ಕೂಲಿಕಾರರಿಗೆ ಪರಿಹಾರ ಒದಗಿಸಲು ಜಿ.ಪಂ ಉಪ ಕಾರ್ಯದರ್ಶಿ ಸೂಚನೆ.

Source: SO News | By Laxmi Tanaya | Published on 19th May 2022, 7:27 AM | Coastal News | Don't Miss |

ಕಾರವಾರ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ  ಕೂಲಿಕಾರರು ಆಕಸ್ಮಿಕವಾಗಿ ಮೃತರಾದರೆ ಅಥವಾ ಭಾಗಶಃ ಹಾಗೂ ಶಾಶ್ವತ ಅಂಗವೈಕಲ್ಯತೆಗೆ ಒಳಗಾದರೆ ಅಂತಹವರಿಗೆ 2 ಲಕ್ಷ ರೂ ಪರಿಹಾರವನ್ನು ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಯು ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್‍ನ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಉದ್ಯೋಗ ಚೀಟಿಯೊಂದಕ್ಕೆ 100 ದಿನಗಳ ಕೂಲಿ ನೀಡಲಾಗುತ್ತಿದೆ. 309 ರೂ ಕೂಲಿ ಹಾಗೂ 10ರೂ ಸಾಮಗ್ರಿ ವೆಚ್ಚ ನಿಗದಿಯಾಗಿದೆ.  ಆದ್ರೆ ಕೂಲಿಕಾರರಿಗೆ ಕೆಲಸದ ವೇಳೆ ಇಲ್ಲವೇ ಕಾಮಗಾರಿ ಸ್ಥಳದಲ್ಲಿ ಅವಘಡ ಸಂಭವಿಸಿ ಕೂಲಿಕಾರರು ಸಾವನ್ನಪ್ಪಿದರೆ ಹಾಗೂ ಶಾಶ್ವತ ಅಂಗವೈಕಲ್ಯತೆ ಹೊಂದಿದರೆ ಈವರೆಗೂ ಪರಿಹಾರ ಪಾವತಿಗೆ ಅವಕಾಶವಿದ್ದರೂ ಸಹ ಹಲವು ಗೊಂದಲಗಳಿದ್ದವು. ಆದರೀಗ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೆಲಸದ ಸ್ಥಳದಲ್ಲಿ ಕೂಲಿಕಾರರು ಮೃತರಾದರೆ ಪರಿಹಾರ ಪಾವತಿಸಲು ಆದೇಶಿಸಿದ್ದು, ಈವರೆಗಿನ ಎಲ್ಲ ಗೊಂದಲಗಳಿಗೆ ತೆರೆ ಎಳೆದಂತಾಗಿದೆ. 2021 ಎಪ್ರಿಲ್ 1ರ ನಂತರದ ಎಲ್ಲಾ ಪ್ರಕರಣಗಳಿಗೆ ಈ ಆದೇಶ ಅನ್ವಯಿಸಲಿದೆ. ಅಲ್ಲದೆ ನರೇಗಾ ಯೋಜನೆಯಡಿ ದುಡಿಯುವ ಕೂಲಿಕಾರರು ಪ್ರಧಾನ ಮಂತ್ರಿ ಭೀಮ್ ಸುರಕ್ಷಾ ಯೋಜನೆಯ ವಿಮಾ ಸೌಲಭ್ಯ ಪಡೆಯುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಪರಿಹಾರ ಪಾವತಿಗೆ ಸಿಇಒ ಹೊಣೆ ಸರಕಾರ ಮೇ. 10ರಂದು ಈ ಆದೇಶ ಹೊರಡಿಸಿದ್ದು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರಿಹಾರ ಪಾವತಿಸುವ ಹೊಣೆಯನ್ನ ಒಪ್ಪಿಸಿದೆ. ಇನ್ನುಮುಂದೆ ನರೇಗಾ ಕಾಮಗಾರಿ ಸ್ಥಳದಲ್ಲಿ ಮೃತರಾದ ಅಥವಾ ಶಾಶ್ವತ ಅಂಗವೈಕಲ್ಯತೆಗೆ ಒಳಗಾದ ಕೂಲಿಕಾರರಿಗೆ ಒಂದು ವಾರದೊಳಗೆ ಪರಿಹಾರ ಸಿಗಲಿದೆ.

ಗಾಯಗೊಂಡ ಕೂಲಿಕಾರರ ಚಿಕಿತ್ಸೆಗೆ ಸೂಚನೆ ನರೇಗಾ ಕೂಲಿಕಾರರು ಕೆಲಸದ ಸಮಯದಲ್ಲಿ ಗಾಯಗೊಂಡರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಬೇಕು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದರೆ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕು. ಈ ವೆಚ್ಚವನ್ನು ನರೇಗಾ ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಭರಿಸಬೇಕು. ಗಾಯಗೊಂಡ ಕೂಲಿಕಾರರು ಆಸ್ಪತ್ರೆಯಲ್ಲಿ ದಾಖಲಾದ ಅವಧಿಗೂ ಕೂಲಿ ನೀಡಬೇಕು. ನಿಗದಿಪಡಿಸಿದ ಕೂಲಿ ದರದ ಅರ್ಧದಷ್ಟನ್ನು ಆಸ್ಪತ್ರೆಯಲ್ಲಿರುವ  ಕೂಲಿಕಾರರಿಗೆ ಪಾವತಿಸಬೇಕು ಎಂದು ಸರಕಾರ ಸೂಚನೆ ಹೊರಡಿಸಿದೆ.
ಕೂಲಿಕಾರರು ಆಕಸ್ಮಿಕವಾಗಿ ಮರಣ ಹೊಂದಿದಾಗ ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಸ್ಥಳ ಮಹಜರ್ ನಡೆಸಬೇಕು. ಕೂಲಿಕಾರರು ಕಾಮಗಾರಿ  ಕೆಲಸದ ಸ್ಥಳಕ್ಕೆ ತೆರಳುವಾಗ ಅಥವಾ ಕೆಲಸ ಸ್ಥಳದಿಂದ ಮನೆಗೆ ವಾಪಸ್ಸಾಗುವ ವೇಳೆ ಅಪಘಾತವಾಗಿ ಸಾವು ಸಂಭವಿಸಿದರೆ 24 ಗಂಟೆಯೊಳಗೆ ಮೃತ ಕೂಲಿಕಾರರೊಂದಿಗಿನ ಸಹ ಕೂಲಿಕಾರರ ಹೇಳಿಕೆ ದಾಖಲಿಸಿಕೊಳ್ಳಬೇಕು. ಜೊತೆಗೆ ಪೊಲೀಸ್,  ವೈದ್ಯಕೀಯ ಹಾಗೂ ಮರಣೋತ್ತರ ಪರೀಕ್ಷಾ ವರದಿ ಪಡೆದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿ, ಜಿಲ್ಲಾ ವೈದ್ಯಾಧಿಕಾರಿ ಸೇರಿದಂತೆ, ಸಂಬಂಧಿಸಿದ ತಾಲೂಕು ಪಂಚಾಯತ್ ಇಓ ಅವರನ್ನೊಳಗೊಂಡ ಸಮಿತಿಗೆ ಸ್ಥಳ ಮಹಜರ್ ವರದಿ ಸಲ್ಲಿಸಬೇಕು. ಈ ಸಮಿತಿಯು ದಾಖಲೆಗಳನ್ನು ಪರಿಶೀಲಿಸಿದ ನಂತರ ಪರಿಹಾರ ಪಾವತಿಸಲು ಅನುಮತಿಸಲಾಗಿದೆ ಎಂದು ತಿಳಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...