ಭಟ್ಕಳದಲ್ಲಿ ಎಡಬಿಡದೇ ಕಾಡಿದ ಮಳೆ; ರಾಷ್ಟ್ರೀಯ ಹೆದ್ದಾರಿ ಜಲಾವೃತ; ಮನೆಗಳಿಗೆ ನೀರು; ನೆಲಕ್ಕೊರಗಿದ ಗಿಡಮರ

Source: S O News service | By I.G. Bhatkali | Published on 1st July 2022, 12:48 PM | Coastal News |

ಭಟ್ಕಳ: ತಾಲೂಕಿನಲ್ಲಿ ಗುರುವಾರ ಎಡಬಿಡದೇ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಿಗ್ಗೆಯಿಂದಲೇ ಮಳೆ ಒಂದೇ ಸವನೆ ಸುರಿಯುತ್ತಿದ್ದು, ಹೆಚ್ಚಿನ ರಸ್ತೆಗಳು ಮಳೆಯಲ್ಲಿ ಕೆರೆ, ಕೆಸರಿನ ಹೊಂಡವಾಗಿ ಪರಿಣಮಿಸಿದೆ.

ತಾಲೂಕಿನಾದ್ಯಂತ 8-10 ಮನೆಗಳಿಗೆ ನೀರು ನುಗ್ಗಿದೆ. ತಾಲೂಕಿನ ಮಾವಳ್ಳಿ, ಬೆಂಗ್ರೆ, ಶಿರಾಲಿ ಭಾಗಗಳಲ್ಲಿ ಮರ ಮುರಿದು ಬಿದ್ದು, ಒಟ್ಟೂ 3 ಮನೆಗಳಿಗೆ ಹಾನಿಯಾಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಸಂಶುದ್ದೀನ್ ಸರ್ಕಲ್, ರಂಗೀಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡ ಪರಿಣಾಮವಾಗಿ ಸಂಚಾರ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿತು.

ದ್ವಿಚಕ್ರ ವಾಹನ ಸವಾರರಂತೂ ಮಳೆಯಲ್ಲಿ ಮುಂದಕ್ಕೆ ಸಾಗಲು ಪರದಾಡಬೇಕಾಯಿತು. ಹೆಚ್ಚಿನ ವಾಹನಗಳು ಹಗಲಿನಲ್ಲಿಯೇ ವಾಹನ ದೀಪದ ಬೆಳಕಿನಲ್ಲಿ ಮುಂದಕ್ಕೆ ಸಾಗುತ್ತಿರುವುದು ಕಂಡು ಬಂತು.

ಗ್ರಾಮೀಣ ಭಾಗದ ಕೆಲವು ರಸ್ತೆಗಳು ಮಳೆಯಲ್ಲಿ ಭಾಗಶಃ ಕೊಚ್ಚಿಕೊಂಡು ಹೋಗಿದೆ. ಚೌಥನಿ, ಕಡವಿನಕಟ್ಟೆ ಹೊಳೆಗೆ ಹೆಚ್ಚಿನ ನೀರು ಹರಿದು ಬಂದಿದ್ದು, ಹೊಳೆ ತಟದ ನಿವಾಸಿಗಳು ಚಿಂತೆಗೆ ಜಾರಿದ್ದಾರೆ. ಗದ್ದೆಗಳು ಹೊಳೆಯಾಗಿದ್ದು, ನಾಟಿ ಕಾರ್ಯಕ್ಕೂ ತಡೆ ಒಡ್ಡಿದಂತಾಗಿದೆ. ಸುರಿದ ಮಳೆಗೆ ಕಡಲ ಭೋರ್ಗರೆತ ಮುಗಿಲು ಮುಟ್ಟಿದ್ದು, ಕಡಲ ತಟದಲ್ಲಿಯೂ ಕಸುಬು ಕೈ ಕೊಟ್ಟಿದೆ. ಮಳೆಯಲ್ಲಿಯೂ ಒಂದಷ್ಟು ಸಂಪಾದನೆ ಕಾಣುತ್ತಿದ್ದ ಸಣ್ಣಪುಟ್ಟ ದೋಣಿಗಳೂ ಅನಿವಾರ್ಯವಾಗಿ ದಡ ಸೇರಿವೆ. ಹೆಚ್ಚಿನ ಮೀನುಗಾರರು ಮನೆಯಲ್ಲಿಯೇ ವಿಶ್ರಾಂತಿಗೆ ಜಾರಿದ್ದಾರೆ. ತಾಲೂಕಿನ ಶಿರಾಲಿ, ಹೆಬಳೆ ಭಾಗದಲ್ಲಿ ಮರ ಧರೆಗೆ ಉರುಳಿರುವುದು ಕಂಡು ಬಂದಿದೆ. 

10 ವಿದ್ಯುತ್ ಕಂಬ ಧರೆಗೆ :
ತಾಲೂಕಿನಾದ್ಯಂತ 10 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. 2 ವಿದ್ಯುತ್ ಟ್ರಾನ್ಸಫಾರ್ಮರ್‍ಗಳು ಕೆಟ್ಟು ಹೋಗಿದ್ದು, ಹಾನಿಯ ಒಟ್ಟೂ ಮೌಲ್ಯ ರು.1ಲಕ್ಷ 80 ಸಾವಿರ ಎಂದು ಅಂದಾಜಿಸಲಾಗಿದೆ. ತಾಲೂಕಿನ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆಯವರೆಗೆ 69ಮಿಮೀ. ಮಳೆ ಸುರಿದಿದ್ದು, ಈ ವರ್ಷದ ಮಳೆಯ ಪ್ರಮಾಣ 1167.8ಮಿಮೀ.ಗೆ ಏರಿಕೆ ಕಂಡಿದೆ. ಗುರುವಾರ ಒಂದೇ ದಿನ ಮಳೆಯ ಪ್ರಮಾಣ 120ಮಿಮೀ. ದಾಟಿದೆ. ಭಾರಿ ಮಳೆಯ ಕಾರಣ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ತಹಸೀಲ್ದಾರ ಸುಮಂತ್, ಚೌಥನಿ ಹೊಳೆಯ ತಟದಲ್ಲಿ 7 ಮನೆಗಳಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗಂಜಿ ಕೇಂದ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ತಿಳಿಸಿದ್ದಾರೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...