್ಟು 12,46,174 ರೂ., ಆನ್‌ಲೈನ್ ಮೂಲಕ ಬಲೆ ಬೀಸಿ ವಂಚಿಸುವ 38 ಪ್ರಕರಣಗಳಲ್ಲಿ ಒಟ್ಟು 90,27,067 ರೂ. ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚಿಸುವ 5 ಪ್ರಕರಣಗಳಲ್ಲಿ ಒಟ್ಟು 27,75,269ರೂ. ದೋಚಲಾಗಿದೆ ಎಂದು ಸೆನ್ ಪೊಲೀಸ್‌ ಠಾಣಾ ದಾಖಲೆಗಳು ತಿಳಿಸಿವೆ.

ವಿದ್ಯಾವಂತರೇ ಬಲಿಪಶು: ಉಡುಪಿ ಜಿಲ್ಲೆಯಲ್ಲಿ ದಾಖಲಾದ ಬಹುತೇಕ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ವಿದ್ಯಾವಂತರೇ ಬಲಿಪಶುಗಳು ಆಗಿದ್ದಾರೆ. ಅದರಲ್ಲೂ ನಿವೃತ್ತ ಬ್ಯಾಂಕ್‌ ಅಧಿಕಾರಿ ಗಳು, ಇಂಜಿನಿಯರ್‌ಗಳು ಕೂಡ ಮೋಸ ಹೋಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.

ಹೆಚ್ಚು ಓದು ತಿಳಿಯದವರು ತಮ್ಮ ವಾಟ್ಸ್ ಆ್ಯಪ್ ಅಥವಾ ಎಸ್ ಎಂಎಸ್‌ಗೆ ಬರುವ ಆಂಗ್ಲ ಭಾಷೆಯ ಸಂದೇಶಗಳನ್ನು ಓದುವ ಗೌಜಿಗೆ ಹೋಗುತ್ತಿಲ್ಲ. ಆದರೆ ವಿದ್ಯಾವಂತರು ಅದನ್ನು ಸರಿಯಾಗಿ ತಿಳಿದು ಹೆಚ್ಚಿನ ಹಣದ ದುರಾಸೆಯಿಂದ ಮುಂದುವರಿದು ವಂಚನೆ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಈ ಸಂಬಂಧ ಸಾಕಷ್ಟು ವಿಶ್ಲೇಷಣೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತೇವೆ. ಅದೇ ರೀತಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಕೂಡ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ' ಎಂದು ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೇಂದ್ರ ತಿಳಿಸಿದ್ದಾರೆ.

ಪ್ರತಿ ಠಾಣೆಯಲ್ಲೂ ಕ್ರಮ: ಆನ್‌ಲೈನ್‌ ವಂಚನೆಗೆ ಒಳಗಾದವರು ಹಲವು ಬಾರಿ ಹಣ ಕಳೆದುಕೊಂಡ ಬಳಿಕವೇ ಠಾಣೆಗೆ ಬಂದು ದೂರು ನೀಡುತ್ತಾರೆ. ಇದರಿಂದ ವಂಚಕನನ್ನು ಪತ್ತೆ ಹಚ್ಚುವುದು ಅಥವಾ ಹಣವನ್ನು ವಾಪಸು ಪಡೆಯಲು ಸಾಧ್ಯ ಇರುವುದಿಲ್ಲ. ಆದುದರಿಂದ ವಂಚನೆಗೆ ಒಳಗಾದ ತಕ್ಷಣವೇ ತಮ್ಮ ಗೋಲ್ಡನ್ ಆವ‌ನ್ನು ಬಳಸಿಕೊಂಡು 1930 ಸೈಬರ್ ಕ್ರೈಮ್ ಪೋರ್ಟಲ್ ಅಥವಾ ಯಾವುದೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಸದ್ಯ ಉಡುಪಿ ಜಿಲ್ಲೆಯಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಕೇವಲ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮಾತ್ರ ದಾಖಲಾಗುತ್ತಿವೆ. ಮುಂದೆ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲೂ ಈ ಕುರಿತು ದೂರು ಕೊಟ್ಟ ತಕ್ಷಣ ಪ್ರಕರಣ ದಾಖಲಿಸುವ ವ್ಯವಸ್ಥೆಯನ್ನು ತರಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಎಸ್ಪಿ ಅಕ್ಷಯ್‌ ಹಾಕೇ ಮಚ್ಚೇಂದ್ರ ತಿಳಿಸಿದ್ದಾರೆ.

“ಇಂದು ಸೈಬರ್ ಕ್ರೈಂ ವಂಚನೆ ಪ್ರಕರಣಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗಿವೆ. ಪ್ರತಿಯೊಂದು ದೂರುಗಳನ್ನು ದಾಖಲಿಸಿ, ಅದನ್ನು ಫಾಲೋ ಅಪ್ ಮಾಡುತ್ತಿದ್ದೇವೆ. ಇದರಿಂದ ಆರೋಪಿಗಳ ಬ್ಯಾಂಕಿಂಗ್ ನೆಟ್‌ವರ್ಕ್, ಮೊಬೈಲ್ ಸಿಮ್‌ಗಳ ಬಗ್ಗೆ ಮಾಹಿತಿ ನಮ್ಮಲ್ಲಿ ಇರುತ್ತದೆ. ಇದು ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಆಫರ್‌ಗಳಿಗೆ ಬಲಿಯಾಗಬೇಡಿ: ಎಸ್ಟಿ ಮನವಿ:
ಸೈಬರ್ ಕೈಂನಲ್ಲಿ ಸಂತ್ರಸ್ತರ ಸಹಕಾರ ಇಲ್ಲದೇ ಪ್ರಕರಣ ನಡೆಯಲು ಸಾಧ್ಯವೇ ಇಲ್ಲ. ಸಂತ್ರಸ್ತನೇ ತನ್ನ ಪಾಸ್‌ವರ್ಡ್, ಓಟಿಪಿ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಕೊಟ್ಟರೆ ಮಾತ್ರ ವಂಚಕನಿಗೆ ಹಣ ಲಪಟಾಯಿಸಲು ಸಾಧ್ಯವಾಗುತ್ತದೆ. ಆದುದರಿಂದ ಯಾವುದೇ ಕರೆ, ಆಫರ್‌ಗೆ ಬಲಿಯಾಗಿ ಹಣ ವರ್ಗಾವಣೆ ಮಾಡಲು ಹೋಗಬೇಡಿ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಡಿಮೆ ಹಣದಲ್ಲಿ ದ್ವಿಚಕ್ರ ವಾಹನ, ಮೊಬೈಲ್, ವಿದೇಶದಿಂದ ಉಡುಗೊರೆ, ಆನ್‌ಲೈನ್ ಜಾಬ್, ಫಾಸ್ಟ್ ಫುಡ್, ಬೈಕ್ ಫ್ರಾಂಚೈಸಿ ಕೊಡುತ್ತೇವೆ ಎಂದು ಹೇಳಿ ಕರೆ ಬಂದರೆ ಆ ಕುರಿತು ಮೊದಲು ಮರುಪರಿಶೀಲನೆ ಮಾಡಿ, ಯಾವುದೇ ಬ್ಯಾಂಕಿನವರು ಕ್ರೆಡಿಕ್ ಕಾರ್ಡ್ ವಿವರ, ಓಟಿಪಿ, ಎಟಿಎಂ ಪಿನ್ ನಂಬರ್ ಕೇಳುವುದಿಲ್ಲ. ಆದುದರಿಂದ ದಯವಿಟ್ಟು ಇಂತಹ ಕರೆಗಳು ಬಂದಾಗ ಆಲೋಚನೆ ಮಾಡಿ, ಸಂಶಯ ಬಂದರೆ ಬ್ಯಾಂಕ್‌ನವರನ್ನು ಸಂಪರ್ಕಿಸಿ. ನಿಮ್ಮ ಬ್ಯಾಂಕ್ ಖಾತೆ, ಮೊಬೈಲ್‌ಗಳ ಪಾಸ್‌ವರ್ಡ್, ಪಿನ್ ನಂಬರ್‌ಗಳನ್ನು ಆಗಾಗ ಬದಲಾಯಿಸಿಕೊಂಡು ಇರಿ. ಆಗ ಮಾತ್ರ ಇದರಿಂದ ಪಾರಾಗಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಆಫರ್ ಗಳಿಗೆ ಬಲಿಯಾಗಬೇಡಿ ಎಂದು ಅವರು ತಿಳಿಸಿದರು.

