ವಾಸ್ತವ್ಯದ ಮನೆ ರಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ – ಲೋಕಾಯುಕ್ತಕ್ಕೆ ಮಾಜಿ ಸಚಿವ ಕೋಟ ಮನವಿ

Source: SO News | By Laxmi Tanaya | Published on 31st July 2021, 10:45 PM | Coastal News | Don't Miss |

ಉಡುಪಿ: ತನ್ನ ವಾಸ್ತವ್ಯದ ಮನೆ ರಚನೆ ಕಟ್ಟಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿ ಮಾಡುತ್ತಿರುವ ಆಪಾದನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತಕ್ಕೆ ಮನವಿ ನೀಡಿದ್ದಾರೆ.

ಮನವಿ ವಿವರ ಇಂತಿದೆ.
ಕರ್ನಾಟಕ ರಾಜ್ಯದಲ್ಲಿ ನಾನು ಮೇಲ್ಮನೆಯ ಶಾಸಕನಾಗಿ 3 ಬಾರಿ ಆಯ್ಕೆಯಾಗಿದ್ದು, 2 ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿದ್ದು, 1 ಬಾರಿ ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಶಾಸಕರಾದ ಹಿನ್ನಲೆಯಲ್ಲಿ ಪ್ರತೀ ವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ ನಿಯಮ-7 ರಡಿ ಆಸ್ತಿ ಪಾಸ್ತಿಗಳ ವಿವರದ ಪಟ್ಟಿಯನ್ನು ಸಹಾ ಲೋಕಾಯುಕ್ತ ಸಂಸ್ಥೆಗೆ ವರ್ಷಂಪ್ರತೀ ಒದಗಿಸಿರುತ್ತೇನೆ. ಆದಾಗ್ಯೂ ೩ ವರ್ಷದಿಂದ ನಾನು ಕಟ್ಟುತ್ತಿರುವ ವಾಸ್ತವ್ಯದ ಮನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದ್ದುದು ಸಹಜವಾಗಿಯೇ ನನಗೆ ನೋವುಂಟಾಗಿದೆ. ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ ಸರ್ವೇ ನಂ.202/2ಡಿ 1ಸಿ 4 ರ 13 ಸೆಂಟ್ಸ್ ಜಾಗದಲ್ಲಿನ ಜಮೀನು (5 ಗುಂಟೆ) ನನ್ನ ಸ್ವಂತ ಆದಾಯದ ಖರೀದಿಯಾಗಿದ್ದು, ಸದರಿ ಜಾಗದಲ್ಲಿ ಗ್ರಾಮ ಪಂಚಾಯತ್‌ನ ಪರವಾನಿಗೆ ಪಡೆದು ನಾನು ವಾಸ್ತವ್ಯದ ಮನೆ ಕಟ್ಟುತ್ತಿದ್ದೇನೆ.

ನನ್ನ ಈಗಿನ ವಾಸ್ತವ್ಯದ ಮನೆ ತಮಗೆ ಈಗಾಗಲೇ ಮಾಹಿತಿ ಒದಗಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಈ ಹಿನ್ನಲೆಯಲ್ಲಿ ನನ್ನ 3 ಮಕ್ಕಳ ಪೈಕಿ ನನ್ನ ಮಗ ಶಶಿಧರ್ ಎಂ.ಬಿ.ಎ. ಮುಗಿಸಿದ್ದು, ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾನೆ. ನನ್ನ ಇಬ್ಬರು ಹೆಣ್ಣುಮಕ್ಕಳು ಶಿಕ್ಷಣವನ್ನು ಮುಗಿಸುವ ಹಂತದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ನನ್ನ ಕುಟುಂಬಕ್ಕಾಗಿ ಮೇಲೆ ತಿಳಿಸಿದ ಜಾಗದಲ್ಲಿ ವಾಸ್ತವ್ಯದ ಕಟ್ಟಡದ ಮನೆಯನ್ನು ಕಟ್ಟುತ್ತಿದ್ದು, ಸುಮಾರು 60 ಲಕ್ಷ ಮೌಲ್ಯದ್ದಾಗಿರುತ್ತದೆ. ಈ ಪೈಕಿ ರಾಜ್ಯದ ಅಪೆಕ್ಸ್ ಬ್ಯಾಂಕಿನಲ್ಲಿ ನಾನು 2 ವರ್ಷದ ಹಿಂದೆಯೇ 35 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಮೊನ್ನೆ ಮೊನ್ನೆಯವರೆಗೂ ನನ್ನ ಸಂಬಳ ಮತ್ತು ಗೌರವಧನದ ಮೂಲಕ ಸಾಲವನ್ನು ಚುಕ್ತಾ ಮಾಡಿರುತ್ತೇನೆ. ಸದ್ರಿ ಹಣವನ್ನು ನನ್ನ ಈಗಿನ ವಾಸ್ತವ್ಯದ ಮನೆಯನ್ನು ಕಟ್ಟಲು ಬಳಸಿರುತ್ತೇನೆ. ಮತ್ತು ಕಡಿಮೆಯಾದ ಮೊತ್ತಕ್ಕೆ ಎಸ್.ಬಿ.ಐ. ಬ್ರಹ್ಮಾವರ, ವಾರಂಬಳ್ಳಿ ಶಾಖೆಯಲ್ಲಿ 40 ಲಕ್ಷ ರೂಪಾಯಿ ಸಾಲದ ಮಂಜೂರಾತಿಗಾಗಿ ದಸ್ತಾವೇಜನ್ನು ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದ್ದು, ಪ್ರಥಮ ಕಂತು ಮಂಜೂರಾಗುವ ಹಂತದಲ್ಲಿದೆ. ಇದನ್ನು ನನ್ನ ಆದಾಯ ಮತ್ತು ಮಗನ ಆದಾಯ ಸೇರಿದಂತೆ ನನ್ನ ವಿವೇಚನೆಯ ಪ್ರಕಾರ ನನ್ನ ಒಟ್ಟು ಆದಾಯದ ವ್ಯಾಪ್ತಿಯಲ್ಲಿ ಮತ್ತು ಕುಟುಂಬದ ನಿರ್ವಹಣೆಗಾಗಿ ಈ ವಾಸ್ತವ್ಯದ ಮನೆಯನ್ನು ಕಟ್ಟಿಸಿರುತ್ತೇನೆ.

ಪ್ರಚಲಿತ ದಿನದಲ್ಲಿ ರಾಜಕಾರಣದಲ್ಲಿ ಸಚಿವ ಸಂಪುಟದ ವಿಸ್ತರಣೆಯೂ ಸೇರಿದಂತೆ ಮಹತ್ತರ ವಿದ್ಯಮಾನಗಳು ನಡೆಯುವ ಹಿನ್ನಲೆಯಲ್ಲಿ ಒಂದಷ್ಟು ಮಂದಿ ನನ್ನ ಸಾರ್ವಜನಿಕ ಜೀವನವನ್ನು ವಿರೋಧಿಸುವವರು 13 ಸೆಂಟ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಮನೆ 6 ಕೋಟಿ ಎಂದು ಮತ್ತು ಸರಳ ಸಜ್ಜನರಾದವರು 6 ಕೋಟಿ ವೆಚ್ಚದ ಗುಡಿಸಲನ್ನು ಕಟ್ಟಿಸುತ್ತಿದ್ದಾರೆಂದು ವ್ಯಂಗವಾಡಿದ್ದಾರೆ.

 ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಮಹತ್ತರವಾದ ಸ್ಥಾನವನ್ನು ಕೊಡುತ್ತಾ ಮತ್ತು ನೀತಿ ನಿಯಮಗಳನ್ನು ಗೌರವಿಸಿದವನು ನಾನು. ಆದಾಗ್ಯೂ, ಈ ಅಪಪ್ರಚಾರಕ್ಕೆ ಒಂದು ಅಂತಿಮ ವಿದಾಯ ಹೇಳಲು ತಮಗೆ ಈ ಮನವಿ ಸಲ್ಲಿಸುತ್ತಿದ್ದೇನೆ. ತಾವು ನನ್ನ ಮನವಿಯನ್ನು ಕೈಗೆತ್ತಿಕೊಂಡು ನನ್ನ ಶಾಸಕತ್ವದ ಆರಂಭದಿಂದ 3 ಬಾರಿ ಕ್ಯಾಬಿನೆಟ್ ದರ್ಜೆ ಒಳಗೊಂಡಂತೆ ನೀಡುವ ಗೌರವಧನ, ಸಂಬಳ ಇನ್ನಿತರ ಸರ್ಕಾರದ ಆರ್ಥಿಕ ನೆರವು ಮತ್ತು ಸವಲತ್ತು ಸೇರಿದಂತೆ, ನನ್ನ ಮಗನ ಉದ್ದಿಮೆ ಆದಾಯವನ್ನೂ ಪರಿಗಣಿಸಿ ನನ್ನಲ್ಲಿರುವ ಒಟ್ಟು ಆದಾಯದ ಮತ್ತು ನಾನು ನಿರ್ಮಿಸುತ್ತಿರುವ ವಾಸ್ತವ್ಯದ ಮನೆಯನ್ನು ಪರಿಶೀಲಿಸಿ ನನ್ನ ಆದಾಯಕ್ಕಿಂತ ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸೇರಿದಂತೆ, ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಮತ್ತು ನನ್ನ ಆದಾಯದ ವ್ಯಾಪ್ತಿಯಲ್ಲಿಯೇ ನನ್ನ ವಾಸ್ತವ್ಯದ ಮನೆ ನಿರ್ಮಾಣವಾಗಿದ್ದರೆ ನನ್ನ ಮೇಲೆ ವೃಥಾ ಆರೋಪ ಮಾಡಿ, ಸಾರ್ವಜನಿಕ ಜೀವನದಲ್ಲಿರುವ ನನಗೆ ಇರಿಸುಮುರಿಸು ತರುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರಿದ್ದೇನೆ.

ನನಗಿರುವ ಒಟ್ಟು ಅಂಕಿ ಅಂಶಗಳ ಪ್ರಕಾರ ಯಾವ ಕಾರಣಕ್ಕೂ 1 ರೂಪಾಯಿ ಕೂಡಾ ನನ್ನ ಆದಾಯಕ್ಕಿಂತ ಹೆಚ್ಚು ಖರ್ಚಾಗಿಲ್ಲ ಎಂಬುದನ್ನು ತಮ್ಮ ಅವಗಾಹನೆಗೆ ಆತೀ ಗೌರವದಿಂದ ಸಲ್ಲಿಸಿರುತ್ತೇನೆ. ಈ ಪತ್ರದೊಂದಿಗೆ ತಮ್ಮ ಕಛೇರಿಗೆ ಸಲ್ಲಿಸಿರುವ 2020-21 ನೇ ಸಾಲಿಗೆ ಸಂಬಂಧಪಟ್ಟಂತೆ ಆಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ ನಿಯಮ-7ರಡಿ ತಮಗೆ ಸಲ್ಲಿಸಿರುವ ಮಾಹಿತಿಯನ್ನೂ ಸಹಾ ಲಗೀಕರಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿಯವರು ಕೋಟದಲ್ಲಿ ರೂ. 6 ಕೋಟಿ ಮೌಲ್ಯದ ಮನೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು.

Read These Next

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...

ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಪರಿಶೀಲನೆ.

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ...

ಭಾರತ ವಿಶ್ವಕ್ಕೆ ಸಿರಿ ಧಾನ್ಯ ರಫ್ತು ಮಾಡುವ ಹಬ್ ಆಗಲಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಮುಂದಿನ ಎರಡು ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ...

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...