ಗ್ರಾಮ ಪಂಚಾಯತ ಚುನಾವಣೆ : ಕೋವಿಡ್-19 ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು

Source: SO News | By Laxmi Tanaya | Published on 4th December 2020, 10:11 PM | State News |

ಧಾರವಾಡ : ಕೇಂದ್ರ ಗೃಹ ಮಂತ್ರಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋರೊನಾ ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿರುವ ನಿಯಮಗಳನ್ನು ರಾಜ್ಯ ಚುನಾವಣಾ ಆಯೋಗದ ನಿರ್ದೆಶನದಂತೆ ಪಾಲಿಸಲಾಗುವುದು. ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ಎರಡು ಹಂತದಲ್ಲಿ ಜರುಗುವ 136 ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನಕ್ಕೆ ಆಗಮಿಸುವ ಪ್ರತಿ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. 

 ಚುನಾವಣೆಯಲ್ಲಿ ಪ್ರತಿಯೊಬ್ಬರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ಕೊಠಡಿಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರು ಕೈಗಳನ್ನು ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಹೊರಡಿಸುವ ಕೋವಿಡ್-19 ಮಾರ್ಗಸೂಚಿಗಳನ್ವಯ ಪರಸ್ಪರ ಸಾಮಾಜಿಕ ಅಂತರ ಕಾಯ್ದಿದುಕೊಳ್ಳುಬೇಕು. ಮತ್ತು ಚುನಾವಣಾ ಸಾಮಗ್ರಿಗಳನ್ನು ಡಿಸ್‍ಇನಪಕ್ಟ್  ಮಾಡಿದ ಕೊಠಡಿಯಲ್ಲಿ ಇಡಲಾಗುತ್ತದೆ.  ಚುನಾವಣಾ ಕಾರ್ಯಗಳನ್ನು ಸಾಧ್ಯವಾದಷ್ಟು ವಿಶಾಲವಾದ ಕೊಠಡಿಗಳಲ್ಲಿ ನಿರ್ವಹಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಾಮಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಾರ್ಯ ನಿರ್ವಹಣೆ: ಚುನಾವಣಾ ಅಧಿಕಾರಿಗಳು ನಾಮಪತ್ರ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಕೈಗಳನ್ನು ಸ್ಯಾನಿಟೈಸರ್‍ದಿಂದ ಶುಚಿಗೊಳಿಸಿಕೊಂಡು ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಕೊಠಡಿಯ ಹೊರಭಾಗದಲ್ಲಿ ಸಾಮಾಜಿಕ ಅಂತರ  ಕಾಯ್ದುಕೊಂಡು ಆಸೀನರಾಗಬೇಕು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಅವರ ಒಬ್ಬ ಸೂಚಕ ಮಾತ್ರ ಚುನಾವಣಾ ಅಧಿಕಾರಿಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ಕೋವಿಡ್-19 ಪಾಸಿಟೀವ್ ಇರುವ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಚಿಸಿದಲ್ಲಿ, ಅಂತಹ ವ್ಯಕ್ತಿ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬೇಕು.

ನಾಮಪತ್ರಗಳ ಪರಿಶೀಲನೆ: ನಾಮಪತ್ರಗಳ ಪರಿಶೀಲನೆಯನ್ನು ಕ್ಷೇತ್ರವಾರು ಹಾಜರಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಮಾಡಲಾಗುತ್ತದೆ.. ಸೋಂಕಿತರ ಪರವಾಗಿ ಅವರ ಸೂಚಕರು ಮಾತ್ರ ಹಾಜರಾಗಲು ಅವಕಾಶವಿರುತ್ತದೆ.

 ಉಮೇದುವಾರಿಕೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಅವನು ಅಧಿಕೃತಗೊಳಿಸಿದ ಏಜೆಂಟನು ಉಮೇದುವಾರಿಕೆಯನ್ನು ಹಿಂಪಡೆಯುವ ಸಂಧರ್ಭದಲ್ಲಿ ಚುನಾವಣಾಧಿಕಾರಿ ಕಛೇರಿಯನ್ನು ಪ್ರವೇಶಿಸುವ ಮುಂಚೆ ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಸೋಂಕಿತ ಅಭ್ಯರ್ಥಿಯು ಅವನ ಚುನಾವಣಾ ಏಜೆಂಟ್ ಮೂಲಕ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ನೋಟಿಸನ್ನು ನೀಡಬಹುದು.

ಅಭ್ಯರ್ಥಿಗಳ ಚುನಾವಣಾ ಪ್ರಚಾರ: ಗ್ರಾಮ ಪಂಚಾಯತಿ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿರುವುದರಿಂದ ಹಾಗೂ ಕ್ಷೇತ್ರದ ವ್ಯಾಪ್ತಿ ಬಹಳ ಚಿಕ್ಕದಾಗಿರುವುದರಿಂದ, ಅಭ್ಯರ್ಥಿಗಳ ಪ್ರಚಾರ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಕಡಿಮೆ (ಗರಿಷ್ಟ 5 ಜನ) ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ಮಾಡಬಹುದು. 
ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಫೇಸ್‍ಮಾಸ್ಕ್ ಧರಿಸಿರಬೇಕು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಕೋವಿಡ್-19 ರ ಹಿನ್ನಲೆಯಲ್ಲಿ  ಗುಂಪು – ಗುಂಪುಗಳಾಗಿ ಪ್ರಚಾರ ಮಾಡುವಂತಿಲ್ಲ. ಪಾಸಿಟೀವ್ ಇರುವ ಅಭ್ಯರ್ಥಿಗಳು ಖುದ್ದಾಗಿ ಸಾಮಾನ್ಯ ಜನರೊಂದಿಗೆ, ಸಮುದಾಯದಲ್ಲಿ ಪ್ರಚಾರ ಮಾಡುವಂತಿಲ್ಲ. ಅವರು  ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ. ಅಭ್ಯರ್ಥಿಗಳು ಸಭೆ-ಸಮಾರಂಭಗಳನ್ನು ತಮ್ಮ ಕ್ಷೇತ್ರಗಳಿಗೆ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸಬಹುದಾಗಿದೆ.

ಮತದಾನಕ್ಕೆ ಮತ ಕೇಂದ್ರದ ಸಿದ್ದತೆ: ಕೋವಿಡ್-19 ಹಿನ್ನೆಲೆಯಲ್ಲಿ ಮತಗಟ್ಟೆಯನ್ನು 1400 ಮತದಾರರಿಗೆ ಬದಲಿಗೆ ಗರಿಷ್ಟ 1000 ಮತದಾರರಿಗೆ ಮಾತ್ರ ಇರುವಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ ನಿಗಧಿ ಪಡಿಸಿದ ಕೊಠಡಿಯನ್ನು ಹಾಗೂ ಅಕ್ಕಪಕ್ಕದ ಕೊಠಡಿಗಳನ್ನು ಸೋಡಿಯಂ ಹೈಪೊಕ್ಲೋರೈಡ್ (1%)  ದ್ರಾವಣವನ್ನು ಸಿಂಪಡಿಸಿ ಸಿದ್ದಗೋಳಿಸಲಾಗುವುದು. ಮತಗಟ್ಟೆಯಲ್ಲಿ  ಪ್ರಿಸೈಡಿಂಗ್ ಅಧಿಕಾರಿ, ಪೊಲಿಂಗ್ ಅಧಿಕಾರಿ ಕೂರುವ ಆಸನಗಳನ್ನು ನಿಯಮದಂತೆ ಜೋಡಿಸಿಡಬೇಕು. ಮತದಾನಕ್ಕೆ ಆಗಮಿಸುವ ಪ್ರತಿ ಮತದಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 

ಮತದಾನದ ದಿನದಂದು : ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲಿಂಗ್ ಏಜೆಂಟರು ಮತದಾನದ ದಿನದಂದು ಖಡ್ಡಾಯವಾಗಿ ಫೇಸ್‍ಮಾಸ್ಕ, ಫೇಶ್ ಶೀಲ್ಡ ಮತ್ತು ಹ್ಯಾಂಡಗ್ಲೌಸ್ ಧರಿಸಿರಬೇಕು. ಕೊವೀಡ್– 19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

ಮತದಾರರು: ಮತದಾರರು ಮತಚಲಾಯಿಸುವ ಸಂದರ್ಭದಲ್ಲಿ ಖಡ್ಡಾಯವಾಗಿ ಫೇಸ್‍ಮಾಸ್ಕ್ ಧರಿಸಿರಬೇಕು ಹಾಗೂ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.  

 ಪ್ರತಿಯೊಂದು ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ, ಮತದಾನ ಕೊಠಡಿಗೆ ಪ್ರವೇಶಿಸುವ ವ್ಯಕ್ತಿಗಳನ್ನು ( ಮತಗಟ್ಟೆ ಸಿಬ್ಬಂದಿ ಹಾಗೂ ಏಜೆಂಟರನ್ನು ಒಳಗೊಂಡಂತೆ ) ಕೋವಿಡ್ – 19ರ ಕುರಿತು ಥರ್ಮಲ್‍ಸ್ಕ್ಯಾನರ್ ದಿಂದ ಜ್ವರ ತಪಾಸಣೆ ಮಾಡಲಾಗುವುದು. ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು.

 ಕೋವಿಡ್ ಪಾಜಿಟೀವ್ ಇರುವ ಮತದಾರರಿಗೆ  ಮತದಾನ ಮಾಡಲು ಮತದಾನ ಅವಧಿಯ ಕೊನೆಯ ಒಂದು ಗಂಟೆ ಮೀಸಲಿರಿಸಲಾಗಿದ್ದು, ಅವರಿಗೆ ಎಲ್ಲ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಮತದಾನಕ್ಕೆ ಅವಕಾಶ ಮಾಡಿ ಕೊಡಲಾಗುವುದು.

 ಕೋವಿಡ್ -19 ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಪ್ರತ್ಯೇಕಿಸಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು  ಇದಕ್ಕೆ ಪ್ರತ್ಯೇಕ ಆರೋಗ್ಯ ತಂಡ ರಚಿಸಲಾಗುವುದು. ಪ್ರತಿಯೊಬ್ಬ ಮತದಾರನು ಕೊಠಡಿಗೆ ಪ್ರವೇಶಿಸುವ ಮುಂಚಿತವಾಗಿ ಕೋವಿಡ್–19  ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಬೇಕು.  ಸಂಬಂದಪಟ್ಟ ಮತದಾನ ಕೇಂದ್ರದ ಮಹಿಳಾ ಮತದಾರರಿಗೆ ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸರತಿ ಸಾಲುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಿಸಲಾಗುವುದು.. ಮತದಾರನ ಗುರುತನ್ನು ಪರಿಶೀಲಿಸಿದ ನಂತರ ಮತದಾರರು ತಂದಿರುವ ಗುರುತಿನ ಚೀಟಿಯನ್ನು ಅದಕ್ಕಾಗಿ ಇಟ್ಟಿರುವ ಡಬ್ಬದಲ್ಲಿ ಹಾಕುವಂತೆ ತಿಳಿಸಲಾಗುವುದು.

 ಸೋಂಕಿತ ವ್ಯಕ್ತಿಗಳು ಮತ ಚಲಾಯಿಸುವ ಹಕ್ಕುಳ್ಳವರಾಗಿದ್ದು ಇವರಿಗೆ ಅಂಚೆ ಮತಪತ್ರವನ್ನು ನೀಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಆದೇಶ, ಮಾರ್ಗಸೂಚಿಯನ್ನು ನೀಡಲಾಗುವುದು. ಪೊಲಿಂಗ್ ಅಧಿಕಾರಿಯು ಮತದಾರನ ಅಂಗೈಯನ್ನು ನಿಗದಿಪಡಿಸಿದ ಸ್ಥಳದಲ್ಲಿ ಇರಿಸುವಂತೆ ತಿಳಿಸಿ, ಮತದಾರನ ಕೈಯನ್ನು ಮುಟ್ಟದೆ ಜಾಗರೂಕತೆಯಿಂದ ಮತ್ತು ಒಂದುವೇಳೆ ಮತದಾರನು ಹ್ಯಾಂಡ್ ಗ್ಲೌಸ್ ಧರಿಸಿ ಬಂದಿದ್ದಲ್ಲಿ ಅದನ್ನು ತೆಗೆದು ನಿಗದಿಪಡಿಸಿದ ಬೆರಳಿಗೆ ಅಳಿಸಲಾಗದ ಶಾಯಿ (ಇಂಡೆಲಿಬಲ್ ಇಂಕ್)ಯನ್ನು ಹಾಕಲಾಗುತ್ತದೆ.