ವಂಚನೆಯ ವಿವಿಧ ರೂಪಗಳು:
ಬ್ಯಾಂಕ್‌ ಅಧಿಕಾರಿಗಳೆಂದು ಕರೆ ಮಾಡಿ ಕೆವೈಸಿ ಅಪ್ಲೇಟ್ ಮಾಡಬೇಕೆಂದು ನಂಬಿಸಿ ಎಟಿಎಂ ಕಾರ್ಡ್ ನಂಬರ್ ಮತ್ತು ಓಟಿಪಿ ಪಡೆದು ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿ ವಂಚಿಸುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವ್ಯಕ್ತಿ ಎಂದು ಹೇಳಿ ಪರಿಚಯಿಸಿಕೊಂಡು ಗೆಳೆತನ ಮಾಡಿ, ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ ವಿವಿಧ ಶುಲ್ಕಕ್ಕಾಗಿ ಹಣ ಪಾವತಿಸುವಂತೆ ತಿಳಿಸಿ ಹಣ ಪಡೆದು ವಂಚನೆ ಮಾಡಲಾಗುತ್ತದೆ.

ವಾಟ್ಸ್‌ಆ್ಯಪ್‌ನಲ್ಲಿ ಟಾಸ್ ಉದ್ಯೋಗಕ್ಕಾಗಿ ಕಮಿಷನ್ ಹಣ ಪಡೆಯುವ ಬಗ್ಗೆ ಸಂದೇಶ ಕಳುಹಿಸಿ, ಟೆಲಿಗ್ರಾಂ ಆ್ಯಪ್ ಮೂಲಕ ಸಂಪರ್ಕಿಸಿ, ಟಾಸ್ಕ್‌ಗೆ ಹಣ ಪಡೆದು ಟಾಸ್ಕ್‌ ನೀಡದೆ, ಪಡೆದ ಹಣ ವಾಪಸು ಕೊಡದೆ ವಂಚಿಸಲಾಗುತ್ತದೆ.

ತಮ್ಮವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದು, ಖರ್ಚಿಗೆ ಹಣ ಅಗತ್ಯವಿದೆ ಎಂದು ಹೇಳಿ ಕರೆ ಮಾಡಿ ಲಕ್ಷಾಂತರ ರೂ.ವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡುತ್ತಾರೆ.

ನಿಮಗೆ ಗಿಫ್ಟ್ ಬಂದಿದೆ ಹೇಳಿ ಸಂದೇಶ ಕಳುಹಿಸಿ ಅದಕ್ಕಾಗಿ ತೆರಿಗೆ ಪಾವತಿಸುವಂತೆ ಹೇಳಿ ನಮ್ಮಿಂದಲೇ ಆನ್‌ಲೈನ್‌ ಮೂಲಕ ಹಣ ಪಡೆದು ವಂಚನೆ ಎಸಗುತ್ತಾರೆ.

ಆನ್‌ಲೈನ್‌ ಮೂಲಕ ನೋಂದಣಿ, ಸ್ಕೂಟರ್ ಖರೀದಿ ಸೇರಿದಂತೆ ವಿವಿಧ ವಸ್ತುಗಳಿಗೆ ಹುಡುಕಾಟ ನಡೆಸಿದಾಗ ದೊರೆಯುವ ಮೊಬೈಲ್ ಸಂಖ್ಯೆಗಳಿಂದ ಸಾಕಷ್ಟು ಮಂದಿ ಮೋಸಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...