ಕೇರಳದಲ್ಲಿ ಭಾರೀ ಮಳೆ. ಐವರ ಸಾವು, 10ಕ್ಕೂ ಅಧಿಕ ಮಂದಿ ನಾಪತ್ತೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

Source: VB News | By Laxmi Tanaya | Published on 17th October 2021, 11:48 AM | Coastal News |

ತಿರುವನಂತಪುರ : ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಕೊಟ್ಟಾಯಂ ಜಿಲ್ಲೆಯ ಕೂಟಿಕಲ್‌ನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇಡುಕ್ಕಿಯ ತೋಡುಪುಳದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಕಾರು ಸಹಿತ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಕನಿಷ್ಠ 10ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಕ್ಲಾರಮ್ಯಾ ಜೋಸೆಫ್ (65), ಅವರ ಸೊಸೆ ಶೈನಿ(35) ಹಾಗೂ ಅವರ ಪುತ್ರಿ ಸಿನಿ (10)ಯ ಮೃತದೇಹ ಪತ್ತೆಯಾಗಿದೆ. ಅವರ ಸಂಬಂಧಿಕರಾದ ಮಾರ್ಟಿನ್ ಹಾಗೂ ಸಾಂಡ್ರಾ ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಇಡುಕ್ಕಿಯ ಕೊಕ್ಕಯಾರ್‌ನಲ್ಲಿ ಕೂಡ ಇನ್ನೊಂದು ಭೂಕುಸಿತ ಸಂಭವಿಸಿದ್ದು, ಮೂರು ಮನೆಗಳು ಕೊಚ್ಚಿಕೊಂಡು ಹೋಗಿದ್ದು ಏಳು ಮಂದಿ ನಾಪತ್ತೆಯಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಕಾರೊಂದು ನೆರೆ ನೀರಿಗೆ ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ನಿಖಿಲ್ ಉನ್ನಿಕೃಷ್ಣನ್ (30) ಹಾಗೂ ಸೀಮಾ ಕೆ. ವಿಜಯನ್ (31) ಎಂದು ಗುರುತಿಸಲಾಗಿದೆ.

ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ 6 ಜಿಲ್ಲೆಗಳಲ್ಲಿ ಆರೆಂಜ್
ಅಲರ್ಟ್ ಘೋಷಿಸಿದೆ. ಎರ್ನಾಕುಲಂ, ಪತ್ತನಂತಿಟ್ಟ, ಇಡುಕ್ಕಿ, ಪಾಲಕ್ಕಾಡ್, ತ್ರಿಶೂರು ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಆಲಪುಳ, ಮಲಪ್ಪುರ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆಯಿಂದ ಕೂಟ್ಟಿಕಲ್‌ನಲ್ಲಿ ಭೂಕುಸಿತ ಸಂಭವಿಸಿದೆ ಹಾಗೂ ಅದರಲ್ಲಿ ಸಿಲುಕಿದ ಕುಟುಂಬಗಳನ್ನು ರಕ್ಷಿಸಲು ಭಾರತೀಯ ವಾಯು ಪಡೆಯ ನೆರವು ಕೋರಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಚೇರಿ ತಿಳಿಸಿದೆ.

ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಕನಿಷ್ಠ ಮೂರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಮೂವರು ಸಾವನ್ನಪ್ಪಿದ್ದಾರೆ. 10ಕ್ಕೂ ಅಧಿಕಮಂದಿ ನಾಪತ್ತೆಯಾಗಿದ್ದಾರೆ ಎಂದು ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ.

“ಕೊಟ್ಟಾಯಂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನಿಷ್ಠ ನಾಲ್ಕು ಕಡೆ ಭೂಕುಸಿತ ಸಂಭವಿಸಿದೆ. ಕೂಟ್ಟಿಕಲ್ ಪ್ರದೇಶದಲ್ಲಿ ಸಿಲುಕಿದವರನ್ನು ರಕ್ಷಿಸಲು ಭಾರತೀಯ ವಾಯು ಪಡೆಯ ನೆರವು ಕೋರಲಾಗಿದೆ. ಹಲವರು ನಾಪತ್ತೆಯಾಗಿದ್ದಾರೆ. ನೆರೆ ನೀರು ಪ್ರವೇಶಿಸಿರುವುದರಿಂದ 60ಕ್ಕೂ ಅಧಿಕ ಜನರು ತಮ್ಮ ಮನೆಗಳಲ್ಲಿ ರಕ್ಷಣೆ ನಿರೀಕ್ಷಿಸುತ್ತಿದ್ದಾರೆ' ಎಂದು ಸಚಿವರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ರಾಜ್ಯದ ಕೊಟ್ಟಾಯಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳು ತೀವ್ರ ತೊಂದರೆಗೀಡಾಗಿವೆ. ಕೆಎಸ್‌ಆರ್‌ಟಿಸಿ ಬಸ್ಸೊಂದು ನೀರಿನಲ್ಲಿ ಮುಳುಗಿರುವ ಹಾಗೂ ಅದರಿಂದ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸುತ್ತಿರುವ ದೃಶ್ಯಗಳು ಸೇರಿದಂತೆ ನೆರೆಯ ಕುರಿತ ಹಲವು ವೀಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

ವಿಪತ್ತು ನಿರ್ವಹಣಾ ಇಲಾಖೆಯ ಉಸ್ತುವಾರಿ ಕಂದಾಯ ಸಚಿವ ಕೆ. ರಾಜನ್ ಅವರು ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ನೆರೆ ನೀರು ಏರಿಕೆಯಾಗುತ್ತಿರುವ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಬೆಟ್ಟ ಪ್ರದೇಶಗಳ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಎನ್‌ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನದಿಗಳಲ್ಲಿ ನೀರು ಏರಿಕೆಯಾಗುವ ಸಾಧ್ಯತೆ ಇದೆ. ಕೆಲವು ಅಣೆಕಟ್ಟುಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಆದುದರಿಂದ ಈ ಪ್ರದೇಶದಲ್ಲಿರುವವರು ಅಧಿಕಾರಿಗಳು ನೀಡುವ ಸೂಚನೆಯನ್ನು ಪಾಲಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನರಲ್ಲಿ ಮನವಿ ಮಾಡಿದ್ದಾರೆ. ತಿರುವನಂತಪುರ ಜಿಲ್ಲೆಯ ವಿವಿಧ ಭಾಗಗಳು ಜಲಾವೃತಗೊಂಡಿದೆ.

ಕೊಟ್ಟಾಯಂ ಹಾಗೂ ಆಲಪುಳವನ್ನು ಆವರಿಸಿರುವ ಕುಟ್ಟನಾಡು ವಲಯದಲ್ಲಿ ಹಲವು ಭಾಗಗಳು ಜಲಾವೃತವಾಗಿವೆ. ಕೊಲ್ಲಂ ಜಿಲ್ಲೆಯಲ್ಲಿ 30 ಮನೆಗಳು ಕುಸಿದಿವೆ. ಕೊಲ್ಲಂ ಜಿಲ್ಲೆಯ ಕರುಗನಪಳ್ಳಿ ತಾಲೂಕಿನ 17 ಗ್ರಾಮಗಳಲ್ಲಿ 55 ಪರಿಹಾರ ಕೇಂದ್ರಗಳನ್ನು ಸರಕಾರ ತೆರೆದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...