ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’

Source: sonews | By Staff Correspondent | Published on 13th July 2019, 10:15 PM | State News | Don't Miss |

ಕೋಲಾರ: ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ಸುಲಿಗೆ ಮಾಡುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’ಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚನೆ ನೀಡಿದರು.ಶನಿವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಖಾಸಗಿ ಫೈನಾನ್ಸ್ ಮತ್ತು ವಾಣಿಜ್ಯ ಬ್ಯಾಂಕ್‍ಗಳು ಚಿನ್ನಾಭರಣ ಸಾಲಕ್ಕೂ ರೈತರಿಂದ ಮಾಡುತ್ತಿರುವ ಸೂಲಿಗೆಯಿಂದ ತಪ್ಪಿಸಲು ಯೋಜನೆ ಜಾರಿಗೆ ತರಲಾಗಿದ್ದು, ಸಮರ್ಪಕವಾಗಿ ಅನುಷ್ಟಾನಗೊಳಿಸಲು ಮುಂದಾಗಬೇಕು, ಯೋಜನೆ ಕುರಿತು ರೈತರಿಗೆ ಮಾಹಿತಿ ಒದಗಿಸಿಬೇಕು ಎಂದು ಸಲಹೆ ನೀಡಿದರು.ರೈತರು ಆರ್ಥಿಕ ಸಮಸ್ಯೆ ಎದುರಾದಾಗ ಅದರಿಂದ ಪರಾಗಲು ಖಾಸಗಿ ಫೈನಾನ್ಸ್ ಕಂಪನಿ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಚಿನ್ನಾಭರಣದ ಮೇಲೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುತ್ತಾರೆ. ಅದನ್ನು ತೀರಿಸಲಾಗದೆ ಆಭರಣಗಳನ್ನು ಕಳೆದುಕೊಂಡಿರುವ ಪ್ರಕರಣಗಳು ಹೆಚ್ಚು ನಡೆದಿವೆ ಎಂದು ವಿಷಾದಿಸಿದರು.

ಡಿಸಿಸಿ ಬ್ಯಾಂಕ್‍ನ ವಿವಿಧ ಶಾಖೆಗಳಿಂದ ಇದುವರೆಗೂ 5 ಕೋಟಿ ಮಾತ್ರ ಚಿನ್ನಾಭರಣಗಳ ಮೇಲೆ ಸಾಲ ನೀಡಲಾಗಿದೆ. ಈ ಯೋಜನೆ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ, ಅವರಿಗೆ ಅಭರಣಗಳ ಜತೆಗೆ 3 ಲಕ್ಷತನಕ ಸಾಲ ನೀಡಲು ಅವಕಾಶವಿದೆ. ಯಾರು ಬಂದರೂ ಸೌಕರ್ಯ ಕಲ್ಪಿಸುವ ಬ್ಯಾಂಕ್ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಿ ಸ್ಪಂದಿಸಿ ಸಾಲ ನೀಡಿ ಎಂದು ತಾಕೀತು ಮಾಡಿದರು.ಬ್ಯಾಂಕ್‍ಗಳಿಗೆ ಸಾರ್ವಜನಿಕರು ಬಂದರೆ ಅಧಿಕಾರಿಗಳು ಸೌಜನ್ಯಕ್ಕೂ ಮಾತನಾಡಿಲ್ಲ, ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ, ಹಿಂದಿನ ಪರಿಸ್ಥಿತಿ ಏನಾದರೂ ಎದುರಾದರೆ ಅಧಿಕಾರಿಗಳು ಎಲ್ಲಾ ಬೀದಿಗೆ ಬರಬೇಕಾಗುತ್ತದೆ. ರೈತರ ದುಡಿಮೆಯಿಂದ ಬಂದಿರುವ ತೆರಿಗೆ ಹಣದಿಂದ ವೇತನ ಪಾವತಿಯಾಗುತ್ತಿದೆ. ಇನ್ನಾದರೂ ಬದ್ಧತೆಯಿಂದ ಕೆಲಸ ಮಾಡಿ ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ಪ್ರಯತ್ನದಿಂದ ವಾಣಿಜ್ಯ ಬ್ಯಾಂಕ್‍ಗಳು ಬಡ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಠೇವಣಿ ಕಟ್ಟಿಸಿಕೊಂಡು ಮಪತ್ತಕ್ಕೆ ಬಡ್ಡಿ ನೀಡದೆ ಸೂಲಿಗೆ ಮಾಡುತ್ತಿದೆ. ಕೇಳಿದರೆ ನೂರೊಂದು ದಾಖಲೆ ಕೇಳುತ್ತಾರೆ. ಇದರಿಂದ ಬೇಸತ್ತು ಗ್ರಾಹಕರು ದೂರ ಉಳಿಯುತ್ತಿದ್ದಾರೆ. ವಾಣಿಜ್ಯ ಬ್ಯಾಂಕ್‍ಗಳು ಏನಿದ್ದರೂ ಬಂಡವಾಳಶಾಹಿಗಳಿಗೆ ಮಾತ್ರ ಸಾಲ ನೀಡುತ್ತಾರೆ ಎಂದು ಟೀಕಿಸಿದರು.ಡಿಸಿಸಿ ಬ್ಯಾಂಕ್ ಕೇವಲ ಸಾಲ ನೀಡಲು ಸಿಮೀತಗೊಂಡಿಲ್ಲ. ಠೇವಣಿಗಳನ್ನು ಹೆಚ್ಚಿಸಲು ಶಾಖೆಗಳಿಗೆ ಗುರಿ ನೀಡಲಾಗಿತ್ತು, ಶೇ.50ರಷ್ಟು ಸಾಧನೆ ಮಾಡಿಲ್ಲ, ಸಾಲ ಕೊಡಿಸಲು ಊರಿಗೆ ಮುಂಚೆ ಶಿಫಾರಸ್ಸು ಮಾಡುತ್ತೀರಿ, ಠೇವಣಿ ಕೊಡಿಸಲು ನಿಮ್ಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು.

ಸುಂದರಪಾಳ್ಯದ ಮಹಿಳಾ ಸಂಘವೊಂದರಲ್ಲಿ 35 ಮಂದಿಯ ಕಂತಿನ ಹಣವನ್ನು ವ್ಯಕ್ತಿಯೊರ್ವ ಬ್ಯಾಂಕಿಗೆ ಪಾವತಿ ಮಾಡದೆ ವಂಚನೆ ಮಾಡಲು ಯತ್ನಿಸಿದ್ದ. ಗ್ರಾಮದೊಳಗೆ ಹೋಗಿ ಮನೆಯ ಮುಂದೆ ಕುಳಿತುಗೊಂಡ ಕೂಡಲೇ ಹಣ ತಂದು ಪಾವತಿ ಮಾಡಿದ, ಮಧ್ಯವರ್ತಿಗಳು ಸಂಘಗಳನ್ನು ಸಂಪರ್ಕಿಸಿ ಸಾಲದ ಹಣ ಬ್ಯಾಂಕಿಗೆ ಪಾವತಿ ಮಾಡಲು ನಂಬಿಸಿ ವಂಚಿಸಲು ನೋಡುತ್ತಾರೆ, ಇದು ಇತರೆ ಸಂಘಗಳಲ್ಲಿ ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.ಯಾವುದೇ ಒಂದು ಸಂಘದ ಒಬ್ಬರು ಸಾಲ ಕಟ್ಟದಿದ್ದರು ಎಲ್ಲಾ ಸದಸ್ಯರಿಗೂ ನೋಟೀಸ್ ಕಳುಹಿಸಿ, ಆಗ ಸಾಲ ಪಾವತಿ ಮಾಡಿರುವ ಸದಸ್ಯರು ಸಾಲ ಪಾವತಿಸದವರ ಮೇಲೆ ಒತ್ತಡ ಹಾಕಿ ಮರುಪಾವತಿ ಮಾಡಿಸುತ್ತಾರೆ ಎಂದು ಸಲಹೆ ನೀಡಿದರು.

ಇತ್ತೀಚಿಗೆ ಬ್ಯಾಂಕ್‍ಗಳಲ್ಲಿ ಸೋರಿಕೆ ಹೆಚ್ಚಾಗಿದೆ, ಉಚಿತವಾಗಿ ಪಾಸ್ ಬುಕ್, ಚೆಕ್ ಲೀಫ್ ಕೊಡುವುದನ್ನು ನಿಲ್ಲಿಸಬೇಕು. ಇದಕ್ಕೆ ಶುಲ್ಕ ನಿಗಧಿ ಮಾಡಿದ್ದರೂ ಯಾಕೆ ವಸೂಲಿ ಮಾಡುತ್ತಿಲ್ಲ. ಇದರಿಂದ ಸೋರಿಕೆ ತಡೆಯಲು ಹೇಗೆ ಸಾಧ್ಯ, ಶುಲ್ಕ ವಸೂಲಿ ಮಾಡದಿದ್ದರೆ ನಿಮ್ಮ ವೇತನದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಜಾಗ ಗುರುತಿಸಲಾಗುತ್ತಿದೆ. 10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಇದಕ್ಕೆ ನಿರ್ದೇಶಕರೆಲ್ಲಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಎಂ.ಎಲ್.ಅನಿಲ್ ಕುಮಾರ್, ಚೆನ್ನರಾಯಪ್ಪ, ಗೋವಿಂದರಾಜು, ನಾಗಿರೆಡ್ಡಿ, ವೆಂಕಟರೆಡ್ಡಿ, ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ಖಲಿಮುಲ್ಲಾ, ಚೌಡಪ್ಪ ಮತ್ತಿತರರು ಹಾಜರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಶಾಹೀನ್ ಬಾಗ್ ಪ್ರತಿಭಟನಾಕಾರರ ಕುರಿತಂತೆ ಬಿಜೆಪಿ ಸಂಸದನಿಂದ ಅವಹೇಳನಕಾರಿ ಹೇಳಿಕೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ...