ಸಿಂಘು ಗಡಿಯಲ್ಲಿ ಸಿಖ್ ದಲಿತನ ಹತ್ಯೆ ನಾಲ್ವರು ಆರೋಪಿಗಳ ಬಂಧನ

Source: SO News | By Laxmi Tanaya | Published on 17th October 2021, 11:57 AM | National News |

ಹೊಸದಿಲ್ಲಿ : ಸಿಂಘು ಗಡಿಯಲ್ಲಿನ ರೈತರ ಪ್ರತಿಭಟನಾ ತಾಣದಲ್ಲಿ ಕಾರ್ಮಿಕನೋರ್ವನನ್ನು ಹತ್ಯೆಗೈದು,ಶವವನ್ನು ಛಿದ್ರವಿಚಿದ್ರಗೊಳಿಸಿದ್ದನ್ನು ಒಪ್ಪಿಕೊಂಡಿರುವ ನಿಹಾಂಗ್ ಸಿಖ್ ಪಂಥಕ್ಕೆ ಸೇರಿದ ಸರಬ್‌ಜಿತ ಸಿಂಗ್ ಎಂಬಾತನನ್ನು ಹರ್ಯಾಣ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ಹತ್ಯೆಯ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ನಿಹಾಂಗ್ ಸಿಖ್ ವ್ಯಕ್ತಿ ನಾರಾಯಣ ಸಿಂಗ್ ಎಂಬಾತ ಪಂಜಾಬಿನ ಅಮೃತಸರ ಜಿಲ್ಲೆಯ ಅಮರಕೋಟ್ ಗ್ರಾಮದಲ್ಲಿ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.

ನಾಲ್ವರು ಆರೋಪಿಗಳ ಬಂಧನ : 
 ಭಗವಂತ ಸಿಂಗ್ ಮತ್ತು ಗೋವಿಂದ ಸಿಂಗ್ ಎಂಬ ಇಬ್ಬರು ನಿಹಾಂಗ್‌ಗಳೂ ಪೊಲೀಸರ ಎದುರು ಶರಣಾಗಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಸರಬ್‌ಜಿತ ಸಿಂಗ್ ಶುಕ್ರವಾರ ಸಂಜೆ ಪೊಲೀಸರಿಗೆ ಶರಣಾಗಿ, ಕಾರ್ಮಿಕನ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ ಎನ್ನಲಾಗಿದೆ.

ನಿಹಾಂಗ್‌ಗಳು ಸಿಖ್ 'ಯೋಧರ ಪಂಥವಾಗಿದ್ದು, ನೀಲಿ ಟರ್ಬನ್ ಧರಿಸುವ ಇವರು ಸದಾ ಶಸ್ತ್ರಸಜ್ಜಿತರಾಗಿರುತ್ತಾರೆ. ಸರಜಿತ ಸಿಂಗ್‌ನನ್ನು ಶನಿವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದ ಪೊಲೀಸರು, ಆತ ಇತರ ಶಂಕಿತರ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಹತ್ಯೆಗೆ ಬಳಸಲಾಗಿದ್ದ ಶಸ್ತ್ರಾಸ್ತ್ರಗಳ ಪತ್ತೆಗೆ ಸಮಯಾವಕಾಶವೂ ಅಗತ್ಯವಿದೆ, ಹೀಗಾಗಿ ಆತನನ್ನು 14 ದಿನಗಳ ಅವಧಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದರಾದರೂ, ನ್ಯಾಯಾಲಯವು ಆತನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿತು.

ಎಡಗಾಲು ಮತ್ತು ಎಡಗೈ ತುಂಡರಿಸಲಾಗಿದ್ದ ಪರಿಶಿಷ್ಟ ಜಾತಿಗೆ ಸೇರಿದ್ದ ಕಾರ್ಮಿಕ ಲಖೀರ್ ಸಿಂಗ್(35)ನ ಶವವು ಶುಕ್ರವಾರ ಬೆಳಗ್ಗೆ ಸಿಂಘು ಗಡಿಯಲ್ಲಿನ ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿಹಾಂಗ್ ಸಿಬ್ಬರ ಗುಂಪೊಂದು ವೀಡಿಯೊದಲ್ಲಿ ಲವೀರ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ನಿಹಾಂಗ್ಗಳು ಸುತ್ತುವರಿದು ಆತನ ಹೆಸರು, ಊರು ಇತ್ಯಾದಿಗಳ ಬಗ್ಗೆ ಪ್ರಶ್ನಿಸುತ್ತಿದ್ದುದನ್ನೂ ವಿಡಿಯೋ ತೋರಿಸಿತ್ತು. ಶನಿವಾರ ಬಹಿರಂಗಗೊಂಡಿರುವ ಇನ್ನೊಂದು ವಿಡಿಯೊದಲ್ಲಿ ಸರ್ವಜಿತ್ ಸಿಂಗ್ ಹತ್ಯೆಯ ಬಗ್ಗೆ ತನಗೆ ಪಾತ್ತಾಪವಿಲ್ಲ ಎಂದು ಹೇಳಿದ್ದಾನೆ.

