ಲಸಿಕೆ ಕಡ್ಡಾಯವಲ್ಲ, ಐಚ್ಛಿಕ; ಲಸಿಕೆ ಸಂಬಂಧಿ ಸಾವಿಗೆ ನಾವು ಹೊಣೆಯಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಹೇಳಿಕೆ

Source: Vb | By I.G. Bhatkali | Published on 30th November 2022, 12:28 PM | National News |

ಹೊಸದಿಲ್ಲಿ: ಕೊರೋನ ವೈರಸ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ಸಂಭವಿಸುವ ಸಾವುಗಳಿಗೆ ಸರಕಾರ ಪರಿಹಾರ ನೀಡಬೇಕೆಂದು ಹೇಳುವುದು ಕಾನೂನಾತ್ಮಕವಾಗಿ ಕಾರ್ಯಸಾಧುವಲ್ಲ ಹಾಗೂ ಇಂತಹ ಸಾವುಗಳಿಗೆ ನಾವು ಹೊಣೆಯಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ ನಲ್ಲಿ ಹೇಳಿದೆ.

ಲಸಿಕೆ ತೆಗೆದುಕೊಳ್ಳುವಂತೆ ತಾನು ಯಾವತ್ತೂ ಯಾವುದೇ ಪ್ರಜೆಯನ್ನು ಒತ್ತಾಯಿಸಿಲ್ಲ ಎಂದು ಲಸಿಕೆ ಸಂಬಂಧಿ ಸಾವಿಗೆ ಪರಿಹಾರ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಚಿವಾಲಯ ಹೇಳಿದೆ. ಲಸಿಕೆ ತೆಗೆದುಕೊಳ್ಳುವುದು ಐಚ್ಛಿಕವಾಗಿತ್ತು ಎಂದು ಅದು ಸ್ಪಷ್ಟಪಡಿಸಿದೆ.

ವೈದ್ಯಕೀಯ ಪ್ರಯೋಗಗಳ ಮೂಲಕ ಲಸಿಕೆಯ ಪರೀಕ್ಷೆ ನಡೆಯುತ್ತಿರುವಾಗ ಸಾವು ಸಂಭವಿಸಿದರೆ ಲಸಿಕೆಯ ಉತ್ಪಾದಕರು ಮಾತ್ರ ಪರಿಹಾರ ನೀಡಬಹುದಾಗಿದೆ ಎಂದು ಅಫಿಡವಿಟ್ ಹೇಳಿದೆ. ಲಸಿಕೆ ಒಮ್ಮೆ ಮಾರುಕಟ್ಟೆಗೆ ಬಂದ ಬಳಿಕ ಅದನ್ನು ಪಡೆದು ಸಾವು ಸಂಭವಿಸಿದರೆ ಜನರು ವೈಯಕ್ತಿಕ ನೆಲೆಯಲ್ಲಿ ಸಿವಿಲ್ ನ್ಯಾಯಾಲಯಗಳಲ್ಲಿ ಪರಿಹಾರ ಕೋರಬೇಕು ಎಂದು ಸರಕಾರ ಹೇಳಿದೆ.

ಕೊರೋನ ವೈರಸ್ ಜಾಗತಿಕ ಮಟ್ಟದಲ್ಲಿ ಸ್ಫೋಟಿಸಿದ ಒಂದು ವರ್ಷದ ಬಳಿಕ, 2021 ಜನವರಿಯಲ್ಲಿ ಭಾರತವು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ವಯಸ್ಕರಿಗೆ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತಂದಿತು. ನವೆಂಬರ್ 19ರವರೆಗೆ, ದೇಶಾದ್ಯಂತ 219 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಲಸಿಕೆ ತೆಗೆದುಕೊಂಡ ಬಳಿಕ, 92,114 ವ್ಯತಿರಿಕ್ತ ಪರಿಣಾಮಗಳು ಅಥವಾ ಅಡ್ಡ ಪರಿಣಾಮಗಳ ಪ್ರಕರಣಗಳು ವರದಿಯಾಗಿವೆ. ಈ ಪೈಕಿ, 2,782 ಗಂಭೀರ ಪ್ರಕರಣಗಳಾಗಿವೆ. ಆದರೆ, ಈ ಎಲ್ಲಾ ಪ್ರಕರಣಗಳು ಲಸಿಕೆಗೆ ಸಂಬಂಧಿಸಿದವುಗಳಲ್ಲ ಎಂದು ಸರಕಾರ ಹೇಳಿದೆ. ಆಗಸ್ಟ್‌ನಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಮಕ್ಕಳನ್ನು ಕಳೆದುಕೊಂಡ ಹೆತ್ತವರ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು. ಕೇಂದ್ರ ಸರಕಾರವು ನವೆಂಬರ್ 25ರಂದು ತನ್ನ ಪ್ರತಿಕ್ರಿಯೆ ನೀಡಿದೆ.

