ಪೌರತ್ವ ನೊಂದಣಿ ಹಾಗು ಎನ್ ಪಿ ಆರ್  ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಹೇಳೀದ ಸುಳ್ಳುಗಳ ಕುರಿತು...

Source: sonews | By Staff Correspondent | Published on 17th March 2020, 10:45 PM | Special Report | Don't Miss |

NPR-NRC- CAA ಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ಹೇಳುವ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ . ನಿನ್ನೆ ರಾಜ್ಯಸಭೆಯಲ್ಲಿ  ಗೃಹಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಅದಕ್ಕೆ ತಾಜಾ ಉದಾಹರಣೆ . ಆದ್ದರಿಂದ ದೇಶದ ಜನತೆ ಗೃಹಮಂತ್ರಿಯವರ ಹೇಳಿಕೆಯಲ್ಲಿರುವ ಈ ಕೆಳಗಿನ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು  ಅತ್ಯಗತ್ಯವಾಗಿದೆ. 
  
ಸುಳ್ಳು-1- NPR ಮಾಹಿತಿ ಸಂಗ್ರಹಣೆ ಹಂತದಲ್ಲಿ ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ. 

ವಾಸ್ತವ : NPR ಮಾಡುತ್ತಿರುವುದೇ ದೇಶದ ಎಲ್ಲಾ ಜನರ ಪೌರತ್ವವನ್ನು ಪರೀಕ್ಷಿಸಲು . ಅದ್ಕಕೆಂದೇ ಪ್ರತಿಯೊಬ್ಬ  ಪೌರನ ತಂದೆ ಮತ್ತು ತಾಯಿಯರ ಹುಟ್ಟಿದ ದಿನ ಹಾಗು ಸ್ಥಳದ ಮಾಹಿತಿಯನ್ನು ನಿರ್ದಿಷ್ಟವಾಗಿ ಕೇಳಲಾಗುತ್ತದೆ. ಅದಕ್ಕೆ ಕೊಟ್ಟ ಉತ್ತರವನ್ನು ಆಧರಿಸಿಯೇ ದೇಶದ ಜನರ ಪೌರತ್ವವು  ಪರೀಕ್ಷೆಗೆ ಒಳಪಡುತ್ತದೆ. 

NPR ಮತ್ತು NRC ಗಳ ಹುಟ್ಟಿಗೆ ಕಾರಣವಾದ Citizenship (Registration Of Citizens and Issue Of National Identity Cards) Rules 2003ದ 

ಉಪನಿಯಮ  4 (1)ರ ಪ್ರಕಾರ - ಕೇಂದ್ರ ಸರ್ಕಾರವು ಒಂದು ರಾಷ್ಟ್ರೀಯ ಪೌರತ್ವ ನೊಂದಣಿ ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ದೇಶಾದ್ಯಂತ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬಹುದು . 

ಉಪನಿಯಮ  4 (3) ರ ಪ್ರಕಾರ - ಸ್ಥಳೀಯ ಮಟ್ಟದ ರಾಷ್ಟ್ರೀಯ ನಾಗರಿಕರ ಪಟ್ಟಿಯನ್ನು ತಯಾರಿಸುವ ಸಲುವಾಗಿ NPR ನಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ಮತ್ತು ಕುಟುಂಬಗಳ ವಿವರಗಳನ್ನು   ಸ್ಥಳೀಯ ನಾಗರಿಕ ನೊಂದಣಿ ರಿಜಿಸ್ಟ್ರಾರ್ (ಅಂದರೆ ಸ್ಥಳೀಯ ತಹಸೀಲ್ದಾರರು) VERIFY AND SCRUTINIZE ಅಂದರೆ ಪರೀಕ್ಷಿಸಿ ಪರಿಶೀಲಿಸುತ್ತಾರೆ . 

ಉಪನಿಯಮ  4 (4) ರ ಪ್ರಕಾರ - ಈ ಪರಿಶೀಲನಾ ಹಂತದಲ್ಲಿ ಯಾವುದಾದರೂ ವ್ಯಕ್ತಿಯ  ಪೌರತ್ವ ಸಂಬಂಧಿ ವಿವರಗಳು ಸಂಶಯಾಸ್ಪದವಾಗಿ  ಕಂಡುಬಂದಲ್ಲಿ ಮತ್ತಷ್ಟು ಪರಿಶೀಲನೆ ಮಾಡಲು NPR ಪಟ್ಟಿಯಲ್ಲಿರುವ ಆ ವ್ಯಕ್ತಿಯ ಹೆಸರಿನ ಮುಂದೆ ಸ್ಥಳೀಯ ರಿಜಿಸ್ಟ್ರಾರ್ ಅವರು   ಸೂಕ್ತ ಟಿಪ್ಪಣಿಗಳನ್ನು ದಾಖಲಿಸುತ್ತಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅನುಮಾನಾಸ್ಪದವಾದ ಪೌರತ್ವವೆಂದು ಕಂಡುಬಂದಲ್ಲಿ ಸೂಕ್ತವಾದ ನಮೂನೆಯಲ್ಲಿ  ಆ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ತಿಳಿಸುತ್ತಾರೆ . 

ಉಪನಿಯಮ 7 ((2)  ರ ಪ್ರಕಾರ- ತನ್ನ ಕುಟುಂಬಕ್ಕೆ ಸಂಬಂಧಪಟ್ಟ NPR ಪ್ರಶ್ನಾವಳಿಗಳಿಗೆ ಸರಿಯಾದ ಉತ್ತರ ಕೊಡುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ. 

ಇದು ಹಾಲಿ ಇರುವ ನಿಯಮಾವಳಿಗಳು. ಇದಕ್ಕೆ ಈವರೆಗೆ ಸರ್ಕಾರ ಯಾವುದೇ ತಿದ್ದುಪಡಿ ಮಾಡಿಲ್ಲ.

ಹಾಗೂ NPR ಪ್ರಕ್ರಿಯೆಯಲ್ಲಿ ಉತ್ತರ ಇಲ್ಲದಿರುವುದು ಮತ್ತು ಕೊಡದಿರುವುದು ನಮ್ಮ ಪೌರತ್ವವನ್ನೇ ಪ್ರಶ್ನೆಗೊಳಪಡಿಸುತ್ತದೆ.

ಆದ್ದರಿಂದ "ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ " ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPR ಗೆ ಒಪ್ಪಿಸಿ "ಪೌರತ್ವ ಪರಿಶೀಲನೆಯ"  ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ ಮಾಡುವ ದುರುದ್ದೇಶವನ್ನು ಹೊಂದಿದೆ. 

ಎಲ್ಲಿಯತನಕ  Citizenship (Registration Of Citizens and Issue Of National Identity Cards) Rules 2003 ನಿಮಯದ ಮೇಲಿನ ಉಪನಿಯಮಾವಳಿಗಳನ್ನು ರದ್ದುಮಾಡುವುದಿಲ್ಲವೋ / ತಿದ್ದುಪಡಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಗೃಹಮಂತ್ರಿಯವರ ಹೇಳಿಕೆ ಕೇವಲ ದಾರಿ ತಪ್ಪಿಸುವ ಹೇಳಿಕೆಯಷ್ಟೇ ಆಗಿರುತ್ತದೆ. 

ಹಾಗೊಂದು ವೇಳೆ ಈ ನಿಯಮಗಳನ್ನು ರದ್ದು ಮಾಡಿಬಿಟ್ಟರೆ ಅಥವಾ ತಿದ್ದುಪಡಿಯಾದರೆ ನಿರ್ದಿಷ್ಟ ಜನಸಮುದಾಯಗಳ ಪೌರತ್ವ ಪರಿಶೀಲನೆ ಮಾಡಬೇಕೆಂಬ ಬಿಜೆಪಿ ಸರ್ಕಾರದ  ಉದ್ದೇಶವೇ ಈಡೇರುವುದಿಲ್ಲ .

ಆದ್ದರಿಂದಲೇ ಯಾವ ತಿದ್ದುಪಡಿಯನ್ನು ಮಾಡದೆ ಕೇವಲ ಹೇಳಿಕೆಯನ್ನು ನೀಡುತ್ತಾ ಜನರನ್ನು NPR ಗೆ ಒಪ್ಪಿಸುವ ಹಾಗು  NPR-NRC- CAA ಗಳ ವಿರುದ್ಧದ  ಹೋರಾಟವನ್ನು ಹಾದಿತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. 

ಆದ್ದರಿಂದ ಎಲ್ಲಿಯ ತನಕ ಸರ್ಕಾರವು  ದೇಶದ  ಜನರ  ಪೌರತ್ವ ವನ್ನೇ ಅನುಮಾನಿಸುವ ಹಾಗು ಇಡೀ ಜನಕೋಟಿಯನ್ನು ಪೌರತ್ವ ಸಾಬೀತು ಪಡಿಸುವ ಅಸಾಧ್ಯ ಪರೀಕ್ಷೆಗೆ ಒಡ್ಡುವ 

1. ಭಾರತದ ಪೌರತ್ವ ಕಾಯಿದೆ-1955ಕ್ಕೆ ವಾಜಪೇಯಿ ಸರ್ಕಾರ ತಂದ 14-A ತಿದ್ದುಪಡಿಯನ್ನು ಹಾಗು 
2.   Citizenship (Registration Of Citizens and Issue Of National Identity Cards) Rules 2003 ಗಳನ್ನು

ರದ್ದುಗೊಳಿಸುವುದಿಲ್ಲವೋ ಅಲ್ಲಿಯತನಕ  ಜನರು ಹಾಗು ವಿರೋಧ ಪಕ್ಷಗಳು ಸರ್ಕಾರದ ಯಾವುದೇ ದುರುದ್ದೇಶದ ಮಾತುಗಳು ಮತ್ತು ಹೇಳಿಕೆಗಳಿಗೆ ಬಲಿಯಾಗಬಾರದು . 

ಸುಳ್ಳು-2- NPR ಹಂತದಲ್ಲಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ. 

ವಾಸ್ತವ- ಇದು ಅರ್ಧ ಸತ್ಯ . ಕೇಂದ್ರ ಸರ್ಕಾರ ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿರುವ   NPR Training Manual ಪ್ರಕಾರ  NPR ಮಾಹಿತಿ ಸಂಗ್ರಹ ಮಾಡಲು ಬರುವ ಅಧಿಕಾರಿಗಳಿಗೆ  ಆಧಾರ್, ಡ್ರೈವಿಂಗ್ ಲೈಸೆನ್ಸ್ , ಮೊಬೈಲ್ ನಂಬರ್ , ವೋಟರ್ ಕಾರ್ಡ್  ಮತ್ತು ಪಾಸ್ ಪೋರ್ಟ್ ದಾಖಲೆಗಳನ್ನು ತೋರಿಸಬೇಕು. 
      - ಈ ನಿಯಮವನ್ನು ಸರ್ಕಾರ ಈ ಕ್ಷಣದವರೆಗೂ ಹಿಂತೆಗೆದುಕೊಂಡಿಲ್ಲ. 

ಸುಳ್ಳು - 3- CAA ಪೌರತ್ವ ಕೊಡುವ ಕಾಯಿದೆಯೇ ಹೊರತು ಪೌರತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಲ್ಲ

ವಾಸ್ತವ:  ಇದು ಸುಳ್ಳು ಮತ್ತು ಅರ್ಧಸತ್ಯದಿಂದ ಕೂಡಿರುವ ಹೇಳಿಕೆಯಾಗಿದೆ. 

CAA ಕಾಯಿದೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗು ಅಫ್ಘಾಅನಿಸ್ತಾನ ಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಅಥವಾ ದೌರ್ಜನ್ಯಗಳ ಭಯದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಹಿಂದು,ಸಿಖ್ಖ, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿಗಳಿಗೆ ಆಶ್ರಯ ಮತ್ತು ಪೌರತ್ವವನ್ನು ಕೊಡುವ ಕಾಯಿದೆಯಾಗಿದೆ. 

ಅಷ್ಟರಮಟ್ಟಿಗೆ ಅದು ಪೌರತ್ವವನ್ನು ಕೊಡುವ ಕಾಯಿದೆ. ಆದರೆ ಅದೇ ದೇಶಗಳಲ್ಲಿ ಅಹ್ಮದೀಯರು, ಹಜಾರಗಳು ಹಾಗು ಶಿಯಾಗಳು ಸಹ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆಂದು ಮೋದಿ ಸರ್ಕಾರವೇ ೨೦೧೮ರ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಗೆ ದೂರಿತ್ತಿದೆ. ಆದರೆ CAA ಕಾಯಿದೆ ಅದೇ ದೇಶಗಳಿದ ಅದೇ ಬಗೆಯ ಧಾರ್ಮಿಕ ದೌರ್ಜನ್ಯಗಳಿಗೆ ತುತ್ತಾಗಿ ವಲಸೆ ಬರುವ ಈ ಸಮುದಾಯಗಳಿಗೆ ಬಾಗಿಲನ್ನು ಮುಚ್ಚುತ್ತದೆ .

ಆ ಅರ್ಥದಲ್ಲಿ  CAA ಕಾಯಿದೆ ಉಳಿದ ಧರ್ಮಿಯರಿಗೆ ಪೌರತ್ವವನ್ನು ನಿರಾಕರಿಸುವ ಕಾಯಿದೆಯೇ  ಆಗಿದೆ.

ಅಲ್ಲದೆ  CAA ಕಾಯಿದೆಯ ನಿಮಿತ್ತವಿಲ್ಲದೆ ಈವರೆಗೆ ಯಾವುದೇ ದೇಶದಿಂದ ಯಾವುದೇ ಬಗೆಯ ದೌರ್ಜನ್ಯಗಳಿಗೆ ತುತ್ತಾಗಿ ಆಶ್ರಯ ಕೋರಿ ಬರುತ್ತಿದ್ದವರಿಗೆ ಭಾರತ ಆಶ್ರಯ ಕೊಡುವಂತಹ ಮತ್ತು ಅವರು ಕೋರಿದಲ್ಲಿ 7-11 ವರ್ಶಗಳ ನಂತರ ಪೌರತ್ವ ಕೊಡುವಂತ ಅವಕಾಶ 1955ರಲ್ಲಿ ರಚಿಸಲಾದ ಕಾಯಿದೆಯಲ್ಲೇ ಅಂತರ್ಗತವಾಗಿದೆ. 

ಅಲ್ಲದೆ, CAA ಮೂಲಕ NRC ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ತೋರಿಸಲಾಗದೆ ಅನುಮಾನಾಸ್ಪದರೆಂದು ಘೋಷಿತರಾಗುವ ಹಿಂದುಗಳಿಗೆ ಪೌರತ್ವ ಕೊಡಲಾಗುವುದೆಂಬ ಸರ್ಕಾರದ ಮತ್ತು ಬಿಜೆಪಿಯ ಗುಪ್ತ ಪ್ರಚಾರವು ಸಹ ಹಸಿಸುಳ್ಳಿನದಾಗಿದೆ. 

ಏಕೆಂದರೆ  CAA ಮೂಲಕ ಪೌರತ್ವ ಪಡೆಯಲು NRC ಯಿಂದ ಹೊರಬೀಳುವ ಭಾರತೀಯ ಹಿಂದುಗಳು ಮೊದಲು ತಾವು ಬಾಂಗ್ಲಾದೇಶೀಯರೊ ಅಥವಾ ಪಾಕಿಸ್ತಾನಿಯರೋ ಎಂದು ಸಾಬೀತು ಮಾಡಿಕೊಳ್ಳಬೇಕಾಗುತ್ತದೆ.

 ಏಕೆಂದರೆ  CAA ಸೌಲಭ್ಯ ಸಿಗುವುದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳಿಂದ ವಲಸೆ ಬಂದ ಹಿಂದುಗಳಿಗೆ ಹೊರತು ದಾಖಲೆಗಳಿಲ್ಲವೆಂಬ ಕಾರಣಕ್ಕೆ ಪೌರತ್ವ ಕಳೆದುಕೊಳ್ಳುವ ಭಾರತೀಯ  ಹಿಂದುಗಳಿಗಲ್ಲ.

 

-ಶಿವಸುಂದರ್

Read These Next

ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ

ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ...

ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ; ಅಗತ್ಯ ಸೇವೆ ಹೊರತುಪಡಿಸಿ ಯಥಾಸ್ಥಿತಿ ಮುಂದುವರಿಕೆ

ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲು ಮಾಡಿದ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ...

ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ ...

ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ...