ಕೃಷಿ ಯೋಗ್ಯ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಆಹಾರ ಉತ್ಪಾದನೆ ಹೆಚ್ಚಿಸಿ: ಕೋಟ ಶ್ರೀನಿವಾಸ ಪೂಜಾರಿ

Source: SO News | By Laxmi Tanaya | Published on 1st May 2021, 8:06 AM | Coastal News | Don't Miss |

ಮಂಗಳೂರು : ಜಿಲ್ಲೆಯ ಕೃಷಿ ಯೋಗ್ಯ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಆಹಾರ ಉತ್ಪಾದನೆ ಮಾಡುವುದರೊಂದಿಗೆ ಹಸಿರಾಗಿಸಬೇಕು ಎಂದು ಮಂಗಳೂರು ಜಿಲ್ಲಾಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2.09 ಲಕ್ಷ ಕುಟುಂಬಗಳಿದ್ದು, 2.08 ಲಕ್ಷ ಭೂ ಹಿಡುವಳಿದಾರರು, 1.78 ಲಕ್ಷ ಹೆಕ್ಟೇರ್ ಭೂಮಿಯನ್ನು ಹಿಡುವಳಿ ಹೊಂದಿದ್ದು, ಕಳೆದ ಸಾಲಿನಲ್ಲಿ 37,817.50 ಎಕರೆ ಪ್ರದೇಶದಲ್ಲಿ 7.56,350 ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು ಭತ್ತದ ಹಡಿಲು ಭೂಮಿ 2,392.75 ಹೆಕ್ಟೇರ್ ಪ್ರದೇಶವಿದ್ದು, ಕ್ರಮವಾಗಿ ಮಂಗಳೂರು 2125 ಹೆಕ್ಟೇರ್, ಬಂಟ್ವಾಳ 150 ಹೆಕ್ಟೇರ್, ಬೆಳ್ತಂಗಡಿ 85 ಹೆಕ್ಟೇರ್, ಪುತ್ತೂರು 20 ಹೆಕ್ಟೇರ್, ಸುಳ್ಯ 112.75 ಹೆಕ್ಟೇರ್ ಭತ್ತದ ಹಡಿಲು ಭೂಮಿ ಇದೆ ಎಂದರು.

ಹಡಿಲು ಭೂಮಿಯನ್ನು ಗ್ರಾಮವಾರು ಗುರುತಿಸುವುದರೊಂದಿಗೆ ಗ್ರಾಮದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೂ ಮಾಲೀಕರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರೇರೆಪಿಸಬೇಕು ಎಂದರು.

ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಭೂಮಿಯನ್ನು ಹಡಿಲು ಬಿಟ್ಟಿರುವ ಬಗ್ಗೆ ಸರ್ವೇ ಕಾರ್ಯವನ್ನು ಒಂದು ವಾರದ ಒಳಗೆ ಕೈಗೊಂಡು ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಡಿಲು ಬಿಟ್ಟಿರುವ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ನೀರು ಇಂಗುವುದರೊಂದಿಗೆ ಅಂತರ್ಜಲ ವೃದ್ಧಿಯಾಗಲು ಸಹಾಯ ಆಗುವುದರ ಜೊತೆಗೆ ಜನರ ದೈನಂದಿನ ಬಳಕೆಗೆ ನೀರಿನ ಲಭ್ಯತೆಗೆ ಅನುಕೂಲವಾಗುತ್ತದೆ ಎಂದರು.
ಕೃಷಿ ಚಟುವಟಿಕೆಗಳಲ್ಲಿ ಯಾಂತ್ರೀಕರಣ ಅಳವಡಿಕೊಳ್ಳುವುದರ ಮೂಲಕ ಕಡಿಮೆ ವೆಚ್ಚದಲ್ಲಿ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯ. ಅಲ್ಲದೇ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುತ್ತದೆ ಎಂದರು.

ಎರಡು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಭೂಮಿಯನ್ನು ಹಡಿಲು ಬಿಟ್ಟರೆ ಅಂತಹ ಕೃಷಿ ಭೂಮಿಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು‌ ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಯಾರೊಬ್ಬರೂ ಆಸ್ಪದ ನೀಡದೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ತುಂಡು ಭೂಮಿಗಳಲ್ಲಿ ತರಕಾರಿ, ಹೂವು ಸೇರಿದಂತೆ ಮತ್ತಿತರ ಬೆಳೆಗಳನ್ನು ಬೆಳೆಯಲು ಸರಕಾರ ಸುಭೀಕ್ಷಾ ಯೋಜನೆಯನ್ನು ತೋಟಗಾರಿಕೆ ಇಲಾಖೆ ಮೂಲಕ ಜಾರಿಗೆ ತಂದಿದೆ. ಇದರ ಸದ್ಭಳಕೆ ಆಗಬೇಕು ಎಂದರು.

ರೈತರು ಉತ್ತಮ ಬೆಳೆಗಳನ್ನು ಬೆಳೆಯಲು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯವರು ಅಗತ್ಯ ಮಾಹಿತಿಗಳನ್ನು ರೈತರಿಗೆ ಒದಗಿಸುವುದರೊಂದಿಗೆ ಭೂ ಸಿದ್ಧತೆಯಿಂದ ಕಟಾವಿನವರೆಗೂ ತಾಂತ್ರಿಕ ನೆರವು ನೀಡಿ ಉತ್ತಮ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ಮಾಡಬೇಕು ಎಂದರು.

ಬೆಳೆಗಳನ್ನು ಬೆಳೆಯಲು ಉತ್ತಮಗುಣಮಟ್ಟದ ಭಿತ್ತನೆ ಬೀಜವನ್ನು ಇಲಾಖೆಗಳಿಂದ ನೀಡುವ ಕೆಲಸವಾಗಬೇಕು. ಯಂತ್ರೋಪಕರಣಗಳ ಖರೀದಿಗೆ ಸಹಾಯ ಧನವನ್ನು ನೀಡಲಾಗುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚು ಹೆಚ್ಚು ಕೃಷಿ ಮಾಡುವುದರಿಂದ ಆಹಾರ ಉತ್ಪಾದನೆಯಲ್ಲಿ ಮತ್ತಷ್ಟು ಸ್ವಾವಲಂಬಿ ಆಗುವುದರ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಬೇಕು ಎಂದರು.

ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸುವ ಬದಲು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ವೆಚ್ಚದಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಉತ್ತಮ ಪೌಷ್ಟಿಕ ಆಹಾರ ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಮತ್ತಿತ್ತರು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...