ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಂಡರೆ ದಲಿತರು ಆರೆಸ್ಸೆಸ್ಸನ್ನು ತೊರೆಯುತ್ತಾರೆ-ಮಾಜಿ ಕರಸೇವಕ ಭಂವರ ಮೇಘವಂಶಿ

Source: sonews | By Staff Correspondent | Published on 7th September 2020, 5:25 PM | National News | Special Report |

1980ರ ದಶಕದಲ್ಲಿ ತನ್ನ ಹದಿಹರೆಯದಲ್ಲಿಯೇ ಆರೆಸ್ಸೆಸ್‌ಗೆ ಸೇರ್ಪಡೆಗೊಂಡು ಅದರ ಹಿಂದು ರಾಷ್ಟ್ರ ಸಿದ್ಧಾಂತದ ಪ್ರಬಲ ಬೆಂಬಲಿಗನಾಗಿ ಬೆಳೆದಿದ್ದ ಭಂವರ ಮೇಘವಂಶಿ ಅಂತಿಮವಾಗಿ ಸಂಘಟನೆಯಲ್ಲಿನ ಜಾತಿ ತಾರತಮ್ಯದಿಂದ ಬೇಸತ್ತು ಅದರಿಂದ ಹೊರಗೆ ಬಂದಿದ್ದಾರೆ. ಆರೆಸ್ಸೆಸ್‌ನಲ್ಲಿಯ ತನ್ನ ಅನುಭವಗಳ ಕುರಿತು ಅವರು ಹಿಂದಿಯಲ್ಲಿ ಬರೆದಿರುವ ‘ಮೈ ಏಕ್ ಕರಸೇವಕ್ ಥಾ ’ ಎಂಬ ಪುಸ್ತಕ 2019ರಲ್ಲಿ ಪ್ರಕಟಗೊಂಡಿದ್ದು,ಈ ವರ್ಷ ಇಂಗ್ಲಿಷ್ ಭಾಷೆಗೆ ಅನುವಾದಗೊಂಡು ‘ಐ ಕುಡ್ ನಾಟ್ ಬಿ ಹಿಂದು:ದಿ ಸ್ಟೋರಿ ಆಫ್ ಎ ದಲಿತ್ ಇನ್ ದಿ ಆರೆಸ್ಸೆಸ್ ’ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿದೆ. ಈಗ ಎಡರಂಗದೊಂದಿಗೆ ಗುರುತಿಸಿಕೊಂಡಿರುವ ಅವರು ಪಿಯುಸಿಎಲ್‌ನ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಮಾನವ ಹಕ್ಕುಗಳ ಗುಂಪುಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

Caravanmagazine.in ಗಾಗಿ ಚಿಕಾಗೋ ವಿವಿಯ ಡಾಕ್ಟರೇಟ್ ವಿದ್ಯಾರ್ಥಿ ಅಭಿಮನ್ಯು ಚಂದ್ರ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮೇಘವಂಶಿ ತನ್ನ ತಂದೆ ಕಾಂಗ್ರೆಸ್ ಬೆಂಬಲಿಗರಾಗಿದ್ದರೂ ತಾನು ಆರೆಸ್ಸೆಸ್‌ನೆಡೆಗೆ ಸೆಳೆಯಲ್ಪಟ್ಟಿದ್ದು ಹೇಗೆ ಮತ್ತು ದಲಿತನೋರ್ವ ಆರೆಸ್ಸೆಸ್‌ನ್ನು ತೊರೆಯಲು ಕಾರಣವೇನು ಎನ್ನುವುದರ ಕುರಿತು ಮಾತನಾಡಿದ್ದಾರೆ.

ರಾಜಸ್ಥಾನದ ಕಬೀರ ಪಂಥಿ ಕುಟುಂಬದಲ್ಲಿ ಜನಿಸಿದ್ದ ಮೇಘವಂಶಿ ಹೇಳುವಂತೆ ಅಂದು ರಾಜ್ಯದಲ್ಲಿ ಊಳಿಗಮಾನ್ಯ ಪದ್ಧತಿಯ ಪ್ರಾಬಲ್ಯವಿತ್ತು ಮತ್ತು ದಲಿತರು ಉಳ್ಳವರ ಮನೆಗಳಲ್ಲಿ ಜೀತದಾಳುಗಳಾಗಿದ್ದರು. ಸಾವಿರಾರು ವರ್ಷಗಳಿಂದಲೂ ದಲಿತ ಸಮುದಾಯವು ದಮನಕ್ಕೊಳಪಟ್ಟಿತ್ತು. ಮೇಘವಂಶಿಯವರ ಅಜ್ಜ ಇವೆಲ್ಲವುಗಳನ್ನು ಕಂಡಿದ್ದರು.

 ಮೇಘವಂಶಿಯವರ ತಂದೆಯ ಮೇಲೆ ಕಾಂಗ್ರೆಸ್ ಪಕ್ಷ ಗಾಢವಾದ ಪ್ರಭಾವ ಬೀರಿತ್ತು. ಅದು ದಲಿತ ಸಮುದಾಯದ ಮೇಲೆ ರಾಜಕೀಯವಾಗಿ ಪ್ರಭಾವವನ್ನು ಹೊಂದಿತ್ತು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಪರಿಶಿಷ್ಟ ಜಾತಿಗಳ ಜನರ ಉದ್ಧಾರಕ್ಕೆ ಶ್ರಮಿಸಿದ್ದರು. ಕಾಂಗ್ರೆಸ್ ‌ನಲ್ಲಿ ಎಷ್ಟೊಂದು ಬದಲಾವಣೆಗಳಾಗಿದ್ದರೂ ಇಂದಿಗೂ ಮೇಘವಂಶಿಯವರ ತಂದೆಯ ಪಾಲಿಗೆ ಅದು ಗಾಂಧೀಜಿಯವರ ಕಾಂಗ್ರೆಸ್ಸೇ ಆಗಿದೆ.

“ಆಗಿನ ಕಾಂಗ್ರೆಸ್ ತನ್ನ ಸಾಮಾಜಿಕ ಸುಧಾರಣಾ ಕಾರ್ಯಗಳಿಂದ ನಿಜಕ್ಕೂ ನಮ್ಮವರ (ದಲಿತರು) ಮೇಲೆ ಪ್ರಭಾವವನ್ನು ಬೀರಿತ್ತು. ನಾನು ದಲಿತ ಕಾಲನಿಯಲ್ಲಿ ಬಿಜೆಪಿ ಧ್ವಜವನ್ನು ನೋಡಿದ್ದು 1995ರ ನಂತರವೇ. ಕಾಂಗ್ರೆಸ್‌ನ ಕೈ ಚಿಹ್ನೆ ಅಂದು ಚುನಾವಣೆಯ ಅರ್ಥವಾಗಿತ್ತು. ಇಂದಿರಾ ಗಾಂಧಿಯವರು ನಿಧನರಾದಾಗ ನಮ್ಮ ಇಡೀ ಗ್ರಾಮವೇ ತನ್ನ ಬಂಧುವನ್ನು ಕಳೆದುಕೊಂಡಂತೆ ಶೋಕಿಸಿತ್ತು” ಎಂದು ಮೇಘವಂಶಿ ನೆನಪಿಸಿಕೊಂಡಿದ್ದಾರೆ.

 “ನನ್ನ ಬಾಲ್ಯದಲ್ಲಿ ಓದಲು ಪುಸ್ತಕಗಳು ದೊರೆಯುತ್ತಿರಲಿಲ್ಲ. ಗ್ರಾಮಕ್ಕೆ ಪತ್ರಿಕೆಗಳು ಬರುತ್ತಿರಲಿಲ್ಲ. ಮನೆಯಲ್ಲೊಂದು ರೇಡಿಯೊ ಇದ್ದು, ಸುದ್ದಿಗಳನ್ನು ಕೇಳಲು ನನ್ನ ತಂದೆ ಅದನ್ನು ಬಳಸುತ್ತಿದ್ದರು. ಗ್ರಾಮದ ಒಂದೇ ಮನೆಯಲ್ಲಿ ಟಿವಿ ಇತ್ತು. ಮೇಲ್ಜಾತಿಯ ಠಾಕೂರ್ ಆಗಿದ್ದ ಆತನೂ ಕಾಂಗ್ರೆಸಿಗನಾಗಿದ್ದ. 1988ರ ಸುಮಾರಿಗೆ ಟಿವಿಯಲ್ಲಿ ಪ್ರತಿ ರವಿವಾರ ಬೆಳಿಗ್ಗೆ ರಾಮಾಯಣ ಧಾರಾವಾಹಿ ಪ್ರಸಾರಗೊಳ್ಳುತ್ತಿತ್ತು ಮತ್ತು ನಾವೆಲ್ಲ ಆತನ ಮನೆಗೆ ಹೋಗಿ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದೆವು. ಅದಕ್ಕೂ ಮುನ್ನ ನಾನೆಂದೂ ರಾಮಾಯಣವನ್ನು ಓದಿರಲಿಲ್ಲ ಅಥವಾ ನೋಡಿರಲಿಲ್ಲ. ನಾವೆಲ್ಲ ಸಾಂಪ್ರದಾಯಿಕವಾಗಿ ಸಂತ ಕಬೀರನ ಅನುಯಾಯಿಗಳಾಗಿದ್ದೆವು. ನಮ್ಮ ಹಿನ್ನೆಲೆಯಲ್ಲಿ ನಿಜವಾದ ರಾಮಭಕ್ತಿ ಇರಲಿಲ್ಲ. ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿಯು ಜನರನ್ನು ರಾಮಜನ್ಮಭೂಮಿ ಚಳವಳಿಗಾಗಿ ಸಿದ್ಧಗೊಳಿಸಿತ್ತು. ಮೊದಲ ಬಾರಿಗೆ ಪ್ರತಿಯೊಬ್ಬರಿಗೂ ರಾಮನ ಪರಿಚಯವಾಗಿತ್ತು. ವಿಶೇಷವಾಗಿ ದಲಿತರು, ಆದಿವಾಸಿಗಳು ಮತ್ತು ರೈತರ ಮೇಲೆ ಅದು ಭಾರೀ ಪ್ರಭಾವವನ್ನು ಬೀರಿತ್ತು ಮತ್ತು ಅವರೊಳಗೆ ರಾಮನನ್ನು ಪ್ರತಿಷ್ಠಾಪಿಸಿತ್ತು. ಕೋವಿಡ್ ಲಾಕ್‌ಡೌನ್‌ನ ನಡುವೆಯೇ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿಯ ಮರುಪ್ರಸಾರ 1995ರ ನಂತರದ ಪೀಳಿಗೆಗೆ ರಾಮನನ್ನು ಪರಿಚಯಿಸುವ ಪ್ರಯತ್ನವಾಗಿತ್ತು.ನಾವು ಅಂದು ಈ ಧಾರಾವಾಹಿಯನ್ನು ಎಷ್ಟೊಂದು ಹುಚ್ಚಿನಿಂದ ವೀಕ್ಷಿಸುತ್ತಿದ್ದೆವೆಯೋ ಅಷ್ಟೇ ಹುಚ್ಚಿನಿಂದ ಇಂದಿನ ಯುವಜನರು ಅದನ್ನು ನೋಡುತ್ತಿದ್ದಾರೆ. ಸರಕಾರದ ಪಾಲಿಗೆ ಈ ಧಾರಾವಾಹಿಯು ಆ.5ರ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ಒಂದು ಮಾರ್ಗವಾಗಿತ್ತು. ಈ ಧಾರಾವಾಹಿಯ ಮೂಲಕ ಜನರಿಗೆ ರಾಮನ ಮತ್ತನ್ನು ಏರಿಸಲಾಗಿತ್ತು” ಎಂದು ಮೇಘವಂಶಿ ಹೇಳಿದ್ದಾರೆ.

    ತನ್ನ ಎಳವೆಯಲ್ಲಿ ತನ್ನ ಮೇಲೆ ತಂದೆಯ ಕಾಂಗ್ರೆಸ್ ಪ್ರಭಾವವಿತ್ತಾದರೂ ಅದು ತಾನು ಆರೆಸ್ಸೆಸ್‌ಗೆ ಸೇರುವವರೆಗೆ ಮಾತ್ರ ಸೀಮಿತವಾಗಿತ್ತು. ತಾನು ಕಲಿಯುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆಯ ಭೂಗೋಳದ ಶಿಕ್ಷಕರು ಪಕ್ಕಾ ಆರೆಸ್ಸೆಸ್ಸಿಗರಾಗಿದ್ದರು ಮತ್ತು ಅವರ ಪ್ರಭಾವದಿಂದಾಗಿ ತಾನು ಆರೆಸ್ಸೆಸ್ ಶಾಖೆಗೆ ಸೇರ್ಪಡೆಗೊಂಡಿದ್ದೆ. ಆಗ ಅಲ್ಲಿ ಯಾವುದೇ ಸಿದ್ಧಾಂತವನ್ನು ಬೋಧಿಸಲಾಗುತ್ತಿರಲಿಲ್ಲ ಮತ್ತು ಆಟಗಳೇ ಮುಖ್ಯವಾಗಿದ್ದವು. ಸಿದ್ಧಾಂತವು ನಿಧಾನವಾಗಿ ತಲೆಹಾಕಿದ್ದು, ಅಹಿಂಸೆಯನ್ನು ಅಪ್ಪಿಕೊಂಡಿದ್ದ ಗಾಂಧಿ ಮತ್ತು ಸಾಮ್ರಾಟ್ ಅಶೋಕ ಹೇಡಿಗಳಾಗಿದ್ದರು ಎಂದು ಬೋಧಿಸಲಾಗುತ್ತಿತ್ತು. ಹಿಂದು ರಾಷ್ಟ್ರದ ಸಿದ್ಧಾಂತದ ಮೂಲಕ ತಮಗೆಲ್ಲ ಬ್ರೇನ್ ವಾಷ್ ಮಾಡಲಾಗಿತ್ತು. ವಿಭಜನೆ,ಕಾಶ್ಮೀರ ಮತ್ತು ಮುಸ್ಲಿಂ ತುಷ್ಟೀಕರಣದ ವಿಷಯಗಳು ಬಂದಾಗಲೆಲ್ಲ ತಂದೆ ದೇಶದ್ರೋಹಿಗಳೊಂದಿಗೆ ಇದ್ದಾರೆ ಎಂದು ತನಗನ್ನಿಸುತ್ತಿತ್ತು. ಕಾಂಗ್ರೆಸ್ ತನ್ನ ತಂದೆ ಮತ್ತು ಪೂರ್ವಜರ ತಲೆಗಳನ್ನು ಹಾಳು ಮಾಡಿತ್ತು ಮತ್ತು ಅವರು ಹಿಂದುಗಳ ಬಗ್ಗೆ,ರಾಷ್ಟ್ರದ ಬಗ್ಗೆ ಯೋಚಿಸಲು ಅಸಮರ್ಥರಾಗಿದ್ದರು ಎಂದು ತಾನು ಭಾವಿಸಿದ್ದೆ ಎಂದು ಮೇಘವಂಶಿ ನೆನಪಿಸಿಕೊಂಡಿದ್ದಾರೆ.

ಆರೆಸ್ಸೆಸ್ ಮಕ್ಕಳನ್ನು ತನ್ನತ್ತ ಸೆಳೆದುಕೊಳ್ಳ್ಳುವ ವ್ಯವಸ್ಥಿತ ಮಾರ್ಗವನ್ನು ಹೊಂದಿದೆ. ಇಂದಿಗೂ ಹೆಚ್ಚಿನ ಶಿಕ್ಷಕರು ಆರೆಸ್ಸೆಸ್‌ನತ್ತ ಒಲವು ಹೊಂದಿದ್ದಾರೆ ಮತ್ತು ಮಕ್ಕಳ ಬ್ರೇನ್ ವಾಷ್ ಮಾಡಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ಪೂರ್ಣಕಾಲಿಕ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ನಾನು ಆರೆಸ್ಸೆಸ್ ಪ್ರಚಾರಕನಾಗಬೇಕು ಎಂದು ಬಯಸಿದ್ದೆ,ಆದರೆ ನನ್ನ ಜಾತಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ನಮ್ಮ ಮನೆಯಲ್ಲಿ ಮಾಡಿದ್ದ ಅಡುಗೆಯನ್ನು ತಿನ್ನಲು ಆರೆಸ್ಸೆಸ್ ಸದಸ್ಯರು ನಿರಾಕರಿಸಿದ್ದರು ಮತ್ತು ಅದನ್ನು ಬೀದಿಗೆ ಎಸೆದಿದ್ದರು. ಇಂತಹುದೇ  ಇತರ ಘಟನೆಗಳು ಅರೆಸ್ಸೆಸ್‌ನ್ನು ತೊರೆಯಲು ನನ್ನನ್ನು ಪ್ರಚೋದಿಸಿದ್ದವು ’ ಎಂದು ಮೇಘವಂಶಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಾಗ ತನ್ನ ಸೋದರನೊಂದಿಗೆ ಕರಸೇವಕನಾಗಿ ಪಾಲ್ಗೊಂಡಿದ್ದ ಮೇಘವಂಶಿ ಬಳಿಕ ಆರೆಸ್ಸೆಸ್ ಬಗ್ಗೆ ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದರು. ಹಿಂದು ರಾಷ್ಟ್ರದ ಮಂತ್ರವನ್ನು ಪಠಿಸುತ್ತಿದ್ದ ಆರೆಸ್ಸೆಸ್‌ನಲ್ಲಿ ಮೇಲ್ಜಾತಿಗಳ ಪಾರಮ್ಯವಿತ್ತು. ತಾನು ಮಾತ್ರವಲ್ಲ,ಎಷ್ಟೋ ದಲಿತರು ಅದರಿಂದ ಹೊರಬಂದಿದ್ದಾರೆ. ಆದರೆ ಆ ಬಗ್ಗೆ ಅವರು ಮಾತನಾಡದೆ ಮೌನವಾಗಿದ್ದಾರೆ ಮತ್ತು ತಾನು ಮಾತನಾಡುತ್ತಿದ್ದೇನೆ. ಇದು ತನ್ನ ಮತ್ತು ಅವರ ನಡುವಿನ ವ್ಯತ್ಯಾಸ ಎಂದಿದ್ದಾರೆ ಮೇಘವಂಶಿ.

  ಆರೆಸ್ಸೆಸ್‌ನಲ್ಲಿ ಅಂಬೇಡ್ಕರ್ ಅವರು ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದಾರೆ, ಆದರೆ ಅವರ ಆದರ್ಶಗಳು ಅಲ್ಲಿ ಕೃತಿಗಿಳಿಯುತ್ತಿಲ್ಲ. ದಲಿತರನ್ನು ನಿಂದಿಸಿ,ಮೀಸಲಾತಿಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಪೋಸ್ಟ್‌ಗಳು ಇದನ್ನು ಸ್ಪಷ್ಟಪಡಿಸುತ್ತಿವೆ. ವಾಸ್ತವವೇ ಬೇರೆ ಎನ್ನುವುದು ದಲಿತ ಕಾರ್ಯಕರ್ತರಿಗೆ ಅರ್ಥವಾಗುತ್ತಿದೆ. ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಆರೆಸ್ಸೆಸ್ ಈವರೆಗೆ ಒಂದೇ ಒಂದು ಸಮಾವೇಶವನ್ನು ನಡೆಸಿಲ್ಲ ಎಂದು ಬೆಟ್ಟು ಮಾಡಿರುವ ಮೇಘವಂಶಿ,ಇವೆಲ್ಲ ಈಗ ದಲಿತ ಕಾರ್ಯಕರ್ತರ ಕಣ್ಣುಗಳನ್ನು ತೆರೆಸುತ್ತಿವೆ. ತಮಗೆ ಆರೆಸ್ಸೆಸ್‌ನಲ್ಲಿ ಯಾವುದೇ ಬೆಲೆಯಿಲ್ಲ ಎನ್ನುವುದು ಅವರಿಗೆ ನಿಧಾನವಾಗಿ ಅರ್ಥವಾಗುತ್ತಿದೆ. ದಂಗೆಗಳನ್ನು ನಡೆಸಲು,ಇತರರಿಗೆ ಬೆದರಿಕೆಗಳನ್ನೊಡ್ಡಲು ಮಾತ್ರ ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಾಗುತ್ತಿದೆ. ಈ ಆಷಾಡಭೂತಿತನ ಅರಿವಾದಾಗ ದಲಿತರು ಆರೆಸ್ಸೆಸ್‌ನಿಂದ ಹೊಟಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕೃಪೆ: Caravanmagazine.in

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...