ದೇಶದ ಸದೃಢತೆಗೆ ಉತ್ತಮ ಆರೋಗ್ಯ ಅವಶ್ಯ: ನ್ಯಾ. ಉಮೇಶ್ ಎಂ.ಅಡಿಗ

Source: so news | Published on 12th September 2019, 12:22 AM | State News | Don't Miss |

ಚಿಕ್ಕಮಗಳೂರು: ದೇಶ ಸದೃಡವಾಗಬೇಕಾದರೆ ಪ್ರತಿಯೊಬ್ಬರು ಆರೋಗ್ಯಯುತವಾಗಿರುವುದು ಅವಶ್ಯಕ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಎಂ ಅಡಿಗ  ಹೇಳಿದರು.
 ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಿದ್ದ, ಪೋಷಣ್ ಅಭಿಯಾನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ದೇಶದ ಪ್ರತಿಯೊಬ್ಬರು ದೈಹಿಕ, ಮಾನಸಿಕ, ಆಧ್ಯಾತ್ಮಿಕವಾಗಿ ಸದೃಡರಾದಾಗ ಮಾತ್ರ ಉತ್ತಮ ದೇಶ ನಿರ್ಮಾಣ ಮಾಡಬಹುದು ಎಂದು ಹೇಳಿದರು.
  ಹಿಂದಿನ ಕಾಲದಲ್ಲಿ ಪೌಷ್ಠಿಕ ಆಹಾರ ಸೇವನೆ ಮಾಡುವುದಕ್ಕಾಗಿ ಹಬ್ಬ ಹರಿದಿನಗಳನ್ನು ಆಚರಣೆ ನೆಪ ಮಾಡಿಕೊಂಡು ವಿವಿಧ ರೀತಿಯ ಆಹಾರಗಳನ್ನು ತಯಾರಿಸಿ ಸೇವನೆ ಮಾಡುತ್ತಿದ್ದರು. ಆದರೆ ಇಂದು ಸಾಂಪ್ರದಾಯಿಕವಾದ ಅಡುಗೆಗಳು ಕಣ್ಮರೆಯಾಗುತ್ತಿರುವುದಲ್ಲದೇ ಪ್ರಸ್ತುತ ಜನರು ಪೌಷ್ಠಿಕ ಆಹಾರಗಳನ್ನು ಬಿಟ್ಟು ಪಾಸ್ಟ್ ಪುಡ್‌ಗಳಿಗೆ ಹೊಂದಿಕೊಂಡು ಆರೋಗ್ಯವನ್ನು ಹದಗೆಡಿಸಿಕೊಳ್ಳುವುದಕ್ಕೆ ಆಧುನಿಕ ಜೀವನ ಶೈಲಿ ಪದ್ದತಿಯೇ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
 ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಕರ್ತವ್ಯ ಆದರೆ ಇಂತಹ ವಿಚಾರಗಳಲ್ಲಿಯೂ ಸರ್ಕಾರಗಳು ಅರಿವು ಮೂಡಿಸುವ ಮಟ್ಟಕ್ಕೆ ಜನರು ತಲುಪಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೇ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ-ಹಾಗೂ ಸಂತೋಷವಾಗಿ ಜೀವಿಸುವ ಹಕ್ಕನ್ನೂ ಸಂವಿಧಾನ ಕಲ್ಪಿಸಿದೆ. ಅದರಂತೆ ನಾವೆಲ್ಲರೂ ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯವಾಗಿ ಜೀವಿಸೋಣ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಪೌಷ್ಠಿಕ ಆಹಾರ ಸೇವನೆ ಮಾಡಿ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳುವುದರ ಜೊತೆ ಇತರರು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಪ್ರೇರೆಪಿಸಬೇಕಲ್ಲದೇ ಮನಸ್ಸಿಗೆ ಇಷ್ಟವಾದ ಆಹಾರ ಸೇವನೆ ಮಾಡದೇ ದೇಹಕ್ಕೆ ಅಗತ್ಯವಿರುವ ಪೌಷ್ಠಿಕ ಆಹಾರ ಸೇವನೆ ಮಾಡಿ ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಉತ್ತಮವಾದ ಆಲೋಚನೆ ಮತ್ತು ದೃಢ ಸಂಕಲ್ಪವನ್ನು ಹೊಂದಿದರೆ ಮನಸ್ಸನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗುತ್ತದೆ ಎಂದರು. 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮವಾದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾದರೆ ಪೌಷ್ಠಿಕ ಆಹಾರ ಸೇವನೆ ಮಾಡಬೇಕಲ್ಲದೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೂ ತೆರಳಿ ಪೌಷ್ಠಿಕ ಆಹಾರ ಸೇವಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದ ಅವರು ಪೋಷಕರು ಮಕ್ಕಳನ್ನು ಮೊಬೈಲ್ ಗೀಳಿಗೆ ತಳ್ಳದೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು. 
ಈ ಸಂದರ್ಭದಲ್ಲಿ ಎಸ್,ಟಿ,ಜೆ ಕಾಲೇಜಿನ ಪ್ರಾಂಶುಪಾಲೆ ಜೆ.ಕೆ.ಭಾರತಿ ಪೌಷ್ಠಿಕ ಆಹಾರದ ಬಗ್ಗೆ ಡಿ.ಎಸ್.ಓ ಮಂಜುನಾಥ್ ಆಹಾರ ಸುರಕ್ಷತೆ ಹಾಗೂ ಮಾನದಂಡ ಕಾಯ್ದೆಯ ಬಗ್ಗೆ ಹಾಗೂ ನಿವೃತ್ತ ಡಿ.ಎಚ್.ಓ ಭಾಗ್ಯಲಕ್ಷ್ಮಮ್ಮ ರಕ್ತದಾನದ ಅನುಕೂಲಗಳ ಕುರಿತಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಜಯಣ್ಣ ನೆಟ್ಟೆಕೆರೆಹಳ್ಳಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಸರ್ಜನ್ ಡಾ. ಕುಮಾರ್, ವಕೀಲ ಸಂಘದ ಅಧ್ಯಕ್ಷ ಎಸ್.ಎಸ್. ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Read These Next