ಪತ್ರಕರ್ತರ ಸಾಮಾಜಿಕ ಕಳಕಳಿ ಶ್ಲಾಘನೀಯ-ಶಾಸಕ ಸುನಿಲ್ ನಾಯ್ಕ 

Source: sonews | By Staff Correspondent | Published on 23rd February 2020, 10:10 PM | Coastal News | Don't Miss |

ಭಟ್ಕಳ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರವಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರಂಜನ ಇಂಡೇನ ಎಜೆನ್ಸಿ, ಸಾಲಗದ್ದೆ ಸ್ಪೋಟ್ರ್ಸ ಕ್ಲಬ್, ಕಟ್ಟೇವೀರ ಯುವಶಕ್ತಿ ಸಂಘ ಇವರ ಸಂಯುಕ್ರಾಶ್ರಯದಲ್ಲಿ ಏರ್ಪಡಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಪತ್ರಕರ್ತರು ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ  ಆರೋಗ್ಯ ತಪಾಸಣಾ ಏರ್ಪಡಿಸಿ ಸಮಾಜಮಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಭಟ್ಕಳ ಸರಕಾರಿ ಆಸ್ಪತ್ರೆ ಹಿಂದೆ ಇದ್ದಂತಿಲ್ಲ. ಇದೀಗ ಸಾಕಷ್ಟು ಸುಧಾರಣೆ ಕಂಡು ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಜನರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸರಕಾರದ ವಿವಿಧ ಸೌಲಭ್ಯ ಪಡೆಯಬೇಕು ಎಂದರು. ಖ್ಯಾತ ನರರೋಗ ತಜ್ಞ ಪ್ರೊ. ಎ ರಾಜ ಮಾತನಾಡಿ, ಭಟ್ಕಳದಲ್ಲಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಹಿಂದೆಯೂ ಕೂಡ ಪತ್ರಕರ್ತರು ಯಶಸ್ವಿಯಾಗಿ  ಆರೋಗ್ಯ ತಪಾಸಣಾ ಶಿಬಿರ ನಡೆಸುವುದರ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದರು. 

ರಂಜನ ಇಂಡೇನ್ ಎಜೆನ್ಸಿಯ ಶಿವಾನಿ ಶಾಂತರಾಮ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಭಟ್ಕಳಕ್ಕೆ ಬಂದು  ಆರೋಗ್ಯ ತಪಾಸಣೆ ನಡೆಸಿರುವುದು ಅನುಕೂಲವಾಗಿದೆ. ಸಮಾಜಕ್ಕೆ ಅನುಕೂಲವಾಗುವ ಇಂತಹ ಕಾರ್ಯಕ್ರಮಕ್ಕೆ ನಮ್ಮ ಸದಾ ಬೆಂಬಲ ಇರಲಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಆದರ್ಶ ಆಸ್ಪತ್ರೆಯ ಡಾ. ಚಂದ್ರಶೇಖರ ಮಾತನಾಡಿ, ಭಟ್ಕಳ ಸರಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಭಟ್ಕಳದಿಂದ ಚಿಕಿತ್ಸೆಗೆಂದು ನಮ್ಮ ಆಸ್ಪತ್ರೆಗೆ ಬರುವವರಿಗೆ ವಿಶೇಷ ಕಾಳಜಿ ವಹಿಸುವುದಲ್ಲದೇ ಚಿಕಿತ್ಸಾ ವೆಚ್ಚದಲ್ಲೂ ರಿಯಾಯತಿ ತೋರಿಸಲಾಗುತ್ತದೆ. ಆದರೂ ಇಂದಿನ ದಿನಗಳಲ್ಲಿ ಆರೋಗ್ಯ ಎಷ್ಟೊತ್ತಿಗೆ ಕೈಕೊಡುತ್ತದೆ ಎಂದು ಹೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯವಿದೆ. ಆರೋಗ್ಯವಿಮೆ ಇದ್ದಲ್ಲಿ ಯಾವುದೇ ಗಂಭೀರ ರೀತಿಯ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದು  ಎಂದ ಅವರು ಭಟ್ಕಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಆರೋಗ್ಯ ತಪಾಸಣೆಯಂತಹ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದರು. 

ಪ್ರೊ.ಎ ರಾಜಾ ಅವರು ಪತ್ರಕರ್ತರಿಗೆ ಆದರ್ಶ ಆಸ್ಪತ್ರೆಯ ಆರೋಗ್ಯ ಕಾರ್ಡ ವಿತರಿಸಿದರು.  ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಸಮಾಜಸೇವಕ ನಝೀರ್ ಕಾಶೀಂಜಿ ಉಪಸ್ಥಿತರಿದ್ದರು. 

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಸ್ವಾಗತಿಸಿದರು.  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ 650ಕ್ಕೂ ಅಧಿಕ ಜನರು ಆಗಮಿಸಿ ತಜ್ಞ ವೈದ್ಯರಿಂದ ಆರೋಗ್ಯ  ತಪಾಸಣೆ ಮಾಡಿಸಿಕೊಂಡರು.        

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...