ಮೊದಲೇ ಎಚ್ಚರಿಸಿದ್ದೆವು:
ಅರ್ಜಿಯನ್ನು ವಜಾಗೊಳಿಸುವಂತೆ ಸರಕಾರ ನ್ಯಾಯಾಲಯವನ್ನು ಕೋರಿರುವ ಕೇಂದ್ರ ಸರಕಾರ, ವ್ಯತಿರಿಕ್ತ ಪರಿಣಾಮಗಳ ಮೇಲೆ ನಿಗಾ ಇಡುವ, ತನಿಖೆ ಮಾಡುವ ಮತ್ತು ವಿಶ್ಲೇಷಿಸುವ ವ್ಯವಸ್ಥೆ ಪರಿಪೂರ್ಣ ಮತ್ತು ಪಾರದರ್ಶಕವಾಗಿದೆ ಎಂದು ಹೇಳಿದೆ.

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಸಾವಿನ ಸಾಧ್ಯತೆಯ ಕುರಿತ ವಿವರಗಳನ್ನು ಸಚಿವಾಲಯವು ತನ್ನ ವೆಬ್‌ ಸೈಟ್, ಪತ್ರಿಕಾ ಪ್ರಕಟಣೆಗಳು ಮತ್ತು ಸಾಮೂಹಿಕ ಮಾಧ್ಯಮಗಳಲ್ಲಿ ಪ್ರಕಟಿಸಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈವರೆಗೆ, ಕೋವಿಡ್-19 ವೈರಸ್ ವಿರುದ್ಧದ 12 ಲಸಿಕೆಗಳಿಗೆ ಭಾರತ ಅನುಮೋದನೆ ನೀಡಿದೆ. ಲಸಿಕೆ ಕಾರ್ಯಕ್ರಮದಲ್ಲಿ ಸಿಂಹಪಾಲನ್ನು ಕೋವಿಶೀಲ್ಡ್ ಲಸಿಕೆ ಪಡೆದಿದೆ.

ಲಸಿಕೆ ತೆಗೆದುಕೊಂಡ ದಿನಗಳ ಬಳಿಕ ಮೃತಪಟ್ಟ ಯುವತಿಯರು:
ತಮ್ಮ ಪುತ್ರಿಯರ 'ಸಾವುಗಳಿಗೆ ಪರಿಹಾರ ನೀಡಬೇಕೆಂದು ಕೋರಿ ಹೈದರಾಬಾದ್‌ನ ರಚನಾ ಗಂಗು ಮತ್ತು ಕೊಯಂಬತ್ತೂರ್‌ನ ವೇಣುಗೋಪಾಲನ್ ಗೋವಿಂದನ್, 2021 ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಗಂಗು ಅವರ ಪುತ್ರಿ ರಿತೈಕಾ ಓಮ್‌ 2021 ಜೂನ್‌ನಲ್ಲಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ 15 ದಿನಗಳಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿಗೂ ಕೋವಿಶೀಲ್ಡ್ ಲಸಿಕೆಗೂ ಸಂಬಂಧವಿರುವುದನ್ನು, ಲಸಿಕೆಯ ಅಡ್ಡ ಪರಿಣಾಮ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ನೇಮಿಸಲಾದ ರಾಷ್ಟ್ರೀಯ ಸಮಿತಿಯೊಂದು ಬಳಿಕ ಖಚಿತಪಡಿಸಿತ್ತು.

ಗೋವಿಂದನ್‌ ಪುತ್ರಿ 20 ವರ್ಷದ ಕಾರುಣ್ಯ 2021 ಜುಲೈಯಲ್ಲಿ ಮೃತಪಟ್ಟಿದ್ದಾರೆ. ಲಸಿಕೆ ತೆಗೆದುಕೊಂಡ ಒಂದು ತಿಂಗಳಲ್ಲಿ ಅವರ ಸಾವು ಸಂಭವಿಸಿದೆ. ಆದರೆ, ಅವರ ಸಾವನ್ನು ಲಸಿಕೆಯ ಅಡ್ಡ ಪರಿಣಾಮಗಳೊಂದಿಗೆ ಜೋಡಿಸಲು ಬೇಕಾದಷ್ಟು ಪುರಾವೆಯನ್ನು ಕಂಡುಕೊಳ್ಳಲು ರಾಷ್ಟ್ರೀಯ ಸಮಿತಿಗೆ ಸಾಧ್ಯವಾಗಲಿಲ್ಲ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...