ಶರಣಾಗತಿಗೆ ಮುನ್ನ ಚಿತ್ರೀಕರಿಸಲಾದ ಈ ವೀಡಿಯೊದಲ್ಲಿ ಸಿಂಗ್ ಅಕ್ಕಪಕ್ಕದಲ್ಲಿ ಇತರ ನಿಹಾಂಗ್‌ಗಳಿದ್ದು, ಕನಿಷ್ಠ ಇಬ್ಬರು ಖಡ್ಗಗಳನ್ನು ಹೊಂದಿದ್ದರು. ನಿನಗೆ ಪಶ್ಚತ್ತಾಪವಿದೆಯೇ ಎಂಬ ಪತ್ರಕರ್ತನ ಪ್ರಶ್ನೆಯನ್ನು ಅನಾಸಕ್ತಿಯಿಂದ ತಳ್ಳಿ ಹಾಕಿದ ಸಿಂಗ್, ಬಳಿಕ ತಲೆಯನ್ನು ಅಲುಗಿಸಿ 'ಇಲ್ಲ' ಎಂದು ಉತ್ತರಿಸಿದ್ದು ವೀಡಿಯೊದಲ್ಲಿ ದಾಖಲಾಗಿದೆ.

ಸ್ಥಳದಲ್ಲಿದ್ದ ನಿಹಾಂಗ್ ಸಿಬ್ಬರು ತನಿಖೆಗೆ ಸಹಕರಿಸಲಿಲ್ಲ ಮತ್ತು ಬ್ಯಾರಿಕೇಡ್‌ನಿಂದ ಶವವನ್ನು ಇಳಿಸಲೂ ಅವಕಾಶ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲಬೀರ್ ಸಿಖ್ ಧರ್ಮದ ಪವಿತ್ರ ಗ್ರಂಥವನ್ನು ಅವಮಾನಿಸಿದ್ದ ಎಂದು ನಿಹಾಂಗ್ ಸಿಬ್ಬರು ಹೇಳುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಇದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ಸೋನಿಪತ್ ಎಸ್‌ಪಿ ಜೆ.ಎಸ್.ರಾಂಧವಾ ತಿಳಿಸಿದರು.

ಪವಿತ್ರ ಗ್ರಂಥವನ್ನು ಅವಮಾನಿಸುವಂತೆ ಲಖೀರ್‌ಗೆ ಆಮಿಷವೊಡ್ಡಲಾಗಿತ್ತು ಎಂದು ಆತನ ಕುಟುಂಬವು ಶನಿವಾರ ಆರೋಪಿಸಿದೆ.

'ಲಖೀರ್ ಮಾದಕ ದ್ರವ್ಯ ವ್ಯಸನಿಯಾಗಿದ್ದ. ಆತ ಗುರು ಗ್ರಂಥ ಸಾಹಿಬ್ ಅಥವಾ ನಿಹಾಂಗ್‌ರನ್ನು ಎಂದೂ ಗುರಿಯಾಗಿಸಿಕೊಳ್ಳುತ್ತಿರಲಿಲ್ಲ. ನಮ್ಮ ಪವಿತ್ರ ಗ್ರಂಥವನ್ನು ಅವಮಾನಿಸಲು ಯಾರೋ ಆತನಿಗೆ ಹಣದ ಆಮಿಷವನ್ನೊಡ್ಡಿದ್ದರು ಎಂದು ನಾವು ಭಾವಿಸಿದ್ದೇವೆ. ಕಳೆದ ವಾರ ಮನೆಯನ್ನು ಬಿಟ್ಟಿದ್ದ ಆತ ಸಿಂಘು ಗಡಿಯಲ್ಲಿ ನಿಹಾಂಗ್ ಸಿದ್ದಿರ ಜೊತೆಯಲ್ಲಿರುತ್ತಾನೆ ಎಂದು ನಾವು ನಿರೀಕ್ಷಿಸಿರಲಿಲ್ಲ' ಎಂದು ಲಖೀರ್ ಭಾವ ಸುಖಚೇನ್ ಸಿಂಗ್ ಹೇಳಿದರು

Read These Next