"ಪ್ರೀತಿ"ಯ ಕವಯತ್ರಿ ಕನ್ನಿಕಾ ಹೆಗಡೆ ಇನ್ನು ಇತಿಹಾಸ

Source: sonews | By Staff Correspondent | Published on 8th February 2018, 4:07 PM | Coastal News | State News | Public Voice | Don't Miss |

"ಪ್ರೀತಿ"ಯ ಕುರಿತು ಸಹಸ್ರಾರು ಕವಿತೆ ಬರೆದು ನಾಡಿನ ಜನತೆಯ ಹೃದಯ ತಟ್ಟಿದ್ದ ಕನ್ನಡದ ಹೆಸರಾಂತ ಕವಯತ್ರಿ ಶ್ರೀಮತಿ ಕನ್ನಿಕಾ ಹೆಗಡೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲಿ, ಇಂದು (08-02-2018) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿಧನಹೊಂದುವುದರೊಂದಿಗೆ, ಕನ್ನಡ ಕಾವ್ಯ ಕ್ಷ್ರೆತ್ರ ಓರ್ವ ಪ್ರತಿಭಾನ್ವಿತೆಯನ್ನು ಕಳೆದುಕೊಂಡಂತಾಗಿದೆ.

1951ರ ಜನವರಿ 18ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶ್ರೀ ಗಣೇಶ ರಾಮ ಹೆಗಡೆ ಮತ್ತು ಶ್ರೀಮತಿ ಸಾವಿತ್ರಿ ಗಣೇಶ ಹೆಗಡೆ ದಂಪತಿಗಳಿಗೆ ಪ್ರಥಮ ಪುತ್ರಿಯಾಗಿ ಜನಿಸಿದ ಕನ್ನಿಕಾ ಹೆಗಡೆ, ಕನ್ನಡ ಕಾವ್ಯ ಕ್ಷೇತ್ರ ಕಂಡ ಓರ್ವ ಅಪೂರ್ವ ಕವಯತ್ರಿ. "ಪ್ರೀತಿ"ಯ ಕವಯತ್ರಿ ಎಂದೇ ಹೆಸರಾಗಿದ್ದ ಅವರದ್ದು ಮಧುರ ಮನಸ್ಸಿನಿಂದ ಕೂಡಿದ, ನಿಷ್ಕಲ್ಮಷ ಹೃದಯವಾಗಿತ್ತು. ಕನ್ನಿಕಾ ಹೆಗಡೆಯವರನ್ನು ಉತ್ತರ ಕನ್ನಡದ ಮೂವರು ಹೆಗ್ಗಡತಿಯರಲ್ಲಿ ಓರ್ವರು ಎಂದು ಪಾ. ವೆಂ. ಆಚಾರ್ಯ ಹಿಂದೊಮ್ಮೆ ಉಲ್ಲೇಖಿಸಿದ್ದು ಗಮನಾರ್ಹ.

ಹೊನ್ನಾವರ ಶಿರಸಿಗಳಲ್ಲಿ ತಮ್ಮ ಶಾಲಾ ಶಿಕ್ಷಣ ಪೂರೈಸಿದ ಕನ್ನಿಕಾ ಹೆಗಡೆ, ಬಿ. ಎ. ಪದವಿಯ ಅಧ್ಯಯನವನ್ನು ಶಿರಸಿಯ ಕಾಲೇಜ್ನಲ್ಲಿ 1970-71ರಲ್ಲಿ ಪೂರ್ಣಗೊಳಿಸಿದ್ದರು. ಪದವಿಯ ನಂತರ ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಕೆಲ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಕನ್ನಿಕಾ ಹೆಗಡೆ, ಧೀರ್ಘ ಕಾಲ ಸೇವೆ ಸಲ್ಲಿಸಿದ್ದು ಭಾರತೀಯ ಅಂಚೆ ಇಲಾಖೆಯಲ್ಲಿ. ಹೊನ್ನಾವರದ ಜನತೆ ಅಂಚೆ ವ್ಯವಹಾರಕ್ಕೆ ಅವರಿದ್ದ ಅಂಚೆಕಚೇರಿಗೇ ಹುಡುಕಿಕೊಂಡು ಬರುತ್ತಿದ್ದುದು ಅವರ ಸೇವಾ ಮನೋಭಾವನೆಗೆ ನಿದರ್ಶನವಾಗಿ ನಿಲ್ಲುತ್ತದೆ. ಅವರ ಸೇವಾ ಶ್ರೇಷ್ಟತೆ ಗಮನಿಸಿದ ಇಲಾಖೆ ಅವರನ್ನು 80ರ ದಶಕದಲ್ಲೇ ಸನ್ಮಾನಿಸಿತ್ತು.

ಪದವಿ ಅಧ್ಯಯನದ ಹಂತದಲ್ಲೇ William Shakespeare ಕೃತಿಗಳಿಂದ ಪ್ರಭಾವಿತರಾಗಿ ಆಂಗ್ಲ ಭಾಷೆಯಲ್ಲಿ ತಮ್ಮ ಕಾವ್ಯ ಕೃಷಿ ಆರಂಭಿಸಿದವರು. 1970ರ ದಶಕದಿಂದ ಕನ್ನಡದಲ್ಲ್ಲಿ ಬರೆಯಲು ಆರಂಭಿಸಿದ ಕನ್ನಿಕಾ ಹೆಗಡೆ, 1976ರಲ್ಲಿ ಹೊರತಂದದ್ದು "ಕನ್ನಿಕಾ ಹೆಗಡೆ ಕವಿತೆಗಳು" ಎಂಬ ಅವರ ಪ್ರಥಮ ಮತ್ತು ಏಕೈಕ ಕೃತಿ. ಭಾವನೆಗಳ ತೀವ್ರತೆಯನ್ನು ಸೂಕ್ಷ್ಮವಾಗಿ ಬಿಂಬಿಸುವ ಅವರ ಸಾಮರ್ಥ್ಯ ಆಗಲೇ ಶಿವರಾಮ ಕಾರಂತ, ಹಾ. ಮಾ. ನಾಯಕ, ವೀ. ಸೀತಾರಾಮಯ್ಯನವರಂಥ ಶ್ರೇಷ್ಠರಿಂದ ಹೊಗಳಿಕೆಗೆ ಪಾತ್ರವಾಗಿತ್ತಲ್ಲದೆ, ಉತ್ತರ ಕನ್ನಡದ ಪ್ರಾತಿನಿಧಿಕ ಕವಯತ್ರಿ ಎಂದು ಗುರುತಿಸಲ್ಪಟ್ಟರು. ಅನುಭವದ ತೀವ್ರತೆ ಮತ್ತು ಅದನ್ನು ವಿಮರ್ಶಿಸಿ ತನ್ನತನವನ್ನು ಸಾರುವ ತೀಕ್ಷ್ಣತೆಯಲ್ಲಿ ಕನ್ನಿಕಾ ಹೆಗಡೆಯವರ ಕವಿತೆಗಳನ್ನು ಅಮೆರಿಕನ್ ಕವಯತ್ರಿ ಸಿಲ್ವಿಯಾ ಪ್ಲಾತ್ ಕವಿತೆಗಳಿಗೆ ಹೋಲಿಸಬಹುದೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಿದೆ.

ಕನ್ನಡ ಚುಟುಕು / ಹನಿಗವನ ಕ್ಷೇತ್ರದಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡ ಕನ್ನಿಕಾ ಹೆಗಡೆ, "ಪ್ರೀತಿ" ಎಂಬ ಶಬ್ದಕ್ಕೆ ತಮ್ಮ ಕಾವ್ಯದ ಮೂಲಕ ಅಪಾರ ಅರ್ಥವನ್ನು, ಪರಿಕಲ್ಪನೆಯನ್ನು ಕನ್ನಡಿಗರಿಗೆ ನೀಡಿದವರು. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕನ್ನಡದ ಎಲ್ಲ ಮಾಸಪತ್ರಿಕೆ, ದಿನ ಮತ್ತು ವಾರ ಪತ್ರಿಕೆಗಳಲ್ಲಿ ತಮ್ಮ ಕಾವ್ಯ ಮತ್ತು ಬರೆಹವನ್ನು ಪ್ರಕಟಿಸಿದ್ದ ಕನ್ನಿಕಾ ಹೆಗಡೆ, ಬರೆದದ್ದು ಸಹಸ್ರಾರು ಕವಿತೆಗಳು. ಕೆಲವು ಸಣ್ಣ ಕತೆ, ವೈಚಾರಿಕ ಬರೆಹ, ಮುಂತಾದವನ್ನು ಬರೆದಿದ್ದಾರಾದರೂ, ಅವರಿಗೆ ಒಲಿದದ್ದು ಕಾವ್ಯ ಕೃಷಿ ಮಾತ್ರ. ಆಕಾಶವಾಣಿ, ದೂರದರ್ಶನಮಾತ್ರವಲ್ಲದೆ, ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಕನ್ನಿಕಾ ಹೆಗಡೆ, ಹಲವು ದಶಕಗಳ ಕಾಲ ಶೃದ್ಧೆಯಿಂದ ಕಾವ್ಯಕೃಷಿ ನಡೆಸಿದವರು. ವಿಮರ್ಶೆ, ಪ್ರಶಸ್ತಿ, ಹೊಗಳಿಕೆಗಳಿಗೆ ಎಂದೂ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆರೋಗ್ಯ ಸಮಸ್ಯೆ ಬಹುವಾಗಿ ಕಾಡಿದ ದಿನಗಳಲ್ಲೂ ಹಠ ಹಿಡಿದು ಬರೆಯುತ್ತಿದ್ದುದು ಅವರ ಜಾಯಮಾನವಾಗಿತ್ತು.