 ಧಾರವಾಡ ಜಿಲ್ಲೆಯ ಎಳು ತಾಲೂಕಿನ  ಒಟ್ಟು 136 ಗ್ರಾಮ ಪಂಚಾಯತಗಳ 676 ಪ್ರಾದೇಶಿಕ ಚುನಾವಣಾ (ವಾರ್ಡ) ಕ್ಷೇತ್ರಗಳಿಗೆ 1952 ಸದಸ್ಯ ಸ್ಥಾನಗಳಿಗಾಗಿ ಸಾರ್ವತ್ರಿಕ ಚುನಾವಣೆ ಜರುಗಲಿದ್ದು, ಒಟ್ಟು 888 ಮತಗಟ್ಟೆಗಳನ್ನು ಸ್ಥಾಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗಳಿಗೆ ಆಶಾ, ಕಿರಿಯ ಆರೋಗ್ಯ ಸಹಾಯಕರು ಸೇರಿದಂತೆ ವಿವಿಧ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಮತದಾನಕ್ಕೆ ಆಗಮಿಸುವ ಕೋವಿಡ್ ಸೋಂಕಿತರು ಹಾಗೂ ಶಂಕಿತರ ತುರ್ತು ಚಿಕಿತ್ಸೆಗಾಗಿ ಮತದಾನ ಕೇಂದ್ರದ ಹತ್ತಿರ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಆರೋಗ್ಯ ತಂಡ ರಚಿಸಲಾಗಿದ್ದು 36 ಅಂಬ್ಯುಲೆನ್ಸ್,ಗಳು ಮತ್ತು  ಜಿಲ್ಲಾಸ್ಪತ್ರೆ, ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸುಮಾರು 36 ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ, ಆರೈಕೆಗಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Read These Next

ದಕ್ಷಿಣಕನ್ನಡ ಜಿಲ್ಲೆ ಕೋಮು ಸೌಹಾರ್ಧತೆ ಕಾಪಾಡಿಕೊಂಡರೆ ರಾಜ್ಯಕ್ಕೆ ಮಾದರಿಯಾಗಲಿದೆ: ಅಬ್ದುಲ್ ಅಝೀಮ್

ಮಂಗಳೂರು : ವಕ್ಫ್ ಭೂಮಿ ಅಕ್ರಮ ಪ್ರಕರಣಗಳ ಬಗ್ಗೆ ಮುಂದಿನ ಸದನದ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ವರದಿ ಸರಕಾರಕ್ಕೆ ...

ಹು-ಧಾ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ. ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ಸಮನ್ವಯತೆಯಿಂದ ಕಾರ್ಯಮಾಡಬೇಕು - ಜಿಲ್ಲಾಧಿಕಾರಿ ನಿತೇಶ ಪಾಟೀಲ

ಹು-ಧಾ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ. ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ...

ಚೆನ್ನಮ್ಮ ವೃತ್ತ ಫ್ಲೈ ಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ. ಉತ್ತರ ಕರ್ನಾಟಕ ಭಾಗದ ರಾಷ್ಟೀಯ ಹೆದ್ದಾರಿಗಳ ಅಭಿವೃದ್ಧಿಗೆ 21 ಸಾವಿರ ಕೋಟಿ ಬಿಡುಗಡೆ : ಕೇಂದ್ರ ಸಚಿವ ನಿತಿನ್ ಗಡ್ಕರಿ

ಹುಬ್ಬಳ್ಳಿ : ಕೇಂದ್ರ ಸರ್ಕಾರದಿಂದ ಉತ್ತರ ಕರ್ನಾಟಕ ಭಾಗದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 21 ಸಾವಿರ ಕೋಟಿ ರೂಪಾಯಿಗಳನ್ನು ...

ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ

ಹುಬ್ಬಳ್ಳಿ :‌ ಕೋವಿಡ್ ತಡೆಯಲು ಇಂದಿನಿಂದ ದೇಶದಾದ್ಯಂತ ಪ್ರಾರಂಭವಾದ ಕೋವಿಶೀಲ್ಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ...