ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ: 6 ಮಂದಿ ಸಾವ

Source: VB | By S O News | Published on 24th February 2021, 8:27 PM | State News |

ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿಯಲ್ಲಿ ಸಂಭವಿಸಿದ್ದ ಮಾರಕ ಜಿಲೆಟಿನ್ ಸ್ಫೋಟದ ದಾರುಣ ಪ್ರಕರಣದ ನೆನಪು ಮಾಸುವ ಮೊದಲೇ ಭೀಕರವಾದ ಇನ್ನೊಂದು ಸ್ಫೋಟ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತವರೂರು ಪೆರೇಸಂದ್ರಕ್ಕೆ ಕೂಗಳತೆ ದೂರದಲ್ಲಿ ಸಂಭವಿಸಿದೆ.

ಗುಡಿಬಂಡೆ ತಾಲೂಕಿನ ಹಿರೇನಾಗವಳ್ಳಿ ಯಲ್ಲಿ ಜಿಲೆಟಿನ್ ಸ್ಫೋಟಕ್ಕೆ ಆರು ಮಂದಿ ಸಾವನ್ನಪ್ಪಿದ್ದು, ಮೃತ ದೇಹಗಳು ಗುರುತಿಸ ಲಾಗದಷ್ಟು ಛಿದ್ರವಾಗಿವೆ. ಹಿರೇನಾಗವಳ್ಳಿ  ಗ್ರಾಮದ ಕಂಪ್ಯೂಟರ್ ಆಪರೇಟರ್ ರಾಮು, ಗಂಗಾಧರ, ನೇಪಾಳ ಮೂಲದ ಮಹೇಶ, ಇಂಜಿನಿಯರ್ ಉಮಾ ಕಾಂತ್, ಚೇಳೂರಿನ ಅಭಿ ಹಾಗೂ ಮುರಳಿ ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ. ಮೃತರ ಸಂಬಂಧಿಕರ ರೋದನ ಮುಗಿಲುಮುಟ್ಟಿದೆ.

ಭ್ರಮರವರ್ಷಿಣಿ ಕ್ವಾರಿ: ಈ ದುರಂತಕ್ಕೆ ಕಾರಣವಾದ ಕ್ವಾರಿಯು  ಗುಡಿಬಂಡೆಯ బిజిపి ಮುಖಂಡ ನಾಗರಾಜ್  ಹಾಗೂ ಆಂಧ್ರ ಪ್ರದೇಶದ ಶಿವಾರೆಡ್ಡಿ, ರಾಘವೇಂದ್ರ ರೆಡ್ಡಿಯವರ ಸಂಯುಕ್ತ ಮಾಲಕತ್ವದ್ದು ಎಂದು ತಿಳಿದುಬಂದಿದೆ. ಇವರ ಮಾಲಕತ್ವದ 'ಭ್ರಮರವರ್ಷಿಣಿ' ಎಂಬ ಕಲ್ಲು ಕ್ವಾರಿಯಲ್ಲಿ ಅನಧಿಕೃತವಾಗಿ ಶೇಖರಿಸಿಟ್ಟಿದ್ದ ಜಿಲೆಟಿನ್ ಸ್ಫೋಟಕಗಳನ್ನು ಪೊಲೀಸರ ಕಣ್ಣಪ್ಪಿಸಿ ನಾಶಪಡಿಸಲು ನಡುರಾತ್ರಿ ಅರಣ್ಯ ಪ್ರದೇಶ ದತ್ತ ಕೊಂಡೊಯ್ಯುವ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಈ ಕ್ಲಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್, ಕಂಪ್ಯೂಟರ್ ಆಪರೇಟರ್ ಸಮೇತವಾಗಿ ಆರು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಫೋಟದ ವಿಷಯ ತಿಳಿ ಯುತ್ತಿದ್ದಂತೆ ಮೂವರು ಕ್ವಾರಿ ಮಾಲಕರು ನಾಪತ್ತೆಯಾಗಿದ್ದಾರೆ.

ಪಾರಾದ ವಾಹನ ಚಾಲಕ: ನಡುರಾತ್ರಿ ಟಾಟಾ ಏಸ್ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಚಾಲಕ ರಿಯಾಝ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.

ಘಟನಾ ಸ್ಥಳಕ್ಕೆ ಸಚಿವ ಸುಧಾಕರ್ ಆಗಮನ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ವಾರಿಯ ಮೇಲೆ ಫೆಬ್ರವರಿ 7ರಂದು ದಾಳಿ ನಡೆಸಿ ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಸ್ಫೋಟಕ ವಸ್ತುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡು, ಕ್ಲಾರಿ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಕ್ವಾರಿ ಮಾಲಕರು ನಾಪತ್ತೆಯಾಗಿದ್ದು, ಅವರ ವಿರುದ್ಧ ಕ್ರಮ ಜರುಗಿ ಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಕೇಂದ್ರ ವಲಯದ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಜಿಲ್ಲೆಯ ಇನ್ನಿತರ ಅಧಿಕಾರಿಗಳು ಸ್ಥಳದಲ್ಲಿದ್ದರು.

ಬಂಧನಕ್ಕೆ ಆದೇಶ: ಈ ನಡುವೆ ಭ್ರಮರವರ್ಷಿಣಿ ಕ್ರಷರ್‌ ಮಾಲಕರ ಬಂಧನಕ್ಕೆ ಸರಕಾರ ಆದೇಶ ನೀಡಿದ್ದು, ರಾತ್ರಿ ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ನಾಪತ್ತೆಯಾದ ಮೂವರು ಕ್ವಾರಿ ಮಾಲಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ವಿವಿಧ ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದ್ದಾರೆ.

 

ಸ್ಫೋಟಕ್ಕೆ ಕಾರಣ ಏನು?

ಭ್ರಮರವರ್ಷಿಣಿ ಕ್ಲಾರಿಯನ್ನು ಫೆ.7ರಂದು ಮುಚ್ಚಿಸಲಾಗಿತ್ತು ಎನ್ನಲಾಗಿದ್ದು, ಅಂದಿನಿಂದ ಕ್ವಾರಿ ಚಾಲನೆಯಲ್ಲಿರಲಿಲ್ಲ. ಪೊಲೀಸ್ ಇಲಾಖೆ ಕಳೆದ ಎರಡು ದಿನಗಳಿಂದ ಕ್ವಾರಿ ಬಳಿ ಪರಿಶೀಲನೆ ನಡೆಸುತ್ತಿದ್ದ ಕಾರಣ, ಕ್ವಾರಿಮಾಲಕರು ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್ ಕಡ್ಡಿಗಳನ್ನು ಗುಡಿಬಂಡೆ ತಾಲೂಕಿನ ಕಾಡು ಪ್ರದೇಶದಲ್ಲಿ ಎಸೆಯಲು ಟಾಟಾ ಏಸ್ ಹಾಗೂ ಬೈಕ್ ಮೂಲಕ ಸಾಗಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಫೋಟಕಗಳನ್ನು ಕಾಡು ಪ್ರದೇಶದಲ್ಲಿ ಬಿಸಾಡಲು ಬಂದಿದ್ದ ವೇಳೆ ಮೊಬೈಲ್ ರಿಂಗಣಿಸಿದಾಗ ಸ್ಫೋಟ ಸಂಭವಿಸಿರಬಹುದು. ಇಲ್ಲವೇ ಸಿಗರೇಟ್ ಸೇದುವ ವೇಳೆ ಸ್ಫೋಟವಾಗಿರಬಹುದು ಎಂದು ಬಾಂಬ್ ಸ್ಪ್ಯಾಡ್ ಪ್ರಾಥಮಿಕ ವರದಿ ನೀಡಿದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

 

ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ: ಸಿಎಂ

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿರುವುದು ಆಘಾತ
ತಂದಿದೆ. ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಸಾವನ್ನಪ್ಪಿದ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಐಡಿ ತನಿಖೆ: ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ವರದಿ ಬಂದ 24 ಗಂಟೆಯಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಹಿರೇನಾಗವಳ್ಳಿಯಲ್ಲಿ ಸ್ಫೋಟ ಸಂಭವಿಸಿದ ಕ್ವಾರಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಪ್ರಕರಣವನ್ನು ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಅವರು ತಿಳಿಸಿದರು.

5 ಲಕ್ಷ ರೂ. ಪರಿಹಾರ: ಚಿಕ್ಕಬಳ್ಳಾಪುರ ಕ್ವಾರಿಯಲ್ಲಿ ನಡೆದಿರುವ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿರುವ ಆರು ಮಂದಿಯ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಪ್ರಕರಣದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...