ಭಟ್ಕಳ: ಆಡಳಿತ ವಿಕೇಂದ್ರೀಕರಣಕ್ಕೆ ಕೊಳ್ಳಿ ಇಟ್ಟ ಸರಕಾರ; ಸ್ಥಳೀಯಾಡಳಿತದಲ್ಲಿ ಅಧಿಕಾರಿಗಳದ್ದೇ ದರ್ಬಾರ್; ಊರು, ಕೇರಿಯನ್ನು ಆವರಿಸಿದ ಕೇಡುಗಾಲ

Source: S O News service | By V. D. Bhatkal | Published on 4th September 2020, 6:31 PM | Coastal News | Special Report |

ಭಟ್ಕಳ: ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು 2 ವರ್ಷಗಳು ಉರುಳಿದರೂ, ಆಡಳಿತ ವ್ಯವಸ್ಥೆ ಹಳಿಗೆ ಬರದೇ ಹದಗೆಟ್ಟು ಹೋಗಿದೆ. ಸರಕಾರವೇ ತನ್ನ ನಿರ್ಲಕ್ಷ್ಯ ಧೋರಣೆಯಿಂದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಗೆ ಕೊಳ್ಳಿ ಇಟ್ಟಿದ್ದು, ಬರೆಗೆಟ್ಟು ಹೋಗುತ್ತಿರುವ ಊರುಗಳ ಸಾಲಿಗೆ ಭಟ್ಕಳವೂ ಸೇರಿದೆ.

ಭಟ್ಕಳ ಪುರಸಭೆಯ 23 ವಾರ್ಡುಗಳಿಗೆ ಚುನಾವಣೆ ನಡೆದು ( 2019, ಮೇ29) ಹೆಚ್ಚು ಕಡಿಮೆ ಒಂದೂವರೆ ವರ್ಷಗಳು ಕಳೆದು ಹೋಗಿದೆ. ಇಲ್ಲಿಯವರೆಗೆ ನೂತನ ಸದಸ್ಯರಿಗೆ ಅಧಿಕಾರವೇ ಸಿಕ್ಕಿಲ್ಲ. ಪರಿಣಾಮವಾಗಿ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸಮಸ್ಯೆಗೂ ಧ್ವನಿ ಇಲ್ಲದಂತಾಗಿದೆ. ಸುಮಾರು ರು.200ಕೋ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಳ ಗುಣಮಟ್ಟವನ್ನು ಕೇಳುವವರು ಇಲ್ಲದಂತಾಗಿದೆ. ಬೀದಿ ದೀಪ ವ್ಯವಸ್ಥೆಯ ಬಗ್ಗೆಯೂ ಅಸಮಾಧಾನ ಹೊರ ಹೊಮ್ಮುತ್ತಲೇ ಇವೆ. ಹೊಸ

ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ವಿಳಂಬ ಸರಕಾರದ ಮಟ್ಟದ ಸಮಸ್ಯೆಯಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಪ್ರತಿ ವಾರ್ಡುಗಳಲ್ಲಿ ಸಮಸ್ಯೆ ಇದ್ದು, ಅಧಿಕಾರಿಗಳಾಗಿ ಸಮಸ್ಯೆ ಆಲಿಸುವ ಪ್ರಯತ್ನ ನಡೆಸಿದ್ದೇವೆ. ಮುಂದಿನ ನಿರ್ಧಾರ ಸರಕಾರದ ಕೈಯಲ್ಲಿದೆ.
ದೇವರಾಜ, ಮುಖ್ಯಾಧಿಕಾರಿಗಳು, ಪುರಸಭೆ ಭಟ್ಕಳ

ಯೋಜನೆಗಳ ಅನುಷ್ಠಾನವಂತೂ ದೂರದ ಮಾತಾಗಿದೆ. ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್! ಇಂತಹ ಅವ್ಯವಸ್ಥೆಯಲ್ಲಿ ಚುನಾವಣೆ ನಡೆಯುವುದಾದರೂ ಏಕೆ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ. ಮುಂದಿನ 6 ತಿಂಗಳ ಒಳಗೆ ಸದಸ್ಯರಿಗೆ ಅಧಿಕಾರದ ಬಲ ಬಂದು ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದರೂ ಪುರಸಭಾ ಸದಸ್ಯರ ಅಧಿಕಾರಾವಧಿ ಇರುವುದು ಕೇವಲ 3 ವರ್ಷ. ಆಡಳಿತ ವ್ಯವಸ್ಥೆಯನ್ನು ಸರಿಮಾಡಬೇಕಾಗಿದ್ದ ಸರಕಾರ ಮೌನಕ್ಕೆ ಜಾರಿದೆ. 

ಪಟ್ಟಣ ಪಂಚಾಯತಕ್ಕೆ ಸಾರಥಿ ಇಲ್ಲ:
ತಾಲೂಕಿನ ಜಾಲಿ ಪಟ್ಟಣ ಪಂಚಾಯತ 2015, ಆಗಸ್ಟನಲ್ಲಿ ಅಸ್ತಿತ್ವಕ್ಕೆ ಬಂದಿರುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಪಟ್ಟಣ ಪಂಚಾಯತಗೆ ಚುನಾವಣೆ ನಡೆದು ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರದ ಮೊದಲ ಅವಧಿ ಮುಕ್ತಾಯ ಕಂಡು 5 ತಿಂಗಳು ಕಳೆದಿವೆ. ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಅಲ್ಲಿಯೂ ಅಧಿಕಾರಿಗಳೇ ಸಾರಥಿಗಳು. ಸದಸ್ಯರ ಠರಾವುಗಳು ಅಧಿಕಾರಿಗಳ ಅಧಿಕಾರವಧಿಯಲ್ಲಿ ಬದಲಾದ ಬಗ್ಗೆಯೂ ಆರೋಪಗಳು ಗುಣಗುಣಿಸುತ್ತಲೇ ಇವೆ. ಜನರ ಬೇಕು ಬೇಡುಗಳನ್ನು ಕೇಳುವವರು ಯಾರೋ!

ಹಳ್ಳಿ ಆಡಳಿತವೂ ಹದಗೆಟ್ಟಿದೆ:
 ಭಟ್ಕಳ ತಾಲೂಕಿನಲ್ಲಿ 16 ಗ್ರಾಮ ಪಂಚಾಯತಗಳ ಅಧಿಕಾರ ಮುಗಿದು 2 ತಿಂಗಳು ಕಳೆದು ಹೋಗಿದೆ. ಹಳ್ಳಿಗಳ ಅಧಿಕಾರ ಅಧಿಕಾರಿಗಳ ಕೈಯಲ್ಲಿ ಕುಳಿತುಕೊಂಡಿದೆ. ಕೆಸರಾದ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕುವುದಕ್ಕೆ, ರಸ್ತೆಯನ್ನು ಮುಚ್ಚಿ ಕೊಂಡಿರುವ ಗಿಡಗಂಟಿಗಳನ್ನು ಸರಿಸುವುದಕ್ಕೂ ಹರಸಾಹಸ ಪಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಕೊರೊನಾ ಹೇಳಿಕೊಂಡು ಇಷ್ಟು ತಿಂಗಳು ಕಳೆದಿದ್ದು ಸಾಕು, ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರಿಸಿ ಎಂದು ಹಳ್ಳಿ ಜನರು ಸರಕಾರವನ್ನು ಆಗ್ರಹಿಸುತ್ತಲೇ ಇದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...