ಎಚ್‌ಡಿಕೆ ಆಸ್ತಿ ಪಟ್ಟಿ ಶೀಘ್ರದಲ್ಲೇ ಬಹಿರಂಗ; ಡಿಕೆಶಿ
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ರೂ. ಸಂಪಾದನೆ ಮಾಡಿಲ್ಲ. ಶೀಘ್ರದಲ್ಲಿಯೇ ಅವರ ಆಸ್ತಿ ಪಟ್ಟಿ ಬಿಡುಗಡೆಗೊಳಿಸುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರವಿವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ಎಂದು ಕೇಳಿದರು.
ನಿನ್ನ ಸಹೋದರ ಬಾಲಕೃಷ್ಣಗೌಡ ಅವರ ಕುಟುಂಬ, ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ನೀವು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ. ಯಾವ ಈರುಳ್ಳಿ ಆಲುಗಡ್ಡೆಯಲ್ಲಿ ಅದು ಸಂಪಾದನೆ ಆಗಿದೆ ಲೆಕ್ಕ ಕೊಡಬೇಕು ಎಂದು ಸವಾಲೆಸೆದರು.
ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ, ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀನಲ್ಲ ಎಂದ ಅವರು, ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಚರ್ಚೆ ಮಾಡಿಲ್ಲ. ನಿನ್ನಗಣಿ ಕೇಸ್ ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಬಿಡುಗಡೆ ಮಾಡಿಲ್ಲ. ಆದರೆ, ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದರು.