ಭಟ್ಕಳ: ಕರ್ನಾಟಕದ ಪ್ರಸಿದ್ಧ ಶ್ರೀಕೃಷ್ಣ ಮಿಲ್ಕ್ಸ್ ಸ್ಥಾಪಕ ಹನುಮಂತ ಪೈ ನಿಧನ

Source: S O News service | By V. D. Bhatkal | Published on 1st September 2021, 12:38 AM | Coastal News |

ಭಟ್ಕಳ: ರಾಜ್ಯದಲ್ಲಿ ಪ್ರಸಿದ್ಧ ಶ್ರೀಕೃಷ್ಣ ಮಿಲ್ಕ್ ಡೈರಿಯನ್ನು ಸ್ಥಾಪಿಸಿ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ್ದ, ನಾಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಖ್ಯಾತ ಉದ್ಯಮಿ, ಭಟ್ಕಳ ಮೂಲದ ಹನುಮಂತ ಮ್ಹಾಳಪ್ಪ ಪೈ ಯಾನೆ ಪುತ್ತು ಪೈ ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಸೋಮವಾರ ರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 

ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರನ್ನು ಮಂಗಳವಾರ ಮಧ್ಯಾಹ್ನ ಅವರ ಸ್ವಗೃಹವಾದ ಭಟ್ಕಳಕ್ಕೆ ಕರೆ ತಂದು ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಭಟ್ಕಳ ಜಿಎಸ್‍ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ್, ಹ್ಯಾಂಗ್ಯೋ ಐಸ್‍ಕ್ರೀಮ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ, ಶ್ರೀ ಲಕ್ಷ್ಮೀ ನರಸಿಂಹ್ ರೈಸ್ ಮಿಲ್ ಎಂಡ್ ಆಯಿಲ್ ಮಿಲ್ಸ್ ಕಂಪೆನಿಯ ಮಾಲಕ ರಾಜೇಶ ನಾಯಕ್, ಭಟ್ಕಳ ಅರ್ಬನ್ ಕೋ.ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಇಮ್ತಿಯಾಜ್ ಜುಬಾಪು, ಶ್ರೀ ಮಾರುತಿ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೈ, ಭಟ್ಕಳ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎಮ್.ಆರ್.ನಾಯ್ಕ, ನಿರ್ದೇಶಕರಾದ ಶ್ರೀಧರ ನಾಯ್ಕ, ಸೈಮಂಡ್ ಡಿಸೋಜಾ, ಮಾಸ್ತಿ ಮೊಗೇರ, ಜಾಫರ್ ಸಾದೀಕ್, ಪುರಸಭಾ ಸದಸ್ಯ ಅಬ್ದುರ್ರವೂಫ್ ನಾಯಿತೇ, ದಿನೇಶ ಪೈ, ಪದ್ಮನಾಭ ಪೈ, ಎ.ಎನ್.ಪೈ, ಸತೀಶ ಪೈ, ವಸಂತ ಶ್ಯಾನಭಾಗ, ಕೃಷ್ಣಮೂರ್ತಿ ಕಾಮತ್, ಅಚ್ಯುತ್ ಕಾಮತ್, ಸುನಿಲ್ ಪೈ, ಶ್ರೀನಿವಾಸ ಪಡಿಯಾರ ಮೊದಲಾದ ಗಣ್ಯರು ಆಗಮಿಸಿ ಮೃತರ ಅಂತಿಮ ದರ್ಶನವನ್ನು ಪಡೆದರು. ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ ಸೇರಿದಂತೆ ಹಲವಾರು ಪ್ರಮುಖರು ಪುತ್ತು ಪೈ ನಿಧನಕ್ಕೆ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

1954 ಏಪ್ರಿಲ್ 14ರಂದು ಜನಿಸಿದ್ದ ಪುತ್ತು ಪೈ ಭಟ್ಕಳದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪದವಿ ಶಿಕ್ಷಣಕ್ಕಾಗಿ ಕುಮಟಾ ಎ.ವಿ.ಬಾಳಿಗಾ ಕಾಲೇಜಿನತ್ತ ಮುಖ ಮಾಡಿದ್ದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಎನ್‍ಸಿಸಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದರು. ಉದ್ಯಮ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದ ಹನುಮಂತ ಪೈ ಕುಮಟಾದ ಜಿ.ಎಸ್.ಕಾಮತ್ ಮತ್ತಿತರರ ಮಾರ್ಗದರ್ಶನದೊಂದಿಗೆ ಯಲ್ಲಾಪುರ ಕಿರವತ್ತಿಯನ್ನು ತಮ್ಮ ಕರ್ಮ ಕ್ಷೇತ್ರವನ್ನಾಗಿಸಿಕೊಂಡು 1989ರಲ್ಲಿ ಆರಂಭಿಸಿದ ಶ್ರೀಕೃಷ್ಣ ಮಿಲ್ಕ್ ಪ್ರೈ.ಲಿಮಿಟೆಡ್ ಕಂಪೆನಿ ಕೆಲವೇ ವರ್ಷಗಳಲ್ಲಿ ವಾರ್ಷಿಕ ರು.100ಕೋ. ವ್ಯಾಪಾರ ವಹಿವಾಟು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸಾಮಾಜಿಕ, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತುಂಬು ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದ ಇವರು, ಶ್ರೀ ಪರ್ತಗಾಳಿ ಜೋವೋತ್ತಮ ಮಠದ ಎಲ್ಲ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. 2011ರಲ್ಲಿ ಶ್ರೀಗಳು ಪೈ ಅವರಿಗೆ ಜೀವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದ್ದರು. ಭಟ್ಕಳ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಶ್ರೀಕೃಷ್ಣ ಮಿಲ್ಕ್ಸ್ ಹೆಸರಿನಲ್ಲಿ ಉದ್ಯಮ ಸ್ಥಾಪಿಸಿ, ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದು ತನ್ನ ಇಷ್ಟ ದೇವ ಶ್ರೀಕೃಷ್ಣನ ಜನ್ಮಾಷ್ಠಮಿಯಂದೇ ಪುತ್ತು ಪೈ ದೈವಾಧೀನರಾಗಿರುವುದು ಕಾಕತಾಳೀಯವಾದರೂ ಆಸ್ತಿಕರನ್ನು ಅಚ್ಚರಿಗೆ ತಳ್ಳಿದ್ದಂತೂ ದಿಟ!

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...