ಪ್ರೀತಿಗೆ ಹೊಸ ಅರ್ಥ ಕಲ್ಪಿಸಿದ, ಕನ್ನಡದ ಸಮಸ್ತರ ಹೃದಯ ತಟ್ಟುವಂಥ ಸಹಸ್ರಾರು ಹನಿಗವನ ಬರೆದ ಕನ್ನಿಕಾ ಹೆಗಡೆ ಬದುಕಿನುದ್ದಕ್ಕೂ ತನಗೆ ಶತ್ರುವೇ ಇಲ್ಲ ಎಂದು ಸರಳ, ಉದಾತ್ತ ಜೀವನ ಸಾಗಿಸಿದವರು. ಯಾವುದೇ ಜಾತಿ, ಮತ, ಪಂಥಗಳ ಕಟ್ಟುಪಾಡಿಗೆ ಒಳಗಾಗದೆ ಸಮಾಜದ ಎಲ್ಲ ವರ್ಗದವರನ್ನೂ ಸಮಾನ ದೃಷ್ಟಿಯಿಂದ, ಪ್ರೀತಿಯಿಂದ ನೋಡಿ, ಬಾಳಿ ಬದುಕಿದ ಕನ್ನಿಕಾ ಹೆಗಡೆಯವರ ಜೀವನ ಆದರ್ಶಮಯವಾದದ್ದು.

 

ಶ್ರೀಮತಿ ಕನ್ನಿಕಾ ಹೆಗಡೆಯವರು ಪತಿ, ನಿವೃತ್ತ ಶಿಕ್ಷಕ ಪ್ರಭಾಕರ ಹೆಗಡೆ, ಹೈಗುಂದ, ಪುತ್ರ, ನಿಮ್ಹಾನ್ಸ್ನ ಸಂಶೋಧಕ ರವಿ ಹೆಗಡೆ, ಪುತ್ರಿ, ಬರೆಹಗಾರ್ತಿ ಸಹನಾ ಆಚಾರ್ಯ, ಸಹೋದರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶೋಭಾ ಕುಲಕರ್ಣಿ ಮತ್ತು ಬಂಧು ಬಳಗವಲ್ಲದೆ ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.

ಕನ್ನಿಕಾ ಹೆಗಡೆಯವರ ಒಂದು ಅಪ್ರಕಟಿತ ಹನಿಗವನ:

ಕನಸು

ರಾತ್ರಿಯಿಡೀ ನನ್ನ

ನಿದ್ದೆಗೆಡಿಸಿದ ಹುಡುಗ

ನಸು-ನಸುಕಲ್ಲಿ ನಾಪತ್ತೆ

Read These Next

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ರಸ್ತೆ ಸುರಕ್ಷತಾ ನಿಯಮಗಳ ಸಂದೇಶ ಸಾರಿದ ವಾಕ್‍ಥಾನ್

ಬಳ್ಳಾರಿ : 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ವಾಕ್‍ಥಾನ್ ನಡೆಯಿತು.

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ರಸ್ತೆ ಸುರಕ್ಷತಾ ನಿಯಮಗಳ ಸಂದೇಶ ಸಾರಿದ ವಾಕ್‍ಥಾನ್

ಬಳ್ಳಾರಿ : 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ವಾಕ್‍ಥಾನ್ ನಡೆಯಿತು.