ಹೈನುಗಾರಿಕೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳ ಜಾರಿ -ಎಸ್.ಮುನಿಸ್ವಾಮಿ 

Source: sonews | By Staff Correspondent | Published on 11th September 2019, 11:13 PM | State News |

ಕೋಲಾರ : ದೇಶದಲ್ಲಿ ರೈತರು ಹೈನುಗಾರಿಕೆಯಿಂದ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದು ಈ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಸೂಕ್ತವಾಗಿ ಅನುಷ್ಠಾನ ಮಾಡಬೇಕು ಎಂದು ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.

ಇಂದು ತಾಲ್ಲೂಕಿನ ಟಮಕ ಬಳಿ ಇರುವ  ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸರ್ಕಾರದ ನೂತನ ಕಾರ್ಯಕ್ರಮವಾದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ರೈತ ದೇಶದ ಬೆನ್ನೆಲುಬಾಗಿದ್ದು ದೇಶಕ್ಕೆ ಅನ್ನ ನೀಡುತ್ತಾನೆ. ಇಂತಹ ರೈತರು ಅವಲಂಭಿಸಿರುವ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದನ್ನು ಸೂಕ್ತವಾಗಿ ರೈತರಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿಗಳ ಮೇಲಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಹೇಳಿದರು. 

ಈ ಹಿಂದೆ ಒಂದು ಜಾನುವಾರಿಗೆ ಕಾಯಿಲೆ ಬಂದರೆ ಅದು ಗ್ರಾಮದ ಎಲ್ಲಾ ಜಾನುವಾರುಗಳಿಗೆ ಹರಡಿ ಜಾನುವಾರುಗಳು ಮೃತಪಡುವ ಪರಿಸ್ಥಿತಿ ಇತ್ತು. ವೈದ್ಯಕೀಯ ಕ್ಷೇತ್ರ ಬೆಳೆದಂತೆ ಇದನ್ನು ಹಂತಹಂತವಾಗಿ ನಿಯಂತ್ರಿಸುವ ಕೆಲಸವನ್ನು ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಕಾಲುಬಾಯಿ ರೋಗವು ಜಾನುವಾರುಗಳನ್ನು ಕಾಡುತ್ತಿದೆ. ಇದನ್ನು ನಿಯಂತ್ರಿಸಲು ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಹಾಗಾಗಿ ಹೈನೋದ್ಯಮಿಗಳು ವದಂತಿಗಳಿಗೆ ಕಿವಿಗೊಡದೆ ಲಸಿಕೆಯನ್ನು ಹಾಕಿಸುವಂತಾಗಬೇಕು ಎಂದರು. 

ದೇಶದಲ್ಲಿ 13 ಕೋಟಿಗೂ ಅದಿಕ ಜಾನುವಾರುಗಳಿದ್ದು ಇವುಗಳಿಗೆ ಬರುವ ಕಾಯಿಲೆಗಳನ್ನು ಏಕ ಕಾಲದಲ್ಲಿ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಲಸಿಕಾ ಅಭಿಯಾನ ಶೇ.100ರಷ್ಟು ಸಾಧನೆಯಾಗಬೇಕು. ಈ ಕಾರ್ಯವನು ನಿರಂತರವಾಗಿ ನಡೆಯುವಂತಾಗಬೇಕು ಎಂದು ಹೇಳಿದರು. 

ಕೋಲಾರ ಜಿಲ್ಲೆಯಲ್ಲಿ ಬರವಿದ್ದರೂ ಹಾಲು ಉತ್ಪಾದನೆ ಮಾತ್ರ ಹೆಚ್ಚಾಗುತ್ತಾ ಸಾಗಿದೆ. ಜಾನುವಾರುಗಳಿಗೆ ರೋಗಗಳು ತಗಲುವುದರಿಂದ ಹಾಲಿನ ಉತ್ಪಾದನೆಯು ಕಡಿಮೆಯಾಗಲಿದೆ. ಇಂತಹ ರೋಗಗಳಿಗೆ ಜಾನುವಾರುಗಳು ತುತ್ತಾಗದಂತೆ ಜಾಗೃತಿ ವಹಿಸಿ ರೋಗಗಳನ್ನು ನಿಯಂತ್ರಿಸಿದರೆ ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ಕಾಣಬಹುದು ಎಂದರು. 

ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಮಾತನಾಡಿ, ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ವರ್ಷದಲ್ಲಿ 2 ಭಾರಿ ಲಸಿಕಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನವನ್ನು ರಾಷ್ಟ್ರದಾದ್ಯಂತ ಏಕ ಕಾಲದಲ್ಲಿ ನಡೆಸಬೇಕು ಎಂಬುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅದರಂತೆ ದೇಶದ ಸುಮಾರು 700 ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಕ್ರಾಸ್, ಚಿಂತಾಮಣಿ ಹಾಗೂ ಕೋಲಾರ ತಾಲ್ಲೂಕಿನ ರೋಜಾರನಹಳ್ಳಿಯಲ್ಲಿ ಜಾನುವಾರು, ಕುರಿ, ಮೇಕೆ ಹಾಗೂ ಹಂದಿಗಳ ವ್ಯಾಪಾರ ನಡೆಯುತ್ತಿರುತ್ತದೆ. ಈ ಭಾಗದಲ್ಲಿ ರೋಗ ನಿಯಂತ್ರಣವಾಗಿದ್ದರೂ ಹೊರ ರಾಜ್ಯಗಳಿಂದ ಬರುವ ಪ್ರಾಣಿಗಳಲ್ಲಿ ರೋಗ ಇದ್ದಾಗ ಅದು ಇಲ್ಲಿನ ಜಾನುವಾರುಗಳಿಗೆ ಹರಡು ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಧುಸೂಧನ್ ರೆಡ್ಡಿ, ಸಹಾಯಕ ನಿರ್ದೇಶಕರಾದ ಡಾ.ಆಂಜನೇಯರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕರಾದ ಟಿ.ಬಿ.ಬಸವರಾಜು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವಿಷಯ ತಜ್ಞರಾದ ಡಾ.ಗೌತಮ್, ಡಾ.ನಟರಾಜ್  ಸೇರಿದಂತೆ ಮತ್ತಿತರರುಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...