ಕಾರವಾರ: ಜ. 16 ರಿಂದ ಜಿಲ್ಲೆಯ 11 ಕೇಂದ್ರಗಳಲ್ಲಿ ಕೋವಿಶಿಲ್ಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

Source: S.O. News service | By S O News | Published on 16th January 2021, 11:02 AM | Coastal News |

ಕಾರವಾರ: ಜಿಲ್ಲೆಯ ಆರೋಗ್ಯ ಇಲಾಖೆಯ ವಿವಿಧ ಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 14665 ಸಿಬ್ಬಂಧಿಗೆ ಮೊದಲ ಆಧ್ಯತೆಯಲ್ಲಿ ಜನವರಿ 16ರಿಂದ ಜಿಲ್ಲೆಯಾದ್ಯಂತ 11 ಕೇಂದ್ರಗಳಲ್ಲಿ ‘ಕೋವಿಶಿಲ್ಡ್’ ಲಸಿಕೆ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ ಕೆ., ಹೇಳಿದರು.

ಕೋವಿಶಿಲ್ಡ್ ಲಸಿಕೆ ಪೂರೈಕೆ ಹಾಗೂ ವಿತರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದಾದ್ಯಂತ ಜನವರಿ 16 ರಿಂದ ‘ಕೋವಿಶಿಲ್ಡ್’ ಲಸಿಕೆ ವಿತರಣಾ ಕಾರ್ಯ ಪ್ರಾರಂಭವಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವ್ಯಾಪ್ತಿ ಶನಿವಾರ ಬೆಳಿಗ್ಗೆ 11 ರಿಂದ 11.30 ಮಧ್ಯೆ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಿದ್ದಾರೆ. ನಂತರ

ದೇಶದ 500 ಹಾಗೂ ರಾಜ್ಯದ 237 ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದರು.

ಜಿಲ್ಲೆಗೆ ಸಂಬಂಧಿಸಿದಂತೆ ವಿತರಣೆಗಾಗಿ ಈಗಾಗಲೇ 7500 ಡೋಸ್ ಲಸಿಕೆ ಪೂರೈಕೆಯಾಗಿದ್ದು, ನಿಗದಿಪಡಿಸಿರುವ ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾ, ತಾಲೂಕ ಹಾಗೂ ಪ್ರಥಾಮಿಕ ಸೇರಿದಂತೆ ಒಟ್ಟು 11 ಆರೋಗ್ಯ ಕೇಂದ್ರಲ್ಲಿ 14665 ಸಿಬ್ಬಂಧಿಗೆ ಮೊದಲ ಆಧ್ಯತೆಯಲ್ಲಿ ಕೋವಿಶಿಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಯಾವುದೇ ತೊಂದರೆಯಾಗದಂತೆ ಶಾಂತಿ, ಸುವ್ಯವ್ಯಸ್ಥೆಯಿಂದ ಲಸಿಕೆ ವಿತರಣಾ ಕಾರ್ಯ ನಡೆಸಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಾರವಾರ ಜಿಲ್ಲಾ ಆಸ್ಪತ್ರೆ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಜೋಯಿಡಾ ತಾಲೂಕು ಆಸ್ಪತ್ರೆ ಮತ್ತು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಕೋವಿಶಿಲ್ಡ್’ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಈ ಕೇಂದ್ರಗಳ ಆಯ್ಕೆಗೆ ಯಾವುದೇ ಮಾನದಂಡವಿಲ್ಲದ ಕಾರಣ ಅಂದಾಜು ಪ್ರಕಾರ ನೇಮಿಸಲಾಗಿದ್ದು, ಕೆಲವು ತಾಲೂಕು ಬರದಿರಬಹುದು. ಮತ್ತೆ ಕೆಲವು ತಾಲೂಕಿನಲ್ಲಿ ಎರಡೆರಡು ಕೇಂದ್ರ ಬಂದಿರಬಹುದು. ಈ ಪೈಕಿ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಗಳು, ಪಿಹೆಚ್‍ಸಿ, ಸಿಹೆಚ್‍ಸಿ ಸೇರಿದಂತೆ ಬೇರೆ ಬೇರೆ ಆರೋಗ್ಯ ಕೇಂದ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ ಎಂದರು.

ಲಸಿಕೆಯನ್ನು ಉಳ್ಳವರಿಗೆ, ಮೇಲ್ವರ್ಗದ ಅಧಿಕಾರಿಗಳಿಗೆ ಮಾತ್ರ ನೀಡುವ ಮೂಲಕ ಸ್ವಜನಪಕ್ಷಪಾತ ನಡೆಸಲಾಗುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ಅದು ಸಮಂಜಸವಲ್ಲ ಯಾಕೆಂದರೆ ದೇಶದಾದ್ಯಂತ ತಂತ್ರಜ್ಞಾನದ ಮೂಲಕವೇ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಎಲ್ಲ ಪ್ರಕ್ರಿಯೆಯೂ ಡಿಜಿಟಲ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಹೀಗಾಗಿ ಅನವಶ್ಯಕವಾಗಿ ಯಾರೋಬ್ಬರೂ ಲಸಿಕೆ ಪಡೆಯಲು ಅವಕಾಶವಿಲ್ಲ. ಈ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನರೂ ಲಸಿಕೆ ಪಡೆಯುತ್ತಿದ್ದು, ಈಗಾಗಲೇ ನೋಂದಣಿ ಪ್ರಕಾರ ನೋಂದಣಿದಾರರ ಮೊಬೈಲ್ ನಂಬರ್‍ಗೆ ಲಸಿಕಾ ವಿತರಣೆಯ ಎಲ್ಲ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ರವಾನಿಸಲಾಗಿದೆ. ಪೊಲಿಯೋ ಲಸಿಕೆ ವಿತರಣಾ ಹಾಗೂ ಚುನಾವಣೆ ಮತದಾನ ಪ್ರಕ್ರಿಯೆ ಮಾದರಿಯಲ್ಲಿ ಕೋವಿಶಿಲ್ಡ್ ಲಸಿಕೆ ವಿತರಿಸಲಾಗುತ್ತಿದೆ ಎಂದರು.

ನಿಗದಿತ ಕೇಂದ್ರದಲ್ಲಿ 5 ಜನ ಆರೋಗ್ಯ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತಪಾಸಣೆ ನಡೆಸಿದ ನಂತರ 5 ಎಂಎಲ್‍ನ ಒಂದು ಡೋಸ್‍ನಲ್ಲಿ 0.5 ಎಂಎಲ್ ಪ್ರಕಾರ 10 ಜನರಿಗೆ ಲಸಿಕೆ ನೀಡಲಾಗುತ್ತದೆ. ಒಂದು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದ್ದು, ಈ ಪೈಕಿ 98 ಜನ ಲಸಿಕೆ ಪಡೆದರೆ ಇನ್ನುಳಿದ ಇಬ್ಬರು ಪಡೆಯುವಂತ ಲಸಿಕೆಯನ್ನು ಯಾರಿಗೂ ನೀಡಲು ಬರುವುದಿಲ್ಲ. ಉಳಿದ ಆ ಲಸಿಕೆ ಹಾಳಾಗುತ್ತದೆ. ಹೀಗಾಗಿ ನೋಂದಣಿ ಮಾಡಿಸಿದ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯಬಹುದು. ಆದರೆ ಲಸಿಕೆ ಪಡೆಯುವಂತೆ ಯಾವುದೇ ಒತ್ತಡವಿಲ್ಲ ಎಂದರು.

18 ರಿಂದ 60 ವರ್ಷದೊಳಗಿನವರಿಗೆ ಮಾತ್ರ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಗರ್ಬಿಣಿಯರು, ಹಾಲುಣಿಸುವ ತಾಯಂದಿರು, 18 ವರ್ಷದ ಒಳಗಿನವರು ಹಾಗೂ ಸಧ್ಯ ಕೋವಿಡ್‍ಗೆ ಒಳಗಾಗಿ ಸಕ್ರೀಯ ಪ್ರಕಣದಲ್ಲಿರುವವರಿಗೆ ನೀಡಲಾಗುತ್ತಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾ ಆರೋಗ್ಯ ಇಲಾಖೆಯ ಆರ್‍ಸಿಹೆಚ್‍ಓ ಡಾ. ರಮೇಶ್ ರಾವ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Read These Next